

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನ.14 ರಿಂದ 20ರವರೆಗೆ ಜರುಗುವ ಸಹಕಾರ ಸಪ್ತಾಹದ ಪ್ರಯುಕ್ತ 14 ರ ಮೊದಲ ದಿನ ಆಚರಣೆಯಲ್ಲಿ ನಗರದಲ್ಲಿ ಸಪ್ತಾಹದ ಉದ್ಘಾಟನೆ ಮತ್ತು ಕರೊನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರದ ಕುರಿತು ಹಾಗೂ ಎಲ್ಲ ಏಳು ದಿನಗಳಲ್ಲಿ ಸಹಕಾರ ಕ್ಷೇತ್ರದ ಸಮಸ್ಯೆಗಳ ಚಿಂತನ-ಮಂಥನ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ, ಶಾಸಕ ಡಿ.ಎಸ್.ಸುರೇಶ್ ಮಾಹಿತಿ ನೀಡಿ, ಈ ಬಾರಿ ಸಹಕಾರ ಸಪ್ತಾಹದ ಧ್ಯೇಯ ಕರೊನಾ ಸೋಂಕು - ಆತ್ಮನಿರ್ಭರ ಭಾರತ - ಸಹಕಾರ ಸಂಸ್ಥೆಗಳು ಎಂದಿದ್ದು, ಸಪ್ತಾಹದ ಎಲ್ಲ ದಿನ ಆಚರಣೆಗಳಲ್ಲೂ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ, ವಿಧಾನ ಪರಿಷತ್ ಉಪ ಸಭಾಪತಿ ಸಹಕಾರ ರತ್ನ ಪುರಸ್ಕøತ ಎಸ್.ಎಲ್.ಧರ್ಮೇಗೌಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅನಂತರ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ ಸಪ್ತಾಹ ಉದ್ಘಾಟಿಸಲಿದ್ದು, ಸ್ವತಃ ಅಧ್ಯಕ್ಷತೆ ವಹಿಸಲಿರುವುದಾಗಿ ಹೇಳಿದರು.
ಉಳಿದಂತೆ ನ.15ರಂದು ಶೃಂಗೇರಿ ಕಾವಡಿ ಪ್ರಾಕೃಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಮಾರಾಟ ಗ್ರಾಹಕ ರೂಪಾಂತರ ಮತ್ತು ಮೌಲ್ಯವರ್ಧನೆ, 16 ರಂದು ಕೊಪ್ಪದ ಗಾಯತ್ರಿ ಸಭಾಂಗಣದಲ್ಲಿ ಅಂತರ್ಜಾಲ ಸಂಪರ್ಕದ ಮೂಲಕ ಸಹಕಾರ ಶಿಕ್ಷಣದ ಪುನರ್ಮನನ, 17ರಂದು ಎನ್.ಆರ್.ಪುರದ ಸೀತೂರು ಪ್ರಾಕೃಪತ್ತಿನ ಸಹಕಾರ ಸಂಘದಲ್ಲಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು, 18 ರಂದು ಮೂಡಿಗೆರೆಯ ರೈತ ಭವನದಲ್ಲಿ ವ್ಯವಹಾರ ಉದ್ಯೋಗ ಕಳೆದುಕೊಂಡ ಬಾಧಿತರು ಪುನರ್ ಉದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ, 19 ರಂದು ಕಡೂರು ಪಿಕಾರ್ಡ್ ಬ್ಯಾಂಕ್‍ನಲ್ಲಿ ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ಹಾಗೂ 20 ರಂದು ತರೀಕೆರೆ ಬಿ.ಎಚ್.ರಸ್ತೆಯ ಹೋಟೆಲ್ ಅರಮನೆಯಲ್ಲಿ ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟಲೈಜೇಶನ್ ಮತ್ತು ಸಾಮಾಜಿಕ ಜಾಲತಾಣ ದಿನಾಚರಣೆಗಳನ್ನು ನಡೆಸಲಾಗುವುದು ಎಂದು ವಿವರಿಸಿದರು.
ಸಪ್ತಾಹ ಆಚರಣೆಯ ದಿನಗಳಲ್ಲಿ ಹಿರಿಯ ಸಹಕಾರಿಗಳು, ಜನಪ್ರತಿನಿಧಿಗಳು. ಇಲಾಖಾಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅತ್ಯುತ್ತಮವಾಗಿ, ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾದರಿ ಸಹಕಾರ ಸಂಘಗಳನ್ನು ವಲಯವಾರು ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಎಲ್.ರಮೇಶ್, ನಿರ್ದೇಶಕರಾದ ಎಸ್.ಎನ್.ರಾಮಸ್ವಾಮಿ, ಕೆ.ಆರ್.ಆನಂದಪ್ಪ, ಎಸ್.ವಿ.ಬಸವರಾಜಪ್ಪ, ಸಹಕಾರ ಯೂನಿಯನ್‍ನ ಆಡಳಿತಾಧಿಕಾರಿ ಜಿ.ಎಸ್.ಲಕ್ಷ್ಮೀನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.