2ನೇ ಹಂತದ ಕೊವ್ಯಾಕ್ಸಿನ್ ಕೊರತೆ

vacc
Published on

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಭಾರತ್ ಬಯೋಟೆಕ್‌ನವರ ‘ಕೊವಾಕ್ಸಿನ್’ ಕೋವಿಡ್ ಎರಡನೇ ಹಂತದ ಲಸಿಕೆ ಕೊರತೆಯಾಗಿದ್ದು, ಹಲವು ದಿನಗಳಿಂದ ಪೂರೈಕೆ ಇಲ್ಲದೆ ಜನರು ಲಸಿಕೆ ರಹಿತರಾಗಿ ವಾಪಸ್ ಹೋಗುತ್ತಿದ್ದಾರೆ.

ಕೊವಾಕ್ಸಿನ್ ಮೊದಲನೇ ಡೋಸ್ ಪಡೆದುಕೊಂಡವರು ಎರಡನೇ ಡೋಸ್ ಪಡೆಯಲು ನಿಗದಿತ ಅವಧಿಯನ್ನು (28ರಿಂದ 42 ದಿನಗಳ ಒಳಗೆ) ಸೂಚಿಸಲಾಗಿತ್ತು. ಅದರಂತೆ ಆಸ್ಪತ್ರೆಗಳಿಗೆ ಆಗಮಿಸಿದರೆ 2ನೇ ಡೋಸ್ ಸ್ಟಾಕ್ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಬಗ್ಗೆ ಉಭಯ ಜಿಲ್ಲೆಗಳ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರು ಆಗಮಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಗೆ ಬುಧವಾರ ಬೆಳಗ್ಗೆ ಆಗಮಿಸಿದ್ದ ಹಿರಿಯ ನಾಗರಿಕರು ಲಸಿಕೆ ಇಲ್ಲವೆಂಬ ಉತ್ತರದಿಂದ ಅಸಮಾಧಾನಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಮೊದಲನೇ ಹಂತದ ಲಸಿಕೆಯ ಕೊರತೆ ಇಲ್ಲ. ಎರಡನೇ ಹಂತದ ಕೋವಿಶೀಲ್ಡ್ ಲಸಿಕೆಯೂ ಲಭ್ಯವಿದೆ. 2ನೇ ಹಂತದ ಕೊವಾಕ್ಸಿನ್ ಮಾತ್ರ ಸಂಗ್ರಹ ಇಲ್ಲದೆ ಸಮಸ್ಯೆಯಾಗಿದೆ, ಕೆಲವೇ ದಿನಗಳಲ್ಲಿ ಸರಿ ಹೋಗಲಿದೆ ಎನ್ನುತ್ತಾರೆ ಉಭಯ ಜಿಲ್ಲೆಗಳ ಆರೋಗ್ಯ ಇಲಾಖೆ ಅಧಿಕಾರಿಗಳು.

‘ಒಂದೆರಡು ದಿನಗಳಿಂದ ಕೊವಾಕ್ಸಿನ್ ಕೊರತೆ ಇದೆ. ಮುಂದಿನ ವಾರ ಬರಬಹುದು. ಆ ಬಳಿಕ ಎರಡನೇ ಡೋಸ್ ಹಾಕಿಸಿಕೊಳ್ಳಬಹುದು. ಒಂದು ವಾರ ಹೆಚ್ಚು ಕಡಿಮೆ ಆದರೆ ಯಾವುದೇ ಸಮಸ್ಯೆ ಇಲ್ಲ ಎಂದು ದ.ಕ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಹಾಗೂ ಲಸಿಕೆ ವಿಭಾಗ ನೋಡಿಕೊಳ್ಳುತ್ತಿರುವ ಡಾ.ರಾಜೇಶ್ ಬಿ.ವಿ. ಹೇಳುತ್ತಾರೆ.

ಸದ್ಯಕ್ಕೆ ಎರಡು ದಿನಕ್ಕಾಗುವಷ್ಟು ಸಿರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆ ಇದೆ. 16 ಸಾವಿರದಷ್ಟು ಲಸಿಕೆ ಇದ್ದು, 8 ಸಾವಿರದಷ್ಟು ಲಸಿಕೆ ಬುಧವಾರ ನೀಡಲಾಗಿದೆ. ಬುಧವಾರ ಸಂಜೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವುದಕ್ಕಾಗಿ ನೋಂದಣಿ ಶುರುವಾಗಿದೆ. ಮೇ 10ರ ಬಳಿಕ ವ್ಯಾಕ್ಸಿನ್ ಲಭ್ಯತೆ ನೋಡಿಕೊಂಡು ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಲಸಿಕೆ ಕೊರತೆ ಬಗ್ಗೆ ಕೆಲವು ಕಡೆಗಳಲ್ಲಿ ಗೊಂದಲ ಉಂಟಾಗಿದೆ. ಈಗಾಗಲೇ ಬಂದಿರುವ 12 ಸಾವಿರ ಕೋವಿಶೀಲ್ಡ್ ವ್ಯಾಕ್ಸಿನ್ ಎಲ್ಲ ಆಸ್ಪತ್ರೆಗಳಿಗೆ ಪೂರೈಸಲಾಗಿದೆ. ಕೊವಾಕ್ಸಿನ್ ಲಸಿಕೆ ಸ್ಟಾಕ್ ಖಾಲಿಯಾಗಿದ್ದು, ಶೀಘ್ರ ಈ ಲಸಿಕೆಯನ್ನು ಆಸ್ಪತ್ರೆಗಳಿಗೆ ಪೂರೈಸಲಾಗುವುದು. ಜಿಲ್ಲಾಸ್ಪತ್ರೆಯಲ್ಲಿನ ಲಸಿಕೆ ನೀಡುವ ಕೇಂದ್ರವನ್ನು ಸೇಂಟ್ ಸಿಸಿಲಿ ಶಾಲೆಗೆ ಸ್ಥಳಾಂತರಿಸಲಾಗುವುದು.

- ಜಿ.ಜಗದೀಶ್, ಜಿಲ್ಲಾಧಿಕಾರಿ. ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net