ಪಡುಬಿದ್ರಿ ಬಳಿ ಬಂಡೆಗಳ ನಡುವೆ ಸಿಲುಕಿರುವ ಟಗ್‌ ರಕ್ಷಣೆಗೆ ಕೋಸ್ಟ್‌ಗಾರ್ಡ್‌ ಸರ್ವಪ್ರಯತ್ನ

Published on

ಮಂಗಳೂರು: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದ್ದ ಮತ್ತೊಂದು ಟಗ್‌ ಕೋರಮಂಡಲ್‌ನ್ನು ರಕ್ಷಿಸುವ ಕಾರ್ಯಾಚರಣೆ ಭಾರಿ ತೂಫಾನ್‌ ನಡುವೆ ಭಾನುವಾರ ಮುಂದುವರಿದಿದೆ.
ಈ ಟಗ್‌ನ್ನು ಎಂಆರ್‌ಪಿಎಲ್‌ನ ತೇಲು ಜೆಟ್ಟಿ(ಎಸ್‌ಪಿಎಂ) ನಿರ್ವಹಣೆಗಾಗಿ ಹಿಂದಿನ ವರ್ಷ ಗುತ್ತಿಗೆಗೆ ಪಡೆಯಲಾಗಿದ್ದು ಅದರ ಗುತ್ತಿಗೆ ಕಳೆದ ಡಿಸೆಂಬರ್‌ಗೇ ಪೂರ್ಣಗೊಂಡಿತ್ತು. ಆದರೂ ಸಿಬ್ಬಂದಿಗಳಿಗೆ ಕೋವಿಡ್‌ ಇದ್ದ ಕಾರಣ ಬಂದರಿನ ಹೊರವಲಯದ ಔಟರ್‌ ಆಂಕರೇಜ್‌ನಲ್ಲಿ ಈ ಟಗ್‌ ನಿಂತಿತ್ತು. ಈ ಟಗ್‌ನ ಮಾಲೀಕ ಸಂಸ್ಥೆ ಅಟ್ಲಾಂಟಿಕ್‌ ಶಿಪ್ಪಿಂಗ್‌ನಿಂದ ಸೂಚನೆ ಇಲ್ಲದ ಕಾರಣ ಅದೇ ಸ್ಥಿತಿಯಲ್ಲಿತ್ತು.
ಸದ್ಯ ಚಂಡಮಾರುತದಿಂದಾಗಿ ಭಾರೀ ಗಾತ್ರದ ಅಲೆಗಳೆದ್ದು ಇದರ ಇಂಜಿನ್‌ ರೂಮಿಗೆ ನೀರು ನುಗ್ಗಿದ್ದು ಇಂಜಿನ್‌ನಲ್ಲಿ ಸಮಸ್ಯೆ ಉಂಟಾಗಿದೆ. ಸೈಕ್ಲೋನ್‌ ಹೊಡೆತಕ್ಕೆ ಇದು ಉತ್ತರಕ್ಕೆ ಹೋಗಿದ್ದು ಪಡುಬಿದ್ರೆ ಬಳಿಯ ಸಮುದ್ರದಲ್ಲಿ ಬಂಡೆಗಳ ನಡುವೆ ಸಿಲುಕಿಕೊಂಡಿದ್ದು ಸದ್ಯಕ್ಕೆ ದೊಡ್ಡ ಅಪಾಯವಿಲ್ಲ ಎಂದು ಎನ್‌ಎಂಪಿಟಿ ಬಂದರು ಮಂಡಳಿ ಅಧ್ಯಕ್ಷ ವೆಂಕಟರಮಣ ಅಕ್ಕರಾಜು ವಿಜಯವಾಣಿಗೆ ತಿಳಿಸಿದ್ದಾರೆ.
ಕೋಸ್ಟ್‌ಗಾರ್ಡ್‌ ಸಿಬ್ಬಂದಿಗಳು ಇದರ ರಕ್ಷಣೆಗಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ ಭಾರೀ ಗಾತ್ರದ ಅಲೆಗಳಿಂದಾಗಿ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಕೋರಮಂಡಲ್‌ ಟಗ್‌ನಲ್ಲಿ 12 ಮಂದಿ ಇದ್ದಾರೆ ಎನ್ನಲಾಗಿದೆ, ಅಧಿಕೃತವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಮೂವರ ರಕ್ಷಣೆ
ಈ ನಡುವೆ ಶನಿವಾರ ಅಲೆಗಳ ಹೊಡೆತದಿಂದಾಗಿ ಸಮುದ್ರದಲ್ಲಿ ಭಗ್ನಗೊಂಡಿದ್ದ ಎಸ್‌ಪಿಎಂ ನಿರ್ವಹಣಾ ಟಗ್‌ ಅಲಯನ್ಸ್‌ನ 8 ಸಿಬ್ಬಂದಿಗಳ ಪೈಕಿ ಒಟ್ಟು ಮೂರು ಮಂದಿ ಸುರಕ್ಷಿತವಾಗಿ ದಡಸೇರಿದ್ದಾರೆ. ಇಬ್ಬರು ಶನಿವಾರ ಸಂಜೆಯೇ ಉಡುಪಿ ಮಲ್ಪೆಯ ಮಟ್ಟು ಕೊಪ್ಪಳ ಬಳಿ ದಡ ಸೇರಿದ್ದರೆ ಒಬ್ಬ ರಾತ್ರಿ ದಡಕ್ಕೆ ಬಂದಿದ್ದಾನೆ. ಲೈಫ್‌ ಜಾಕೆಟ್‌ನಿಂದಾಗಿ ಇವರು ಬದುಕುಳಿದಿದ್ದಾರೆ. ಒಬ್ಬನ ಮೃತದೇಹವೂ ಪತ್ತೆಯಾಗಿದ್ದು ಇನ್ನೂ ನಾಲ್ವರು ನಾಪತ್ತೆಯಾಗಿದ್ದಾರೆ.
ಅಬ್ಬರಿಸುತ್ತಿದೆ ಕಡಲು
ಶನಿವಾರಕ್ಕೆ ಹೋಲಿಸಿದರೆ ಚಂಡಮಾರುತದ ತೀವ್ರತೆ ರಾಜ್ಯ ಕರಾವಳಿಯಲ್ಲಿ ತುಸು ತಗ್ಗಿದೆ. ಚಂಡಮಾರುತವು ಸದ್ಯ ಗೋವಾ-ಮಹಾರಾಷ್ಟ್ರ ಕರಾವಳಿಗೆ ಸಮೀಪದಲ್ಲಿ ಗುಜರಾತ್‌ ಕಡೆಗೆ ಸಾಗುತ್ತಿರುವುದರಿಂದ ಕರ್ನಾಟಕ, ಕೇರಳದಲ್ಲಿ ಅದರ ಪ್ರಭಾವ ಇಳಿಮುಖವಾಗುತ್ತಿದೆ. ಆದರೂ ಸಮುದ್ರ ಎಂದಿಗಿಂತ ಹೆಚ್ಚು ಅಬ್ಬರಿಸುತ್ತಿದ್ದು ಕಡಲಿಗೆ ಮೀನುಗಾರರು ಇಳಿಯಬಾರದು ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net