

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು ಕಳೆದ 11 ದಿನಗಳಿಂದ ತೊಂದರೆಯಲ್ಲಿ ಸಿಲುಕಿದ್ದ 31 ಮೀನುಗಾರರನ್ನು ಕೋಸ್ಟ್‌ಗಾರ್ಡ್ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ.
ಗೋವಾ ಮೂಲದ ಐಎಫ್‌ಬಿ ಸಂತ್ ಆ್ಯಂಟನ್ -1 ಮೀನುಗಾರಿಕಾ ದೋಣಿ ಸ್ಟೀರಿಂಗ್ ಗೇರ್ ವೈಫಲ್ಯಕ್ಕೊಳಗಾಗಿ ನವಮಂಗಳೂರಿನಿಂದ ಸುಮಾರು 100 ನಾಟಿಕಲ್ ಮೈಲ್ ದೂರದಲ್ಲಿ 11 ದಿನಗಳಿಂದ ತೇಲಾಡುತ್ತಿತ್ತು. ಅ.24ರಂದು ಭಾರತೀಯ ಕೋಸ್ಟ್‌ಗಾರ್ಡ್ ಮಾಹಿತಿ ಪಡೆದು ಕಾರ್ಯಾಚರಣೆ ಆರಂಭಿಸಿತ್ತು. ಗಸ್ತು ತಿರುಗುತ್ತಿದ್ದ ಕಸ್ತೂರ್ಬಾ ಗಾಂಧಿಯನ್ನು ತಕ್ಷಣ ಮೀನುಗಾರಿಕಾ ದೋಣಿ ಕೊನೇಗೆ ಸಂಪರ್ಕ ಕಳೆದುಕೊಂಡ ಸ್ಥಳಕ್ಕೆ ಕಾರ್ಯಾಚರಣೆಗೆ ಕಳುಹಿಸಲಾಯಿತು. ಅಷ್ಟರಲ್ಲಿ ಕೊಚ್ಚಿಯಿಂದ ಕೋಸ್ಟ್‌ಗಾರ್ಡ್ ಡೋರ್ನಿಯರ್ ವಿಮಾನವು ನಾಪತ್ತೆಯಾದ ದೋಣಿಯನ್ನು ಪತ್ತೆ ಮಾಡಲು ವೈಮಾನಿಕ ಶೋಧನೆಗೆ ಆರಂಭಿಸಿತು. ಪ್ರತಿಕೂಲ ಹವಾಮಾನದ ನಡುವೆ ಕಾರ್ಯಾಚರಣೆ ಮುಂದುವರಿಸಲಾಯಿತು.
ಇಂಟಿಗ್ರೇಟೆಡ್ ಆಪರೇಷನ್ ಸೆಂಟರ್ ಮತ್ತು ನೈಜ ಸಮಯದ ಹವಾಮಾನ ದತ್ತಾಂಶವನ್ನು ಹತೋಟಿಯಲ್ಲಿಟ್ಟುಕೊಂಡು, ಕೋಸ್ಟ್ ಗಾರ್ಡ್ ಸಂಭವನೀಯ ದಿಕ್ಕನ್ನು ರೂಪಿಸಿ ಹಡಗನ್ನು ಆ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಯಿತು. ಅ.25ರಂದು ಡೋರ್ನಿಯರ್ ವಿಮಾನವು ಮೀನುಗಾರಿಕಾ ದೋಣಿ ತೇಲುತ್ತಿರುವುದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಯಿತು. ತಕ್ಷಣ ಕಸ್ತೂರ್ಬಾ ಗಾಂಧಿ ಸ್ಥಳಕ್ಕೆ ತಲುಪಿ ಅದರಲ್ಲಿದ್ದ ಎಲ್ಲಾ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸಿಯಾಯಿತು. ದೋಣಿಯ ಸ್ಟೀರಿಂಗ್ ಸಿಸ್ಟಮ್‌ನ ಆನ್-ಸೈಟ್ ದುರಸ್ತಿಗೊಳಿಸಿ, ಹೊನ್ನಾವರದ ಮೀನುಗಾರಿಕಾ ಬಂದರಿಗೆ ಎಳೆದುಕೊಂಡು ಬರಲಾಯಿತು. 31 ಮೀನುಗಾರರು ಯಾವುದೇ ಅಪಾಯವಿಲ್ಲದೆ ದಡ ಸೇರಿರುವುದನ್ನು ಕೋಸ್ಟ್‌ಗಾರ್ಡ್ ದೃಢಪಡಿಸಿದೆ.
ಪ್ರತಿಕೂಲ ಹವಾಮಾನದ ಸವಾಲಿನ ಸಂದರ್ಭದಲ್ಲೂ ಭಾರತೀಯ ಕೋಸ್ಟ್‌ಗಾರ್ಡ್ ತ್ವರಿತ ಮತ್ತು ಸಂಘಟಿತವಾಗಿ ಕಾರ್ಯಾಚರಿಸಿ ಜೀವಗಳನ್ನು ರಕ್ಷಿಸುವ ಮತ್ತು ಸಮುದ್ರದಲ್ಲಿ ಸುರಕ್ಷತೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಸಾಕ್ಷಿಯಾಯಿತು.