ಕಲ್ಲಿದ್ದಲು ಕೊರತೆ: ರಾಜ್ಯದತ್ತ ಕೇಂದ್ರ ಬೊಟ್ಟು

Coal
Published on

| ಮೃತ್ಯುಂಜಯ ಕಪಗಲ್, ಬೆಂಗಳೂರು

ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಕಲ್ಲಿದ್ದಲು ಕೊರತೆಗೆ ಮಳೆಯೊಂದೇ ಅಲ್ಲ, ರಾಜ್ಯದ ಅಸಡ್ಡೆಯೂ ಕಾರಣವೆಂದು ಕೇಂದ್ರ ಸರ್ಕಾರ ನೇರವಾಗಿ ಬೊಟ್ಟುಮಾಡಿದೆ. ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಪ್ರಮಾಣದ ಮಳೆಯಾಗುವ ಮುನ್ಸೂಚನೆಯಿತ್ತು. ಅಲ್ಲದೆ, ಪ್ರತಿ ಬಾರಿ ಮಳೆಗಾಲಕ್ಕೆ ಮುನ್ನ 15 ದಿನಗಳಿಗೆ ಬೇಕಾಗುವಷ್ಟು ಕಲ್ಲಿದ್ದಲು ದಾಸ್ತಾನಿಡುವುದು ಸ್ವಾಭಾವಿಕ. ಶಾಖೋತ್ಪನ್ನ ವಿದ್ಯುತ್ ಉತ್ಪಾದಕ ರಾಜ್ಯಗಳಿಗೆ ಏಪ್ರಿಲ್​ನಿಂದ ಜೂನ್​ವರೆಗೆ ಕೇಂದ್ರ ಪತ್ರ ಬರೆದು, ಕೋಲ್ ಇಂಡಿಯಾ (ಸಿಐಎಲ್) ಬಳಿ 100 ದಶಲಕ್ಷ ಟನ್ ಕಲ್ಲಿದ್ದಲು ದಾಸ್ತಾನಿರುವದನ್ನು ತಿಳಿಸಿದೆ. ಮಳೆಗಾಲಪೂರ್ವ ಈ ದಾಸ್ತಾನು ಕೊಂಡೊಯ್ದು ಸಂಗ್ರಹಿಸಿಕೊಳ್ಳಲು ಸೂಚಿಸಿದೆ. ಸಿಐಎಲ್​ನಿಂದ ಕಲ್ಲಿದ್ದಲು ತರಿಸಿಕೊಳ್ಳುವ ವಿಷಯದಲ್ಲಿ ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳು ಅಸಡ್ಡೆ ತೋರಿವೆ. ಪರಿಸ್ಥಿತಿ ಕೈಮೀರಿದ ಬಳಿಕ ಸಿಐಎಲ್​ನತ್ತ ಕರ್ನಾಟಕ ಜತೆಗೆ ಹಲವು ರಾಜ್ಯಗಳ ಮುಖ ಮಾಡಿದ್ದು, ದಿಢೀರ್ ಹೆಚ್ಚಿದ ಬೇಡಿಕೆ ಸರಿದೂಗಿಸುವುದು ಸವಾಲಾಗಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ರಾಜ್ಯದ ಮೂರು ಸ್ಥಾವರಗಳಲ್ಲಿ ದಾಸ್ತಾನು ನೆಲಕಚ್ಚಿ, ರೇಕ್​ಗಳ ಸಂಖ್ಯೆ ಕುಸಿದ ಬಳಿಕ ಉತ್ಪಾದನೆ ಕಡಿತದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಳೆಯು ವಿದ್ಯುತ್ ಬೇಡಿಕೆ ತಗ್ಗಿಸಿರುವುದು ತಾತ್ಕಾಲಿಕ ವರವಾಗಿದ್ದು, ಹಠಾತ್ ಬೇಡಿಕೆ ಏರುಮುಖವಾದರೆ ಪರದಾಟ ತಪ್ಪಿದ್ದಲ್ಲ.

ಸಿಐಎಲ್​ಗೂ ಸುಸ್ತಿಬಾಕಿದಾರ: ಸಿಂಗರೇಣಿ ಕಂಪನಿಯಿಂದ ಕಲ್ಲಿದ್ದಲು ಖರೀದಿ ಬಾಕಿ ಪಾವತಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದಾರೆ. ಸಿಂಗರೇಣಿ ಮೂಗು ಹಿಡಿದ ಬಳಿಕ ಸರ್ಕಾರ ಬಾಯಿ ತೆರೆದಿದೆ. ಇನ್ನೆರಡು ದಿನಗಳಲ್ಲಿ ಬಾಕಿ ಚುಕ್ತಾ ಮಾಡಲು ಮುಂದಾಗಿದೆ. ಸಿಐಎಲ್​ಗೆ ಒಟ್ಟು 20,000 ಕೋಟಿ ರೂ. ಬಾಕಿ ಇದ್ದು, ಈ ರಾಜ್ಯಗಳಲ್ಲಿ ಕರ್ನಾಟಕ ಸಹ ಸೇರಿದೆ. ಲಭ್ಯ ಮಾಹಿತಿ ಪ್ರಕಾರ ಮಹಾರಾಷ್ಟ್ರ- 2,600, ಪಂಜಾಬ್- 1,200, ತಮಿಳುನಾಡು- 1,100, ಮಧ್ಯಪ್ರದೇಶ- 1000, ಆಂಧ್ರಪ್ರದೇಶ-250 ಮತ್ತು ಕರ್ನಾಟಕ 230 ಕೋಟಿ ರೂ. ಬಾಕಿ ಪಾವತಿಸಬೇಕಾಗಿದೆ. ಸಂಕಷ್ಟ ಪರಿಹಾರ ಸೂತ್ರವಾಗಿ ಮಳೆಗಾಲಕ್ಕೆ ಪ್ರತಿ ಸ್ಥಾವರದಲ್ಲಿ ತಲಾ 3-4 ಲಕ್ಷ ಟನ್ ಕಲ್ಲಿದ್ದಲು ದಾಸ್ತಾನು ಮಾಡಲಾಗುತ್ತಿತ್ತು. ಒಡಿಶಾ, ಮಹಾರಾಷ್ಟ್ರ, ಸಿಂಗರೇಣಿ ಗಣಿಗಳಿಂದ ಪ್ರತಿದಿನ ತಲಾ 7-8 ರೇಕ್​ಗಳಲ್ಲಿ ಕಲ್ಲಿದ್ದಲು ಪೂರೈಕೆಗೆ ವ್ಯವಸ್ಥೆಯಾಗುತ್ತಿತ್ತು. ಸಿಎಂ ನೀಡಿದ ಅಂಕಿ-ಅಂಶಗಳ ಪ್ರಕಾರ ಮೂರು ಸ್ಥಾವರಗಳಲ್ಲಿ ಒಟ್ಟಾರೆ 98,863 ಮೆಟ್ರಿಕ್ ಟನ್ ಕಲ್ಲಿದ್ದಲಿದೆ. ಪ್ರತಿದಿನ 10 ರೇಕ್​ಗಳಲ್ಲಿ ಪೂರೈಕೆಯಾಗುತ್ತಿದ್ದು, ಹೆಚ್ಚುವರಿಯಾಗಿ ಇನ್ನೆರಡಕ್ಕೆ ಕಸರತ್ತು ನಡೆಸಿದೆ. ದಾಸ್ತಾನು ಪ್ರಮಾಣ ಮತ್ತು ಪೂರೈಕೆ ಗಮನಿಸಿದರೆ ಸರ್ಕಾರದ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಜತೆಗೆ ಅಧಿಕಾರಿಗಳ ತಪು್ಪ ಮಾಹಿತಿ ನಂಬಿ ಸರ್ಕಾರ ಮುಗ್ಗರಿಸಿದೆ ಎಂದು ಹೇಳಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಮೂಲಗಳ ಉತ್ಪಾದನೆ ಹೆಚ್ಚಿದೆ. ಹೇಗಿದ್ದರೂ ಮಳೆಗಾಲದಲ್ಲಿ ವಿದ್ಯುತ್ ಬೇಡಿಕೆ ಕಡಿಮೆಯಿರುತ್ತದೆ. ಉತ್ಪಾದನಾ ವೆಚ್ಚ ಜಾಸ್ತಿಯಿರುವ ಥರ್ಮಲ್ ಸ್ಥಾವರಗಳಿಗೆ ಪ್ರಾಮುಖ್ಯತೆ ಕಡಿಮೆ ಮಾಡಿದರೆ ಲೇಸು. ಪ್ರತಿ ಸ್ಥಾವರಕ್ಕೆ 3-4 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹ (ಪ್ರತಿ ಟನ್ ಕಲ್ಲಿದ್ದಲು ದರ 4,200 ರೂ)ಕ್ಕೆ ನೂರಾರು ಕೋಟಿ ರೂ. ಅಗತ್ಯವಿದೆ. ಮುಂದೆ ನೋಡೋಣವೆಂಬ ಅಧಿಕಾರಿಗಳ ಲೆಕ್ಕಾಚಾರವನ್ನೇ ಸರಿಯೆಂದು ಭಾವಿಸಿದ ಸರ್ಕಾರ ಕೈಸುಟ್ಟುಕೊಂಡಿದೆ.

ಉದ್ಯಮಗಳಿಗೆ ಆತಂಕ

ಕರೊನಾ ಹೊಡೆತಕ್ಕೆ ನಿರಂತರ ಎರಡು ವರ್ಷ ತತ್ತರಿಸಿದ ಉದ್ಯಮ ವಲಯ ಈಗಷ್ಟೇ ಚೇತರಿಕೆ ಕಾಣುತ್ತಿದ್ದು, ವಿದ್ಯುತ್ ಅಭಾವದ ಆತಂಕದ ಮಡುವಿಗೆ ಬಿದ್ದಿದೆ. ಪೂರ್ಣ ಪ್ರಮಾಣದ ವಿದ್ಯುತ್ ಪೂರೈಕೆಗೆ ಸರ್ಕಾರ ಖಾತರಿ ನೀಡಿದೆ. ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಾಸವಾಗಿದ್ದರೂ ವಿದ್ಯುತ್ ಕಡಿತವಿಲ್ಲವೆಂಬ ಭರವಸೆಯೂ ದೊರೆತಿದೆ. ವಿದ್ಯುತ್ ಬೇಡಿಕೆ ಒಮ್ಮೆಲೆ 10,000 ಮೆಗಾವಾಟ್ ದಾಟಿದರೆ ಸರಿದೂಗಿಸುವ ಸಾಮರ್ಥ್ಯ ಜಲ, ನವೀಕರಿಸ ಬಹುದಾದ ಇಂಧನ ಮೂಲಕ್ಕಿವೆಯೆ?. ಥರ್ಮಲ್ ಸ್ಥಾವರಗಳ ಕಲ್ಲಿದ್ದಲು ಪರಿಸ್ಥಿತಿ ಸುಧಾರಿಸೀತೆ? ಎಂಬ ಗೊಂದಲ, ಕಳವಳಕ್ಕೆ ಉದ್ಯಮಗಳು ಸಿಲುಕಿವೆ.

ವೈಫಲ್ಯದ ಹೆಜ್ಜೆಗಳು

  1. ಮೂರು ಸ್ಥಾವರಗಳು ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಪ್ರತಿದಿನ ಒಟ್ಟು 74,000 ಟನ್ ಕಲ್ಲಿದ್ದಲು ಅಗತ್ಯ

2. ಪ್ರತಿ ಸ್ಥಾವರಕ್ಕೆ ದಿನಂಪ್ರತಿ 7-8 ರೇಕ್​ಗಳಲ್ಲಿ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಸದ್ಯಕ್ಕೆ ಮೂರು ಸ್ಥಾವರಗಳು ಒಳಗೊಂಡು 10 ರೇಕ್​ಗಳು ಬರುತ್ತಿವೆ.

3. ಸಿಂಗರೇಣಿ ಗಣಿಯ ಕಲ್ಲಿದ್ದಲು ಉತ್ತಮ ಗುಣಮಟ್ಟದ್ದು (ಬೂದಿ ಪ್ರಮಾಣ ಶೇ.25 ರಿಂದ 28ರಷ್ಟು, ಅನ್ಯ ವಸ್ತುಗಳ ಬೆರಕೆ ತೀರಾ ಕಡಿಮೆ) ಜತೆಗೆ 3 ಕೇಂದ್ರಗಳಿಗೆ ಹತ್ತಿರವಾಗಿದೆ.

4. ಸಾವಿರ ಕೋಟಿ ರೂ.ಗೂ ಅಧಿಕ ಬಾಕಿಯಿರಿಕೊಂಡ ಕಾರಣ ಸಿಂಗರೇಣಿ ಕಂಪನಿಯು ರೇಕ್​ಗಳ ಸಂಖ್ಯೆಯನ್ನು ಮಳೆಗಾಲಕ್ಕೆ ಮುನ್ನವೇ ಕಡಿತಗೊಳಿಸಿದೆ.

5. ಮಳೆಯಿಂದ ಪೂರೈಕೆ ಪ್ರಮಾಣ ತಗ್ಗಿದ ಬಳಿಕ ಮಹಾರಾಷ್ಟ್ರದ ವೆಸ್ಟರ್ನ್ ಕೋಲ್ ಫೀಲ್ಡ್ ಮೊರೆ ಹೋಗಿದೆ. ಈ ಗಣಿಯ ಕಲ್ಲಿದ್ದಲಿನಲ್ಲಿ ಶೇ.30ಕ್ಕೂ ಹೆಚ್ಚು ಬೂದಿ ಪ್ರಮಾಣವಿದ್ದು, ದೂರವೂ ಹೌದು.

6. ವೆಸ್ಟರ್ನ್ ಕೋಲ್ ಫೀಲ್ಡ್ ವ್ಯಾಪ್ತಿ ಮಳೆಯಿಂದ ಉತ್ಪಾದನೆ ಕುಂಠಿತ, ಸಿಂಗ ರೇಣಿ ಮೇಲೆ ಹೆಚ್ಚಿದ ಒತ್ತಡದಿಂದ ಕರ್ನಾಟಕ ನಿರೀಕ್ಷಿಸಿದಷ್ಟು ಕಲ್ಲಿದ್ದಲು ಪಡೆಯಲಾಗಿಲ್ಲ.

7. ಪರಿಸರಸ್ನೇಹಿ ಸೌರ, ಪವನ ಇತ್ಯಾದಿ ಮೂಲದಿಂದ ಕಡಿಮೆ ದರ, ವಿದ್ಯುತ್ ಉತ್ಪಾದನೆ ಹೆಚ್ಚಿದೆ ಎನ್ನುವ ಅತಿಯಾದ ಆತ್ಮವಿಶ್ವಾಸ

8. ಪ್ರತಿ ಸ್ಥಾವರದಲ್ಲಿ 3-4 ಲಕ್ಷ ಟನ್ ಕಲ್ಲಿದ್ದಲು ಸಂಗ್ರಹಕ್ಕೆ ಕೋಟ್ಯಂತರ ರೂ.ಗಳ ಹೊರೆ ಅನಗತ್ಯ ಎಂದು ಪರಿಗಣಿಸಿ ಸಿಐಎಲ್ ಸಲಹೆ ಕಡೆಗಣನೆ

ಮೂರ್ನಾಲ್ಕು ದಿನದಲ್ಲಿ ಕಲ್ಲಿದ್ದಲು ಪೂರೈಕೆ

ನವದೆಹಲಿ: ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಉಂಟಾಗಿದೆ ಎಂಬ ವರದಿ ರಾಜಕೀಯ ಸಂಚಲನ ಮೂಡಿಸಿದೆ. ಛತ್ತೀಸ್​ಗಢದ ಮೂರು ಕಲ್ಲಿದ್ದಲು ಗಣಿಗೆ ಬುಧವಾರ ಭೇಟಿ ನೀಡಿದ ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ‘ಇನ್ನು ಮೂರ್ನಾಲ್ಕು ದಿನದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳಲಿದೆ. ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಕೊರತೆ ಉಂಟಾಗುವುದಿಲ್ಲ’ ಎಂದು ಹೇಳಿದ್ದಾರೆ. ಇದೇ ವೇಳೆ, ಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಲ್ಲಿದ್ದಲು ಕೊರತೆಗೆ ಸಂಬಂಧಿಸಿದ ಎಲ್ಲ ವರದಿಗಳೂ ನಿರಾಧಾರ ಎಂದಿದ್ದಾರೆ.

ಜೋಶಿ 2 ದಿನಗಳ ಪ್ರವಾಸ: ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಕಲ್ಲಿದ್ದಲು ನಿಕ್ಷೇಪ ಹೆಚ್ಚಿರುವ ಛತ್ತೀಸ್​ಗಢ ಮತ್ತು ಜಾರ್ಖಂಡ್​ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಕಲ್ಲಿದ್ದಲು ಲಭ್ಯತೆ ಮತ್ತು ಪರಿಸ್ಥಿತಿ ಅವಲೋಕನ ಈ ಪ್ರವಾಸದ ಉದ್ದೇಶವಾಗಿದೆ. ಬುಧವಾರ ಛತ್ತೀಸ್​ಗಢದ ಗೆವ್ರಾ, ದೀಪ್ಕಾ, ಕುಸ್ಮಂಡ ಗಣಿಗಳಿಗೆ ಅವರು ಭೇಟಿ ನೀಡಿದರು. ಈ ಗಣಿಗಳು ಕೋಲ್ ಇಂಡಿಯಾದ ಅಧೀನ ಸಂಸ್ಥೆ ಸೌತ್ ಈಸ್ಟರ್ನ್ ಕೋಲ್​ಫೀಲ್ಡ್್ಸ ಲಿಮಿಟೆಡ್ ಅಧೀನದಲ್ಲಿವೆ. ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಜತೆಗೆ ಪ್ರಲ್ಹಾದ್ ಜೋಶಿ ಮಾತುಕತೆ ನಡೆಸಿದರು.

22 ದಿನಗಳಿಗೆ ದಾಸ್ತಾನು

ಸದ್ಯದ ಮಟ್ಟಿಗೆ ದೇಶದ ವಿದ್ಯುತ್ ಉತ್ಪಾದನಾ ಘಟಕಗಳಿಗೆ 22 ದಿನಗಳ ತನಕ ಪೂರೈಕೆ ಮಾಡುವುದಕ್ಕೆ ಬೇಕಾದಷ್ಟು ಕಲ್ಲಿದ್ದಲು ಕೋಲ್ ಇಂಡಿಯಾ ಬಳಿ ದಾಸ್ತಾನು ಇದೆ. ದೇಶದ ಕಲ್ಲಿದ್ದಲು ಬೇಡಿಕೆಯ ಪೈಕಿ ಶೇಕಡ 80 ಅನ್ನು ಕೋಲ್ ಇಂಡಿಯಾ ಪೂರೈಸುತ್ತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ವಿವರಿಸಿದರು.

ಕಲ್ಲಿದ್ದಲು ಕೊರತೆ ಸಂಬಂಧಿಸಿದ ಮಾಧ್ಯಮ ವರದಿಗಳೆಲ್ಲ ನಿರಾಧಾರ. ಕಲ್ಲಿದ್ದಲು ಕೊರತೆ ಭಾರತವನ್ನು ಕಾಡಿಲ್ಲ. ಪ್ರತಿಯೊಂದು ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ನಾಲ್ಕು ದಿನಗಳಿಗೆ ಆಗುವಷ್ಟು ಕಲ್ಲಿದ್ದಲು ದಾಸ್ತಾನು ಇದೆ ಎಂದೇ ಕಲ್ಲಿದ್ದಲು ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. | ನಿರ್ಮಲಾ ಸೀತಾರಾಮನ್ ಕೇಂದ್ರ ವಿತ್ತ ಸಚಿವೆ (ಅಮೆರಿಕದಲ್ಲಿ ಹೇಳಿದ್ದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net