

ವಿಜಯಪುರ: ರಾಜ್ಯದಲ್ಲಿ ಸಹಕಾರಿ ರಂಗಕ್ಕೆ ಯಾವುದೇ ರೀತಿ ಪ್ರೋತ್ಸಾಹವಿಲ್ಲ. ಸರ್ಕಾರ ಯಾವುದೇ ಆಗಿರಲಿ. ಪ್ರೋತ್ಸಾಹ ಮಾತ್ರ ಕಡಿಮೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಬೇಸರ ವ್ಯಕ್ತಪಡಿಸಿದರು.
ಸ್ವಸಹಾಯ ಸಂಘಗಳು, ರೈತರು ಮತ್ತಿತರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಿದರೆ ಸಕಾಲಕ್ಕೆ ಆ ಹಣ ಪಾವತಿಯಾಗುತ್ತಿಲ್ಲ. ಸರ್ಕಾರ ತಡವಾಗಿ ಹಣ ಬಿಡುಗಡೆಗೊಳಿಸುತ್ತದೆ. ಹೀಗಾಗಿ ಐಆರ್‌ಬಿ ಅಧೀನಕ್ಕೆ ಬಂದಿರುವ ಸಹಕಾರಿ ಬ್ಯಾಂಕ್‌ಗಳು ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಸ್ಪರ್ಧೆ ಮಾಡುವುದು ಸವಾಲಾಗಿ ಪರಿಣಮಿಸಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆ ಧಾರಣೆ ಹೆಚ್ಚಿದ್ದರೂ ದೇಶದಲ್ಲಿ ಧಾರಣೆ ಕಡಿಮೆ ಇದೆ. ಈ ಬಗ್ಗೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ಧ್ವನಿ ಎತ್ತಲಾಗಿತ್ತು. ಉತ್ತಮ ಧಾರಣೆ ಸಿಕ್ಕರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳನ್ನು ಲೀಸ್‌ಗೆ ನೀಡಲು ತೀರ್ಮಾನಿಸಲಾಗಿದೆ. ಈಗಾಗಲೇ ಲೀಸ್‌ಗೆ ನೀಡಿರುವ ಕಾರ್ಖಾನೆಗಳು ಲಾಭದಲ್ಲಿವೆ. ಮುಧೋಳದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಸ್‌ಗೆ ಹರಾಜು ಮಾಡಲಾಗುತ್ತಿದೆ. 30 ವರ್ಷದ ಅವಧಿಗೆ ಲೀಸ್‌ಗೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಈ ಬಾರಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಶೇ.99 ರಷ್ಟು ಪಾವತಿ ಮಾಡಲಾಗಿದೆ ಎಂದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಸಕ್ಕರೆ ಕಾರ್ಖಾನೆ ಸಮಸ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ಆ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ನೋಡಿಕೊಳ್ಳುತ್ತದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಮತ್ತು ಜನಾರ್ಧನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೋರಿಕೆ ಸಲ್ಲಿಸಿ ಒತ್ತಾಯಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ರಾಜಭವನ ಚಲೋ ಕಾರ್ಯಕ್ರಮದಲ್ಲಿ ನಾನೂ ಹಾಜರಾಗಬೇಕಿತ್ತು. ವಿಡಿಸಿಸಿ ಬ್ಯಾಂಕ್ ಸಭೆ ಕಾರಣ ಪಾಲ್ಗೊಳ್ಳಲಾಗುತ್ತಿಲ್ಲ. ಆರ್‌ಬಿಐ ನಿಯಮಾವಳಿ ಪ್ರಕಾರ ಬ್ಯಾಂಕ್‌ನ ಸಭೆ ನಡೆಸಬೇಕಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ ಎಂದರು.
ಅಲ್ಲದೇ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡನೀಯ. ರಾಜಭವನವನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ. ಸಿಎಂ ಅವರ ಪ್ರಕರಣಕ್ಕೂ ಮುನ್ನ ಇರುವ ಪ್ರಕರಣಗಳ ಕುರಿತು ತೀರ್ಮಾನ ಆಗಬೇಕು, ಯಾರು ಮೊದಲು ತಪ್ಪು ಮಾಡಿದ್ದಾರೋ ಅವರಿಗೆ ಮೊದಲು ಶಿಕ್ಷೆಯಾಗಲಿ ಎಂದರು.
ಇನ್ನು ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಶಿವಾನಂದ ಪಾಟೀಲರು, ಬಿಜೆಪಿ ಯಾವತ್ತೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ಆಪರೇಷನ್ ಕಮಲ ಹೊಸತೇನಲ್ಲ. ಸದ್ಯ ಆಪರೇಷನ್ ಕಮಲ ಮಾಡುವ ಪ್ರಯತ್ನ ನಡೆದಿದೆ ಎಂಬ ಮಾತಿದೆ. ಅದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಗೊತ್ತಿಲ್ಲ ಎಂದರು.
*