ಯಕ್ಷಕಲಾವಿದರಿಂದ ಕರಾವಳಿ ಸೊಗಡು ಪ್ರಸಿದ್ಧಿ

gaurava
ವೀರ ಚಂದ್ರಹಾಸ ಚಲನಚಿತ್ರದ ಬಿಡುಗಡೆ ಪೂರ್ವಭಾವಿಯಾಗಿ ಯಕ್ಷಗಾನ ಕಲಾವಿದರನ್ನು ಗೌರವಿಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಕರಾವಳಿಯ ಅದೆಷ್ಟೋ ಪ್ರತಿಭೆಗಳು ತಮ್ಮ ಜೀವನ ರೂಪಿಸಿಕೊಳ್ಳುವುದರ ಜತೆಗೆ ತಮ್ಮತನ ತೋರ್ಪಡಿಸುವ ಸಾಹಸ ಮಾಡುತ್ತಿದ್ದಾರೆ. ರವಿ ಬಸ್ರೂರ್ ಇದಕ್ಕೆ ಉದಾಹರಣೆಯಾಗಿದ್ದು, ಯಕ್ಷಗಾನದ ಸೊಗಡನ್ನು ಸಿನಿಮಾ ಮೂಲಕ ತರುತ್ತಿದ್ದಾರೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ರವಿ ಬಸ್ರೂರ್ ನಿರ್ದೇಶನದ ವೀರ ಚಂದ್ರಹಾಸ ಚಲನಚಿತ್ರ ಬಿಡುಗಡೆ ಪೂರ್ವಭಾವಿಯಾಗಿ ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ವಠಾರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರನ್ನು ಗೌರವಿಸಿ ಮಾತನಾಡಿದರು.

ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ಪ್ರಪಂಚದ ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿ ಕರಾವಳಿ ಪರಂಪರೆಯ ಪ್ರತೀಕ ಯಕ್ಷಗಾನವನ್ನು ಬೆಳ್ಳಿ ಪರದೆ ಮೇಲೆ ಪರಿಚಯಸಲಾಗುತ್ತಿದ್ದು, ಯಕ್ಷಕಲೆಯು ಜಾಗತಿಕ ವೇದಿಕೆಗೆ ಪ್ರವೇಶಿಸಲಿದೆ. ಈ ಚಲನಚಿತ್ರ ನನ್ನ ದಶಕದ ಹಿಂದಿನ ಕನಸು ಎಂದರು.

ಕಲಾವಿದರಾದ ಭೋಜರಾಜ ಶೆಟ್ಟಿ, ಉಳ್ಳೂರು ನಾರಾಯಣ ನಾಯಕ್, ಭಾಗವತ ಸುರೇಶ ಸೆಟ್ಟಿ ಶಂಕರನಾರಾಯಣ, ಸುಧಾಕರ ಕೊಠಾರಿ, ವಿಶ್ವನಾಥ ಆಚಾರ್ಯ, ದಿನೇಶ ಶೆಟ್ಟಿ, ಆಜ್ರಿ ಗೋಪಾಲ ಗಾಣಿಗ, ಶಿವಮೂರ್ತಿ ತಾರಿಕೊಡ್ಲು, ಪ್ರವೀಣ ಗಾಣಿಗ ಕೆಮ್ಮಣ್ಣು, ಕೃಷ್ಣ ಗಾಣಿಗ, ಉದಯ ಹೆಗಡೆ, ಸದಾಶಿವ ಶೆಟ್ಟಿ ಯಡಮೊಗ್ಗೆ, ನಾಗರಾಜ ಶೆಟ್ಟಿ ನೈಕಂಬ್ಳಿ, ರಾಜೇಶ ಕೊಂಡಳ್ಳಿ ಗೌರವಿಸಲಾಯಿತು.

ಆನೆಗುಡ್ಡೆ ದೇವಸ್ಥಾನದ ಆನುವಂಶಿಕ ಮೊಕ್ತೇಸರ ರಮಣ ಉಪಾಧ್ಯಾಯ, ಹಟ್ಟಿಯಂಗಡಿ ಮೇಳದ ಯಜಮಾನ ರಂಜಿತ್ ಶೆಟ್ಟಿ ವಕ್ವಾಡಿ, ಸದಾಶಿವ ಅಮೀನ್ ಹಾಗೂ ದೀಪಕ ಶೆಟ್ಟಿ ಬಾರ್ಕೂರು ಶುಭಾಶಂಸನೆಗೈದರು. ವಿ.ಜೆ.ಪ್ರಸನ್ನ ಕಾರ್ಯಕ್ರಮ ನಿರ್ವಹಿಸಿದರು.

ಬೇಡಿಕೆ ಕುರಿತು ಸಿಎಂಗೆ ಮನವಿ

ವೀರ ಚಂದ್ರಹಾಸ ಚಿತ್ರವನ್ನು ತೆರಿಗೆ ರಹಿತವಾಗಿಸಬೇಕು. ಯಕ್ಷಗಾನವಿಲ್ಲದ ಸಂದರ್ಭ ಕಲಾವಿದರಿಗೆ ಸರ್ಕಾರದ ಸವಲತ್ತು ದೊರೆಯಬೇಕು. ಯಕ್ಷಗಾನ ಅಧ್ಯಯನ/ ತರಬೇತಿ ಪೀಠ ರಚನೆ ಮಾಡಬೇಕು. ಜತೆಗೆ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಶಿಕ್ಷಣಕ್ಕೆ ಅವಕಾಶ ಕಲ್ಪಿಸುವಂತೆ ಯಕ್ಷಗಾನ ಕಲಾವಿದರ ಪರವಾಗಿ ಸಿಎಂಗೆ ಮನವಿ ಸಲ್ಲಿಸಲಾಗಿದೆ. ಏ.18ರಂದು ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದು ರವಿ ಬಸ್ರೂರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net