ನಿರಂತರ ಕ್ರೀಡಾಭ್ಯಾಸವೇ ಬದಲಾವಣೆಗೆ ಮುನ್ನುಡಿ

10 NRD-1
ಜರ್ಮನಿಯಲ್ಲಿ ಆಯೋಜಿಸಿದ್ದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಧಾರವಾಡದ ದೇವಪ್ಪ ಮೋರೆ ಹಾಗೂ ತರಬೇತುದಾರ ಶಿವಾನಂದ ಗುಂಜಾಳ ಅವರನ್ನು ನರಗುಂದ ತಾಲೂಕು ಕ್ರೀಡಾಭಿಮಾನಿಗಳಿಂದ ಬುಧವಾರ ಸನ್ಮಾನಿಸಲಾಯಿತು.
Published on

ನರಗುಂದ: ಸದೃಢ ದೇಹ ಹೊಂದಿದ್ದರೂ ಉತ್ತರ ಕರ್ನಾಟಕದವರು ಸಾಧನೆಗೆ ಹಿಂಜರಿಯುತ್ತಾರೆ. ಈ ಭಾಗದ ಯುವಕರು ನಿರಂತರವಾಗಿ ಕ್ರೀಡಾಭ್ಯಾಸದಲ್ಲಿ ಪಾಲ್ಗೊಂಡು ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದು ಅಂತಾರಾಷ್ಟ್ರೀಯ ಕ್ರೀಡಾ ತರಬೇತುದಾರ ಶಿವಾನಂದ ಗುಂಜಾಳ ಸಲಹೆ ನೀಡಿದರು.

ಜರ್ಮನಿಯಲ್ಲಿ ಆಯೋಜಿಸಿದ್ದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಎರಡು ಚಿನ್ನದ ಪದಕ ಗಳಿಸಿರುವ ಧಾರವಾಡ ಜಿಲ್ಲೆಯ ದೇವಪ್ಪ ಮೋರೆ ಹಾಗೂ ತರಬೇತುದಾರ ಶಿವಾನಂದ ಗುಂಜಾಳ ಅವರಿಗೆ ತಾಲೂಕಿನ ಕ್ರೀಡಾಭಿಮಾನಿಗಳಿಂದ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

50 ವರ್ಷದ ದೇವಪ್ಪ ಮೋರೆ ಅವರಿಗೆ ಸರ್ಕಾರದಿಂದ ಒಂದು ರೂಪಾಯಿ ಆರ್ಥಿಕ ನೆರವೂ ಸಿಗಲಿಲ್ಲ. ಆದರೆ, ಮಾಧ್ಯಮದವರು ಪ್ರಕಟಿಸಿದ ವರದಿಗಳಿಗೆ ಸ್ಪಂದಿಸಿದ ಸಂಘ, ಸಂಸ್ಥೆ, ಕ್ರೀಡಾಭಿಮಾನಿಗಳು ನೀಡಿದ ಬೆಂಬಲ, ಪ್ರೋತ್ಸಾಹ, ಆರ್ಥಿಕ ನೆರವಿನಿಂದ ಜರ್ಮನಿಯಲ್ಲಿ ಜರುಗಿದ ಕ್ರೀಡಾಕೂಟದಲ್ಲಿ 60 ಮೀಟರ್ ಓಟವನ್ನು 10.8 ಸೆಕೆಂಡ್, 100 ಮೀಟರ್ ಓಟವನ್ನು 18.80 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದಾರೆ. ಅವರು ದೇಶಕ್ಕೆ ಮರಳಿದಾಗ ಸ್ವಾಗತಿಸಲು ಯಾರೊಬ್ಬರೂ ಬಂದಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇವಪ್ಪ ಮೋರೆ ಅವರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ಸಾರ್ವಜನಿಕರು ನೀಡುವ ಧನಸಹಾಯ ಹಾಗೂ ನಮ್ಮ ಕೈಲಾದಷ್ಟು ಹಣದಿಂದ ಸುಂದರ ಮನೆ ನಿರ್ಮಿಸಿಕೊಡುತ್ತೇವೆ. ಯುವಕರ ಕ್ರೀಡಾ ತರಬೇತಿಗಾಗಿ ನರಗುಂದದಲ್ಲಿ ಉಚಿತ ಕ್ರಿಕೆಟ್ ತರಬೇತಿ ಕೇಂದ್ರ ಪ್ರಾರಂಭಿಸುವ ವಿಚಾರವಿದೆ. ಸಾಧನೆಯ ಹಂಬಲವಿರುವ ಗ್ರಾಮೀಣ ಭಾಗದ ಅಂಗವಿಕಲರ ಕ್ರೀಡಾಪಟುವಿಗಳಿಗೆ ಉಚಿತ ತರಬೇತಿ, ಸಹಾಯ ಸಹಕಾರ ಮಾಡುವುದಾಗಿ ತಿಳಿಸಿದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಮೋಹನ ಕಲಹಾಳ ಮಾತನಾಡಿ, ಗುರುವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ಕ್ರೀಡಾ ತರಬೇತುದಾರ ಶಿವಾನಂದ ಗುಂಜಾಳ ಅವರ ಸೇವೆ ಶ್ಲಾಘನೀಯ. ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆ ಗುರುತಿಸಿದರೆ ಉನ್ನತ ಸಾಧನೆಗೆ ಕಾರಣರಾಗಬಹುದು. ಅವಿರತ ಪರಿಶ್ರಮದಿಂದ ಸಾಧನೆ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

ಪತ್ರಿವನಮಠದ ಗುರುಸಿದ್ಧವೀರ ಶಿವಯೋಗಿ ಶ್ರೀಗಳು ಮಾತನಾಡಿ, ಮೂರ್ತಿ ಚಿಕ್ಕದಾದರೂ ದೇವಪ್ಪ ದೊಡ್ಡ ಸಾಧನೆ ಮಾಡಿದ್ದಾರೆ. ಅವರಿಗೆ ಪ್ರಸಕ್ತ ವರ್ಷ ಜರುಗುವ ಶ್ರೀ ಮಠದ ಜಾತ್ರಾ ಮಹೋತ್ಸವದಲ್ಲಿ ‘ಬಿಲ್ವ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಚಿನ್ನದ ಪದಕ ಪ್ರಶಸ್ತಿ ಪುರಸ್ಕೃತ ದೇವಪ್ಪ ಮೋರೆ, ಕ್ರೀಡಾಪಟು ಅನಿಲ ಜಮಖಂಡಿ, ಅಲೋಕಗೌಡ ನಾಯ್ಕರ, ಎನ್.ಆರ್. ನೀಡಗುಂದಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net