ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ

bengre new
Published on

ಮಂಗಳೂರು: ಮಂಗಳೂರಿನ ಕರಾವಳಿಗೆ ಹೊಸ ದಿಶೆ ನೀಡುವಂತಹ ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಕೆಂಜಾರಿನಲ್ಲಿ ತಲೆಯೆತ್ತಲಿದ್ದು, ಕೇಂದ್ರ ಸರ್ಕಾರ ಅದಕ್ಕೆ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ. ಆತ್ಮನಿರ್ಭರ ಭಾರತ ಯೋಜನೆಯಡಿಯಲ್ಲಿ ನವಮಂಗಳೂರು ಬಂದರು ಮಂಡಳಿಗೆ 5 ಸಾವಿರ ಕೋಟಿ ರೂ. ಬರಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ನಗರದ ಕಸ್ಬಾ ಬೆಂಗ್ರೆ ಹಳೇ ಬಂದರು ಪ್ರದೇಶದಲ್ಲಿ ಸಾಗರಮಾಲಾ ಯೋಜನೆಯಡಿಯಲ್ಲಿ ಕೋಸ್ಟಲ್ ಬರ್ತ್ ನಿರ್ಮಾಣ ಹಾಗೂ ಡ್ರೆಜ್ಜಿಂಗ್‌ಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೋಸ್ಟ್ ಗಾರ್ಡ್ ಅಕಾಡೆಮಿ ಕೇರಳಕ್ಕೆ ಹೋಗುವುದನ್ನು ಇಲ್ಲಿಗೆ ತಂದಿದ್ದು, ರಾಜ್ಯ ಸರ್ಕಾರವೂ ಜಮೀನು ಒದಗಿಸಿದೆ. ಆತ್ಮನಿರ್ಭರ್ ಯೋಜನೆಯಡಿಯಲ್ಲಿ ತಲಪಾಡಿಯಿಂದ ಕುಂದಾಪುರದವರೆಗೆ ಮೀನುಗಾರಿಕಾ ರಸ್ತೆ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರಕ್ಕೆ ವಿನಂತಿಸಲಾಗಿದ್ದು, ಅನುಮೋದನೆ ಸಿಗಲಿದೆ ಎಂದರು.

ವಾಣಿಜ್ಯ ಚಟುವಟಿಕೆ ಉತ್ತೇಜನ: 65 ಕೋಟಿ ರೂ. ವೆಚ್ಚದ ಕೋಸ್ಟಲ್ ಬರ್ತ್ ನಿರ್ಮಾಣದಿಂದ ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಈ ಯೋಜನೆಯಿಂದ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗದಂತೆ ನೋಡಿಕೊಳ್ಳುವುದು ನಮ್ಮ ಹೊಣೆ ಎಂದು ನಳಿನ್ ಭರವಸೆಯಿತ್ತರು. 30 ವರ್ಷ ಬಳಿಕ ಮೊದಲ ಬಾರಿಗೆ ಬೆಂಗ್ರೆ ಬದಿಯಲ್ಲಿ 7 ಮೀಟರ್ ಡ್ರೆಜ್ಜಿಂಗ್ (29 ಕೋಟಿ ರೂ. ವೆಚ್ಚ) ಮಾಡಲಾಗುತ್ತಿದ್ದು, ಇದರಿಂದ ನೌಕೆಗಳು ಹೆಚ್ಚು ಸರಕಿನೊಂದಿಗೆ ಬರುವುದು ಸಾಧ್ಯವಾಗಲಿದೆ, ಅಲ್ಲದೆ ದೋಣಿಗಳ ದುರಂತ ತಪ್ಪಲಿದೆ ಎಂದರು.

ಸಾಮರ್ಥ್ಯ ಹೆಚ್ಚಳ: ಪ್ರಸ್ತುತ 300 ಟನ್ ಸಾಮರ್ಥ್ಯದ ದೋಣಿಗಳಷ್ಟೇ ಬರುತ್ತಿದ್ದರೆ, ನೂತನ ಬರ್ತ್‌ನಿಂದಾಗಿ 5 ಸಾವಿರ ಟನ್ ಸಾಮರ್ಥ್ಯದ ಹಡಗುಗಳು ಜೆಟ್ಟಿಗೆ ಆಗಮಿಸುವುದು ಸಾಧ್ಯವಾಗಲಿದೆ. ಯಾವುದೇ ಪ್ರದೇಶದಿಂದ ಸರಕು ಸಾಮಗ್ರಿಗಳನ್ನು ಇಲ್ಲಿಗೆ ತರಬಹುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಹಳೇ ಬಂದರಿನ ಬೆಂಗ್ರೆ ಬದಿ ಡ್ರೆಜ್ಜಿಂಗ್‌ನಿಂದ ಸಿಗುವ 11 ಲಕ್ಷ ಟನ್ ಮರಳನ್ನು ಸೋಮೇಶ್ವರದಲ್ಲಿ ಸಮುದ್ರ ಕೊರೆತದಿಂದ ಹಾನಿಗೀಡಾದ ಪ್ರದೇಶಕ್ಕೆ ಹಾಕಲಾಗುವುದು. ಮುಂದೆ ಬೆಂಗ್ರೆಯ 155 ಎಕರೆ ಪ್ರದೇಶ ಅಭಿವೃದ್ಧಿ ಯೋಜನೆ ಇದೆ. ಬೆಂಗ್ರೆಯನ್ನು ಬಂಗಾರವನ್ನಾಗಿ ಪರಿವರ್ತಿಸುವುದಕ್ಕೆ ಜನರ ಸಹಕಾರ ಬೇಕು ಎಂದು ಹೇಳಿದರು.

ಮೇಯರ್ ದಿವಾಕರ್, ಉಪಮೇಯರ್ ವೇದಾವತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮೊಗವೀರ ಮಹಾಸಭಾ ಅಧ್ಯಕ್ಷ ಚೇತನ್ ಬೆಂಗ್ರೆ, ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ಕಾರ್ಪೊರೇಟರ್‌ಗಳಾದ ಪೂರ್ಣಿಮಾ, ಸುನೀತಾ, ಜಗದೀಶ್ ಶೆಟ್ಟಿ ಬೋಳೂರು, ಮುನೀಬ್ ಬೆಂಗ್ರೆ ಮೊದಲಾದವರಿದ್ದರು.

ಕುಳಾಯಿ ಜೆಟ್ಟಿ ಕಾರ್ಯ ಸುಗಮ: ಕುಳಾಯಿಯಲ್ಲಿ ಮೀನುಗಾರಿಕಾ ಜೆಟ್ಟಿ ಹಾದಿ ಸುಗಮವಾಗುತ್ತಿದೆ. 250 ಕೋಟಿ ರೂ.ನ ಈ ಯೋಜನೆಗೆ ಫೆಬ್ರವರಿಯಲ್ಲಿ ಟೆಂಡರ್ ಆಗಲಿದೆ. ಇದರಿಂದ ಮೀನುಗಾರರ ಸಮಸ್ಯೆಯೂ ಪರಿಹಾರವಾಗಲಿದೆ. ಹೆಜಮಾಡಿಯಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ಸಿಕ್ಕಿದೆ ಎಂದು ನಳಿನ್ ಹೇಳಿದರು.

ಸಂಪೂರ್ಣ ವಾಣಿಜ್ಯ ದಕ್ಕೆ: ಕರಾವಳಿ ಭಾಗದಿಂದ ದೇಶ-ವಿದೇಶಗಳಿಗೆ ವಾಣಿಜ್ಯ ವಹಿವಾಟು ಹೆಚ್ಚಿಸುವ ನಿಟ್ಟಿನಲ್ಲಿ ಕಸಬಾ ಬೆಂಗ್ರೆಯಲ್ಲಿ ಪ್ರತ್ಯೇಕ ದಕ್ಕೆ (ಕೋಸ್ಟಲ್ ಬರ್ತ್) ನಿರ್ಮಾಣವಾಗಲಿದೆ. ಸಾಗರಮಾಲ ಯೋಜನೆಯಡಿ ಕೇಂದ್ರದ 25 ಕೋಟಿ ರೂ. ಮತ್ತು ರಾಜ್ಯ ಸರ್ಕಾರದ 40 ಕೋಟಿ ರೂ. ಸೇರಿ ಒಟ್ಟು 65 ಕೋಟಿ ರೂ. ವೆಚ್ಚದಲ್ಲಿ ಕೋಸ್ಟಲ್ ಬರ್ತ್ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದು ಸಂಪೂರ್ಣ ವಾಣಿಜ್ಯ ದಕ್ಕೆಯಾಗಿರಲಿದೆ.

350 ಮೀ. ಉದ್ದ ಮತ್ತು 7 ಮೀ. ಆಳದ ದಕ್ಕೆ ನಿರ್ಮಾಣ ಗುತ್ತಿಗೆ ಚೆನ್ನೈಯ ಎಂ.ಜೆ ಕನ್‌ಸ್ಟ್ರಕ್ಷನ್ ಪಾಲಾಗಿದ್ದು, ಕಾಮಗಾರಿ ನಡೆಸಲು ನ.21ರಂದು ಕಾರ್ಯಾದೇಶವಾಗಿದೆ. 2023ರ ಡಿಸೆಂಬರ್‌ಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈಗ ದಕ್ಕೆಯಲ್ಲಿ ಲ್ಗುಣಿ ನದಿ 4 ಮೀ. ಆಳವಿದೆ. 7 ಮೀ. ಆಳ ಮಾಡುವುದರಿಂದ ಬೃಹತ್ ನೌಕೆಗಳು ಬರಲಿವೆ. ಈಗ 500 ಟನ್ ಸಾಮರ್ಥ್ಯದ ನೌಕೆ ಬರುತ್ತಿದ್ದರೆ, ಮುಂದೆ ಒಂದು ಸಾವಿರ ಟನ್ ಸಾಮರ್ಥ್ಯದ 100-150 ಮೀ. ಉದ್ದದ ನೌಕೆ ಬರಲು ಅವಕಾಶವಿದೆ. ಹೊಸ ದಕ್ಕೆ ನಿರ್ಮಾಣವಾದರೆ, ದೊಡ್ಡ ಪ್ರಮಾಣದಲ್ಲಿ ಲಕ್ಷದ್ವೀಪ, ಗುಜರಾತ್, ಮಹಾರಾಷ್ಟ್ರ ಸಹಿತ ಇತರ ರಾಜ್ಯಗಳಿಗೂ ಆಮದು-ರ್ತು ಮಾಡಬಹುದು. ಒಂದು ಬಾರಿಗೆ 5-10 ಸಾವಿರ ಟನ್ ಸರಕು ಕಳುಹಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net