

ಪಡುಬಿದ್ರಿ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಕುರಿತಂತೆ ರಚಿಸಿರುವ ಕಾರ್ಯಪಡೆಯಿಂದ ಆಮೂಲಾಗ್ರ ವರದಿ ಸಿದ್ಧಪಡಿಸಲು ಸೂಚಿಸಲಾಗಿದ್ದು, ಅದನ್ನು ಆಧರಿಸಿ ಈ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಕಾಪು ತಾಲೂಕಿನ ಬೆಳಪು ಆಕ್ಸಿಜನ್ ಉತ್ಪಾದನಾ ಘಟಕ ಹಾಗೂ ನಂದಿಕೂರು ಕೈಗಾರಿಕಾ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿದರು.
ಉಡುಪಿ ಜಿಲ್ಲೆಯಲ್ಲೂ ಕೈಗಾರಿಕೆಯನ್ನು ಪ್ರೋತ್ಸಾಹಿಸಿ, ಬೆಳೆಸಲು ವಿಶೇಷ ಮುತುವರ್ಜಿ ವಹಿಸಲಾಗುವುದು. ಕೈಗಾರಿಕೆಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಕುಂಜೆಯಲ್ಲಿ 800 ಎಕರೆ ಹಾಗೂ ಕಾಪು ತಾಲೂಕಿನ ಮೂಳೂರಿನಲ್ಲಿ 250 ಎಕರೆ ಜಮೀನು ಸ್ವಾಧೀನಕ್ಕೆ ಪ್ರಸ್ತಾವನೆ ಬಂದಿದ್ದು, ಶೀಘ್ರ ಆ ಬಗ್ಗೆ ತೀರ್ಮಾನಿಸಲಾಗುವುದು. ಬೆಂಗಳೂರು ಬಿಟ್ಟು ಹೊರ ಜಿಲ್ಲೆಗಳಲ್ಲಿ ಕೈಗಾರಿಕೆ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಟಯರ್ 2, ಟಯರ್ 3 ಯೋಜನೆಯಡಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮಂಗಳೂರು, ಯಾದಗಿರಿ, ಕೊಪ್ಪಳ, ಬೆಳಗಾವಿ ಮೊದಲಾದ ಕಡೆಗಳಲ್ಲಿ ಹೊಸದಾಗಿ ಬೃಹತ್ ಕೈಗಾರಿಕೆಗಳು ಆರಂಭಗೊಳ್ಳುತ್ತಿವೆ ಎಂದರು.
ಕರೊನಾದಿಂದಾಗಿ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಆದರೂ ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಉತ್ತಮವಾಗಿದೆ. ಹೊಸ ಕೈಗಾರಿಕೆಗಳನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ 24*7 ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ನೂತನ ಕೈಗಾರಿಕಾ ನೀತಿಯಂತೆ ಕೈಗಾರಿಕೆಗಳನ್ನು ನಿರ್ಮಿಸಲು ಅಗತ್ಯ ಇರುವ ಪರವಾನಗಿಯನ್ನು ಸುಲಭವಾಗಿ ದೊರಕಿಸಿಕೊಡಲು ವ್ಯವಸ್ಥೆ ಮಾಡಲಾಗುವುದು. ಏಕಗವಾಕ್ಷಿ ಪದ್ಧತಿಯಲ್ಲಿ ಎಲ್ಲ ವ್ಯವಸ್ಥೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ವಿವರಿಸಿದರು.
ಶಾಸಕರಾದ ಲಾಲಾಜಿ ಆರ್. ಮೆಂಡನ್, ಕೆ.ರಘುಪತಿ ಭಟ್, ಕೆಐಎಡಿಬಿ ಅಧಿಕಾರಿಗಳಾದ ಗಣಪತಿ, ಜನಾರ್ದನ ನಾಯಕ್, ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕೃಷ್ಣರಾಜ್ ಕೊಡಂಚ, ನಟರಾಜ್, ಗುರ್ಮೆ ಸುರೇಶ್ ಶೆಟ್ಟಿ, ಶಿಲ್ಪಾ ಜಿ. ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಸ್ಥಳೀಯರಿಗೆ ಉದ್ಯೋಗಕ್ಕೆ ಬದ್ಧ
ಸ್ಥಳೀಯವಾಗಿ ಸ್ಥಾಪನೆಗೊಳ್ಳುವ ಬೃಹತ್ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ. ಉದ್ದಿಮೆಗೆ ಪರವಾನಗಿ ನೀಡುವಾಗ ಸಂಬಂಧಪಟ್ಟ ಉದ್ದಿಮೆದಾರರಿಗೆ ಕ್ಲಾಸ್-1, ಕ್ಲಾಸ್-2 ಉದ್ಯೋಗದಲ್ಲಿ ಶೇ.80ರಷ್ಟು ಮತ್ತು ಕ್ಲಾಸ್-3, ಕ್ಲಾಸ್-4 ಉದ್ಯೋಗಗಳನ್ನು ಶೇ.100ರಷ್ಟು ಸ್ಥಳೀಯರಿಗೆ ನೀಡಲು ಒಪ್ಪಂದದಲ್ಲೇ ಸೂಚನೆ ನೀಡಲಾಗುತ್ತಿದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಕೈಗಾರಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಮಗ್ರ ವರದಿಗೆ ಸೂಚನೆ
ಪಡುಬಿದ್ರಿ ವ್ಯಾಪ್ತಿಯ ಸುಜ್ಲಾನ್ ಹಾಗೂ ಎಲ್ಲೂರು ವ್ಯಾಪ್ತಿಯ ಯುಪಿಸಿಎಲ್ ಯೋಜನೆಗಳಿಂದ ಆಗಿರುವ ಸಮಸ್ಯೆಗಳ ಬಗ್ಗೆ ಹಾಗೂ ಕೈಗಾರಿಕೆಗಳ ತೆರಿಗೆ ಪಾವತಿ ಕುರಿತಂತೆ ಶೀಘ್ರ ಸಮಗ್ರ ವರದಿ ಸಲ್ಲಿಸುವಂತೆ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ಸಚಿವ ಶೆಟ್ಟರ್ ಸೂಚನೆ ನೀಡಿದರು. ವರದಿ ಆಧರಿಸಿ ಅವರಿಗೆ ಎಚ್ಚರಿಕೆ ನೀಡುವ ಇಲ್ಲವೇ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಚರ್ಚಿಸಿ ತೀರ್ಮಾನಿಸಲಾಗುವುದು. ಕೈಗಾರಿಕಾ ಘಟಕಗಳಿಂದ ಗ್ರಾಮ ಪಂಚಾಯಿತಿಗಳಿಗೆ ಬಾಕಿ ಇರುವ ತೆರಿಗೆ ಪಾವತಿ ಬಗ್ಗೆ ಶೀಘ್ರದಲ್ಲಿ ಕೈಗಾರಿಕಾ, ನಗರಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯೊಂದಿಗೆ ಜಂಟಿ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಕೈಗಾರಿಕೆಗಳಿಗೆ ನೀಡಿರುವ ಭೂಮಿಗಳ ದರದಲ್ಲಿನ ಹೆಚ್ಚಳ ಕುರಿತಂತೆ ಪರಿಶೀಲಿಸಲಾಗುವುದು ಅದನ್ನು ಮೀರಿ ಅಧಿಕಾರಿಗಳು ಹೆಚ್ಚಳ ಮಾಡಿದಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.