

ಮದ್ದೂರು: ಮಂಡ್ಯದಲ್ಲಿ ಸಂಚಾರ ಪೊಲೀಸರು ಬೈಕ್ ಅಡ್ಡಗಟ್ಟಿದ್ದರ ಪರಿಣಾಮ ತಾಲೂಕಿನ ಗೊರವನಹಳ್ಳಿಯ 3 ವರ್ಷದ ಬಾಲಕಿ ರಿತೀಕ್ಷಾ ಮೃತಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಎದುರು ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲೇ ಸೂಕ್ತ ಚಿಕಿತ್ಸೆ ನೀಡಿದ್ದರೆ ಪಾಲಕರು ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವ ಪರಿಸ್ಥಿತಿ ಹಾಗೂ ದುರ್ಘಟನೆ ಸಂಭವಿಸುತ್ತಿರಲಿಲ್ಲ ಎಂದು ಆರೋಪಿಸಿ ಪಟ್ಟಣದ ಆಸ್ಪತ್ರೆಯ ಆಡಳಿತಾಧಿಕಾರಿ ಹಾಗೂ ಮುಖ್ಯ ವೈದ್ಯಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ನ.ಲಿ.ಕೃಷ್ಣ ಮಾತನಾಡಿ, ಗೊರವನಹಳ್ಳಿ ಗ್ರಾಮದ ಬಾಲಕಿಗೆ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ನಾಯಿ ಕಚ್ಚಿದ ಪರಿಣಾಮ ಬಾಲಕಿಯನ್ನು ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಪಾಲಕರು ಕರೆತಂದಿದ್ದಾರೆ. ಆ ವೇಳೆ ಆಸ್ಪತ್ರೆಯ ವೈದ್ಯರೊಬ್ಬರು ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಡ್ಯದ ಮಿಮ್ಸ್‌ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು. ಆದರೆ ಇಲ್ಲೇ ಸೂಕ್ತ ಚಿಕಿತ್ಸೆ ನೀಡಲಿಲ್ಲವೇಕೆ. ಆದಾಗಿಯೂ ತಲೆಗೆ ನಾಯಿ ಕಚ್ಚಿದ್ದರೂ ಆಂಬುಲೆನ್ಸ್ ಮೂಲಕವಾದರೂ ಬಾಲಕಿಯನ್ನು ಕಳುಹಿಸಬಹುದಿತ್ತಲ್ಲವ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ನಾಯಿ ಕಚ್ಚಿದ ಕಾರಣಕ್ಕೆ ಚಿಕಿತ್ಸೆಗೆಂದು ಬಂದಿದ್ದ ಬಾಲಕಿ ರಿತೀಕ್ಷಾ ಸಾವಿಗೆ ಮಂಡ್ಯದ ಸಂಚಾರ ಪೊಲೀಸರಷ್ಟೇ ಅಲ್ಲ, ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷೃವೂ ಕಾರಣ ಎಂದು ಆರೋಪಿಸಿದರು.
ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಪಟ್ಟಣದ ಗುರುಶಾಂತಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ಸಾರ್ವಜನಿಕರಿಗೆ ಚಿಕಿತ್ಸೆ ಸಿಗುತ್ತಿಲ್ಲ ಸ್ಕ್ಯಾನಿಂಗ್ ಹಾಗೂ ಔಷಧಗಳಿಗೆ ಹೊರಗಡೆ ಕಳುಹಿಸುತ್ತಾರೆ. ಅಷ್ಟೇ ಅಲ್ಲದೆ ಎಷ್ಟೋ ರೋಗಿಗಳಿಗೆ ಸಣ್ಣಪುಟ್ಟದಕ್ಕೂ ಜಿಲ್ಲಾಸ್ಪತ್ರೆಗೆ ಹೋಗಿ ಎನ್ನುತ್ತಾರೆ. ಇಷ್ಟೆಲ್ಲ ಅವ್ಯವಸ್ಥೆಯಿದ್ದರೂ ಸಂಬಂಧಿಸಿದವರು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಬಾಲಕಿಯ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣವಾಗಿದ್ದು ಇದಕ್ಕೆ ನ್ಯಾಯ ಸಲ್ಲಿಸುವವರು ಯಾರು ಎಂದು ಬೇಸರ ವ್ಯಕ್ತಪಡಿಸಿದರು.
ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ಆಸ್ಪತ್ರೆಗೆ ವೈದ್ಯರು ನಿಗದಿತ ಸಮಯಕ್ಕೆ ಬರುವುದಿಲ್ಲ. ರೋಗಿಗಳನ್ನು ಸರಿಯಾಗಿ ತಪಾಸಣೆ ಮಾಡುತ್ತಿಲ್ಲ. ಕೆಲವು ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಕ್ರಮ ಗೊಳ್ಳಬೇಕು. ರೋಗಿಗಳಿಗೆ ಸೂಕ್ತ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಈ ರೀತಿಯ ದುರ್ಘಟನೆ ಆಗಬಾರದಿತ್ತು. ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರೂ ಸೇರಿದಂತೆ ಎಲ್ಲ ಆಯಾಮದಲ್ಲೂ ತನಿಖಾ ತಂಡವನ್ನು ರಚಿಸಿ ಸೂಕ್ತ ತನಿಖೆ ನಡೆಸಲಾಗುವುದು ಎಂದ ಅವರು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯಾವುದೇ ಅವ್ಯವಸ್ಥೆಗಳಿದ್ದರೂ ಆ ಬಗ್ಗೆ ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಸ್ಮಿತಾರಾಮು ಮಾತನಾಡಿ, ನಾಯಿ ಕಡಿತದ ಚಿಕಿತ್ಸೆಗೆ ಅಸ್ಪತ್ರೆಗೆ ಬಂದ ಬಾಲಕಿ ರಿತೀಕ್ಷಾಗೆ ಜಿಲ್ಲಾಸ್ಪತ್ರೆಗೆ ಶಿಪಾರಸು ಮಾಡಿದ ವೈದ್ಯರು, ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದೆ ನಿರ್ಲಕ್ಷ್ಯ ತೋರಿದ್ದು ವಿಷಾದನೀಯ. ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಾಲಕೃಷ್ಣ, ಪಶುಪಾಲನೆ ಇಲಾಖೆ ವೈಧ್ಯಾಧಿಕಾರಿ ಡಾ.ಗೊವಿಂದ, ಗೊರವನಹಳ್ಳಿ ಪಿಡಿಒ, ಪೂರ್ಣಿಮಾ ತಾಪಂ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಪ್ರಗತಿಪರ ಸಂಘಟನೆ ನ.ಲಿ.ಕೃಷ್ಣ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸುನೀಲ್, ಮುಖಂಡರಾದ ಚನ್ನಸಂದ್ರ ಲಕ್ಷ್ಮಣ್, ಅವಿನಾಶ್ ಗೊಪಾಲ್, ಚನ್ನಪ್ಪ, ರಾಜೇಶ್, ಶಂಕರೇಗೌಡ, ನಾಗರಾಜು, ವಿನೊದ್ ಬಾಬು, ಉಮೇಶ್, ಮುಖಂಡರಾದ ಮ.ನ.ಪ್ರಸನ್ನಕುಮಾರ್, ಹೂತಗೆರೆ ಜನಾರ್ದನ, ಆತಗೂರು ನಿಂಗಪ್ಪ, ಮರಳಿಗ ಶಿವರಾಜ್, ಬಸವರಾಜ್, ಅಪ್ಪಾಜಿ, ಶಿವಕುಮಾರ್ ಇದ್ದರು.