

ಮೈಸೂರು: ಕಾಲಕ್ಕೆ ತಕ್ಕಂತೆ ಬದಲಾಗುವ ಕಾನೂನು, ನೀತಿ-ನಿಯಮಗಳು ಮತ್ತು ತಂತ್ರಜ್ಞಾನವನ್ನು ಸಹಕಾರ ಸಂಘಗಳು ಅಳವಡಿಕೆ ಮಾಡಿಕೊಳ್ಳಬೇಕು. ಇಲ್ಲವಾದರೆ, ಬೆಳವಣಿಗೆ ಕುಂಠಿತವಾಗಲಿದೆ. ಉತ್ತಮ ಆಡಳಿತ ನಡೆಸಲೂ ಆಗಲ್ಲ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ನಂಜನಗೌಡ ಹೇಳಿದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ವತಿಯಿಂದ ಸಹಕಾರಿ ಸೌಹಾರ್ದ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಿಗೆ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಆಡಳಿತ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಹಕಾರಿ ನಿಯಮಗಳು, ಬದಲಾಗುವ ಕಾನೂನು, ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಉತ್ತಮ ಆಡಳಿತ ನಡೆಸುವುದಕ್ಕೆ ಆಗುವುದಿಲ್ಲ. ನಿರ್ದೇಶಕರು ತಮ್ಮ ಹಕ್ಕು, ಕರ್ತವ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಕೆಲವರು ಪ್ರತಿಷ್ಠೆ, ಗೌರವ, ನಾಮ್‌ಕೇವಾಸ್ತೆಗಾಗಿ ಸಹಕಾರಿ ಸಂಘಗಳಿಗೆ ನಿರ್ದೇಶಕರಾಗುತ್ತಾರೆ. ಆಡಳಿತದಲ್ಲಿ ಆಸಕ್ತಿ ಇಲ್ಲದಿದ್ದರೆ ಹಣ ದುರುಪಯೋಗ, ಭ್ರಷ್ಟಾಚಾರದ ಪ್ರಕರಣಗಳು ನಡೆಯಬಹುದು. ಸಣ್ಣ ಪ್ರಮಾಣದ ತಪ್ಪುಗಳನ್ನು ಆರಂಭದಲ್ಲೇ ಪತ್ತೆ ಮಾಡಿ ಸರಿಪಡಿಸಬೇಕು. ಇಲ್ಲವಾದರೆ ದೊಡ್ಡ ತಪ್ಪಿಗೆ ದಾರಿ ಮಾಡಿಕೊಡುತ್ತದೆ. ಇದರಿಂದ ಇಡೀ ಸಂಘವೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ನಿರ್ದೇಶಕರು ತಮ್ಮ ಹಕ್ಕು, ಕರ್ತವ್ಯ ಹಾಗೂ ಹೊಣೆಗಾರಿಕೆ ಅರಿತು ಹಣಕಾಸಿನ ವ್ಯವಹಾರವನ್ನು ಪಾರದರ್ಶಕವಾಗಿ ನಡೆಸಬೇಕು. ಇದರಿಂದ ಸಂಘ ಪ್ರಗತಿ ಹೊಂದಲು ಸಾಧ್ಯ ಎಂದರು.
ಹಣ ದುರುಪಯೋಗವಾದಾಗ ಸಹಕಾರಿ ಸಂಘಗಳ ಸಿಇಒ ಹಾಗೂ ಕೆಲ ಅಧಿಕಾರಿಗಳ ಮೇಲೆ ಆರೋಪ ಬರುವುದು ಸಹಜ. ಕೆಲ ಸಲ ಸಾಲ ನೀಡುವಾಗ ವ್ಯಕ್ತಿಗಳ ಪೂರ್ವಾಪರ ಪರಿಶೀಲಿಸದೆ, ಯಾವುದೋ ಒಬ್ಬ ನಿರ್ದೇಶಕರು ಒತ್ತಡ ಹೇರಿದರು ಎಂದ ಮಾತ್ರಕ್ಕೆ ಸಾಲ ಮಂಜೂರು ಮಾಡುವುದು ಸರಿಯಲ್ಲ. ಇದರಿಂದ ಸಂಘ ಆರ್ಥಿಕ ತೊಂದರೆಗೆ ಒಳಗಾಗಲಿದೆ. ಕಾನೂನು ಕ್ರಮಕ್ಕೆ ಒಳಗಾಗಬೇಕಾದ ಸ್ಥಿತಿ ಎದುರಾಗುತ್ತದೆ. ಈ ಕಾರಣದಿಂದ ನಿರ್ದೇಶಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಲೆಕ್ಕಪತ್ರ ಅವಲೋಕನ ಮಾಡಿ, ಆಡಳಿತ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಮೀಟರ್ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೌಹಾರ್ದ ಸಹಕಾರಿ ಸಂಘಗಳನ್ನು ಅಸ್ತಿತ್ವಕ್ಕೆ ಬಂದಿದೆ. ಆದರೀಗ ಮೂಲ ಉದ್ದೇಶವನ್ನು ಮರೆತು ಕೆಲ ಸಂಘಗಳು ಶೇ.24, 30ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಿವೆ. ಠೇವಣಿ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ನಿಯಮ ರೂಪಿಸಿದೆ. ಆದ್ದರಿಂದ ಹಣಕಾಸಿನ ವ್ಯವಹಾರ ಪಾರದರ್ಶಕವಾಗಿ ನಡೆಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನಮ್ಮ ಸಂಘದ 4 ವಿಭಾಗಗಳ ಪೈಕಿ 3 ವಿಭಾಗಗಳಿಗೂ ಸ್ವತಃ ಕಟ್ಟಡವಿದೆ. ಮೈಸೂರು ವಿಭಾಗಕ್ಕೆ ಮಾತ್ರ ಸ್ವಂತ ಕಟ್ಟಡ ಇಲ್ಲ. ಈಗಾಗಲೇ ನಿವೇಶನ ಖರೀದಿಸಿದ್ದು, 5.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು ಎಂದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ಸಂಘದ ನಿರ್ದೇಶಕರ ನಿರಾಸಕ್ತಿ ಮತ್ತು ಕೆಲವರ ಹಿಡಿತದಲ್ಲಿ ಇದ್ದಾಗ ಮಾತ್ರ ಸಂಘದ ಚಟುವಟಿಕೆಗಳಲ್ಲಿ ಏರುಪೇರಾಗುತ್ತದೆ. ಹಣ ದುರುಪಯೋಗದಂತಹ ಪ್ರಮಾದಕ್ಕೂ ಅವಕಾಶ ದೊರೆಯುತ್ತಿದೆ. ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ್, ನಿರ್ದೇಶಕರಾದ ಎಸ್.ಕೆ.ಮಂಜುನಾಥ್, ಭಾರತಿ ಜಿ.ಭಟ್, ಮೈಸೂರು, ಮಂಡ್ಯ, ಕೊಡಗು ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಸ್.ಆರ್.ನಾರಾಯಣರಾವ್, ನಿವೃತ್ತ ಲೆಕ್ಕ ಪರಿಶೋಧನಾ ಉಪನಿರ್ದೇಶಕ ರಾಮಪ್ಪ ಇತರರು ಇದ್ದರು.