ಡಿ.13 ರಂದು ಸಹಕಾರ ಸಂಘದ ಅವ್ಯವಹಾರ ಖಂಡಿಸಿ ಪ್ರತಿಭಟನೆ

background (2)
ಮಲ್ಲಯ್ಯ ಕಟ್ಟಿಮನಿ
Published on

ದೇವದುರ್ಗ: ತಾಲೂಕಿನ ಸಹಕಾರಿ ಸಂಘಗಳು ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿವೆ. ಮೇಲಧಿಕಾರಿಗಳಿಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಇದನ್ನು ಖಂಡಿಸಿ ಡಿ.13ರಂದು ಪಟ್ಟಣದ ಆರ್‌ಡಿಸಿಸಿ ಬ್ಯಾಂಕ್ ಮುಂಭಾಗ ಪ್ರತಿಭಟನಾ ನಡೆಸಲಾಗುವುದು ಎಂದು ಮುಂಡರಗಿ ಸಹಕಾರ ಸಂಘದ ಉಪಾಧ್ಯಕ್ಷ ಮಲ್ಲಯ್ಯ ಕಟ್ಟಿಮನಿ ಹೇಳಿದರು.

ಅವ್ಯವಹಾರದಿಂದ ಸಹಕಾರ ಸಂಘಗಳಿಗೆ ಹೊಡೆತ

ಪಟ್ಟಣದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವ್ಯವಹಾರದಿಂದ ಸಹಕಾರ ಸಂಘಗಳು ನಶಿಸಿ ಹೋಗುವಂತಾಗಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಂಡರಗಿ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಸೆ.27ರಂದು ನಿಯಮಬಾಹಿರವಾಗಿ ತಾತ್ಕಾಲಿಕ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. ಈ ಕುರಿತು ದೂರು ಸಲ್ಲಿಸಿದ್ದರಿಂದ ನ.27ರಂದು ಸಹಾಯ ನಿಬಂಧಕರು ತಾತ್ಕಾಲಿಕ ಕಾರ್ಯದರ್ಶಿ ಜವಾಬ್ದಾರಿಯನ್ನು ಅಸಿಂಧುಗೊಳಿಸಿದ್ದರು. ಆರ್‌ಡಿಸಿಸಿ ಬ್ಯಾಂಕ್ ಸಹಕಾರ ಸಂಘದ ಪ್ರತಿನಿಧಿ ಮೈಹಿಬೂಬ್ ಪಾಷಾ ಕಾನೂನು ಕ್ರಮಕೈಗೊಳ್ಳದೆ ಸಹಕಾರ ಸಂಘದ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು.
ಜಾಲಹಳ್ಳಿ ಸಹಕಾರ ಸಂಘದ ನಿವೃತ್ತ ಕಾರ್ಯದರ್ಶಿಗೆ ಪುನಃ ಅಧಿಕಾರ ವಹಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತಿದೆ. ಹಿಂದೆ ಸಹಕಾರ ಸಂಘದ ಕಾರ್ಯದರ್ಶಿಗಿದ್ದ ವೀರಭದ್ರಪ್ಪ ಸಹಕಾರ ಸಂಘದ 20 ಲಕ್ಷ ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಿಕೊಂಡಿದ್ದರು. ಈ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರು ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇವದುರ್ಗ ಪಟ್ಟಣದ ಸಹಕಾರ ಸಂಘದಲ್ಲಿ ನಿಯಮ ಬಾಹಿರ ಚಟುವಟಿಕೆಗಳ ಕುರಿತು ಸೆ.21ರಂದು ದೂರು ಸಲ್ಲಿಸಲಾಗಿತ್ತು. ಸಹಕಾರಿ ತಾಲೂಕು ವಿಸ್ತರಣಾಧಿಕಾರಿ ಕಾನೂನು ಕ್ರಮ ಕೈಗೊಳ್ಳದೆ ರಕ್ಷಣೆ ಮಾಡಿದ್ದಾರೆ. ಈ ಎಲ್ಲ ನಿಯಮ ಬಾಹಿರ ಕ್ರಮ ಖಂಡಿಸಿ ಒಂದು ದಿನದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ಜಿ.ಬಸವರಾಜ ನಾಯಕ, ತಾಯಪ್ಪ ಗೋಸಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net