

ಮಂಗಳೂರು: ಕೇರಳದ ಪಾಲಾಗುವ ಎಲ್ಲ ಸಾಧ್ಯತೆ ಇದ್ದ ದೇಶದ ಮೊದಲ ಕೋಸ್ಟ್‌ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲೇ ಸ್ಥಾಪನೆಯಾಗುವುದು ಖಚಿತಗೊಂಡಿದೆ.
ಈ ಸಂಬಂಧ ರಾಜ್ಯ ಸರ್ಕಾರ ದೃಢವಾಗಿ ಮೊದಲ ಹೆಜ್ಜೆ ಇರಿಸಿದ್ದು, ಮಂಗಳೂರಿನ ಕೆಂಜಾರಿನಲ್ಲಿ 158 ಎಕರೆ ಭೂಮಿಯನ್ನು ಅಕಾಡೆಮಿ ಸ್ಥಾಪನೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ರಕ್ಷಣಾ ಸಚಿವಾಲಯಕ್ಕೆ ಹಸ್ತಾಂತರಿಸಿದೆ.
ಭಾರತೀಯ ತಟರಕ್ಷಣಾ ಪಡೆಯ ತರಬೇತಿ ಅಕಾಡೆಮಿ (ಐಸಿಜಿಎ)ಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸಕ್ತಿ ವಹಿಸಿದ್ದು, ಶೀಘ್ರ ಈ ಕುರಿತ ಪ್ರಕ್ರಿಯೆಗಳು ಆರಂಭವಾಗಲಿರುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ.
ಈ ಮೂಲಕ, ಕೇರಳದ ಕಣ್ಣೂರು ಜಿಲ್ಲೆಯ ಆಯಿಕಲ್ ಸಮೀಪದ ಇರಿನಾವು ಸಮುದ್ರ ತೀರದ ವಳಪಟ್ಟಣಂ ನದಿ ಬಳಿ ಸ್ಥಾಪನೆಯಾಗಬೇಕಿದ್ದ ತರಬೇತಿ ಅಕಾಡೆಮಿ ರಾಜ್ಯಕ್ಕೆ ದಕ್ಕಿದಂತಾಗಿದೆ. ಕಳೆದ ಅವಧಿಯ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಭಾರತೀಯ ತಟರಕ್ಷಣಾ ಪಡೆಯ ಡೈರೆಕ್ಟರ್ ಜನರಲ್ ಜತೆ 2017ರ ಡಿಸೆಂಬರ್ ತಿಂಗಳಲ್ಲಿ ಮಂಗಳೂರಿನ ಕೆಂಜಾರಿಗೆ ಭೇಟಿ ನೀಡಿ, ಐಸಿಜಿಎ ನಿರ್ಮಾಣಕ್ಕೆ ಉದ್ದೇಶಿಸಲಾಗಿರುವ ಪ್ರದೇಶವನ್ನು ಪರಿಶೀಲಿಸಿದ್ದರು. ಈ ಸಂಬಂಧ ಸಂಸದ ನಳಿನ್‌ಕುಮಾರ್ ಕಟೀಲ್ ರಕ್ಷಣಾ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
1,010 ಕೋಟಿ ರೂ.ವೆಚ್ಚ: ಐಸಿಜಿಎ ಸ್ಥಾಪನೆ ಸುಮಾರು 1,010 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಕರಾವಳಿಯಲ್ಲಿ ಅಕಾಡೆಮಿಗೆ ಪೂರಕವಾದ ಭೌಗೋಳಿಕ ಲಕ್ಷಣಗಳಿರುವುದು ಮತ್ತು ನಗರದ ಪಣಂಬೂರಿನಲ್ಲಿ ಕೋಸ್ಟ್‌ಗಾರ್ಡ್‌ನ ಮೂರನೇ ಜಿಲ್ಲಾ ಪ್ರಧಾನ ಕಚೇರಿ ಇರುವುದು ಹೆಚ್ಚಿನ ಅನುಕೂಲವಾಗಲಿದೆ. ಬಂದರು, ವಿಮಾನ ನಿಲ್ದಾಣವೂ ಹತ್ತಿರದಲ್ಲಿರುವುದು ಅಕಾಡೆಮಿ ಸ್ಥಾಪನೆಗೆ ಸೂಕ್ತ ಸ್ಥಳ ಎನಿಸಿದೆ. ಅಕಾಡೆಮಿಯು ನಗರದ ಬೆಳವಣಿಗೆಗೂ ಪೂರಕವಾಗುವ ನಿರೀಕ್ಷೆಗಳಿವೆ.
ಸದ್ಯ ನೇವಿಯಲ್ಲಿ ತರಬೇತಿ: ರಕ್ಷಣಾ ಪಡೆಯ ಮೂರೂ ದಳಗಳಿಗೆ ಅವುಗಳದ್ದೇ ಆದ ಇಂಡಿಯನ್ ಮಿಲಿಟರಿ ಅಕಾಡೆಮಿ, ನೇವಲ್ ಅಕಾಡೆಮಿ, ಏರ್‌ಫೋರ್ಸ್ ಅಕಾಡೆಮಿ ಇವೆ. ಆದರೆ, 1977ರಲ್ಲಿ ಭಾರತೀಯ ಜಲಪ್ರದೇಶದ ರಕ್ಷಣೆಗಾಗಿ ಸ್ಥಾಪನೆಗೊಂಡ ಕೋಸ್ಟ್‌ಗಾರ್ಡ್‌ಗೆ ಇದುವರೆಗೂ ಪೂರ್ಣ ಪ್ರಮಾಣದ ಸ್ವಂತ ತರಬೇತಿ ಅಕಾಡೆಮಿಯಿಲ್ಲ. ಪ್ರಸಕ್ತ ಕೋಸ್ಟ್‌ಗಾರ್ಡ್‌ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇರಳದ ಕಣ್ಣೂರಿನ ಏಳಿಮಲೆಯಲ್ಲಿರುವ ನೇವಲ್ ಅಕಾಡೆಮಿಯಲ್ಲಿ 22 ವಾರಗಳ ನಿವಾಸಿ ತರಬೇತಿ ಹಾಗೂ ಬಳಿಕ 12 ವಾರಗಳ ಕಾಲ ನೌಕಾ ತರಬೇತಿ ನೀಡಲಾಗುತ್ತಿದೆ. ಕೊಚ್ಚಿನ್‌ನಲ್ಲಿರುವ ಕೋಸ್ಟ್‌ಗಾರ್ಡ್‌ನವರ ತಾತ್ಕಾಲಿಕ ತರಬೇತಿ ಕೇಂದ್ರದಲ್ಲೂ ತರಬೇತಿ ನೀಡಲಾಗುತ್ತದೆ.
ವಿಸ್ತೃತ ತರಬೇತಿ ಅವಕಾಶ
ಭಾರತದಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚುತ್ತಿರುವುದು, ಅದರಲ್ಲೂ ಮುಂಬೈನಲ್ಲಿ ನಡೆದ ಪಾಕ್‌ಪ್ರೇರಿತ ಹತ್ಯಾಕಾಂಡದ ಬಳಿಕ ಕೋಸ್ಟ್‌ಗಾರ್ಡ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಉದ್ದೇಶಿಸಿದ್ದು, ಅದರ ಭಾಗವಾಗಿ ಪೂರ್ಣರೂಪದ ತರಬೇತಿ ಅಕಾಡೆಮಿ ಯೋಜಿಸಲಾಗಿದೆ. ಮಂಗಳೂರಿನಲ್ಲಿ ಸ್ಥಾಪನೆಯಾಗುವ ಅಕಾಡೆಮಿಯಲ್ಲಿ ಅಭ್ಯರ್ಥಿಗಳಿಗೆ ನೌಕಾ ತರಬೇತಿ, ಮಾಲಿನ್ಯ ಸ್ಪಂದನೆ, ಶೋಧ ಮತ್ತು ಪತ್ತೆ, ವಿವಿಧ ರೀತಿಯ ಕಾರ್ಯಾಚರಣೆ, ಸಾಗರೋತ್ತರ ನಿಯಮಾವಳಿಗಳು, ಕಡಲ್ಗಳ್ಳರ ನಿಯಂತ್ರಣ ಇತ್ಯಾದಿ ತರಬೇತಿ ನೀಡಲಾಗುವುದು. ಇದಕ್ಕಾಗಿ ಹಲವು ರೀತಿಯ ನೌಕೆಗಳು, ವಿಮಾನಗಳೂ ಕೂಡ ಬರುವ ನಿರೀಕ್ಷೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.