ಸಹಕಾರ ಸಂಘಗಳು ರೈತರ ಪಾಲಿನ ಆಕ್ಸಿಜನ್

22 RPT 1
ಕೋಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಗೋಪಾಲಕೃಷ್ಣ ಬೇಳೂರು, ಷಡಕ್ಷರಿ, ವೇದಾಂತಪ್ಪ ಗೌಡ, ಎಂ.ಎಂ.ಪರಮೇಶ ಇತರರಿದ್ದರು.
Published on

ರಿಪ್ಪನ್‌ಪೇಟೆ: ಹಿಂದಿನ ದಿನಗಳಲ್ಲಿ ತಮ್ಮ ಜೀವನಕ್ಕಾಗಿ ಉಳ್ಳವರಿಂದ ಹುಲಿ ಭತ್ತ ತಂದು ತಿರುವಳಿ ಮಾಡಲಾಗದೆ ಸಂಕಷ್ಟ ಎದುರಿಸುತ್ತಿದ್ದ ರೈತ ವರ್ಗಕ್ಕೆ ಸಾಲ ನೀಡುವ ಮೂಲಕ ಆಸರೆಯಾದ ಕೃಷಿ ಪತ್ತಿನ ಸಹಕಾರ ಸಂಘಗಳು ಅನ್ನದಾತರನ್ನು ಶೋಷಣೆಯಿಂದ ಹೊರತಂದಿವೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.

ಕೋಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಬಾರ್ಡ್ ಯೋಜನೆಯಡಿ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಹುಸೇವಾ ವಾಣಿಜ್ಯ ಸಂಕೀರ್ಣ ಗೋದಾಮನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಸ್ಥೆಗಳು ಇಂದು ಆಕಾಶದಷ್ಟು ವಿಶಾಲವಾಗಿ ಬೆಳೆದಿವೆ. ಮೊದಲು ಹೆಚ್ಚು ಠೇವಣಿ ಇಡುವವರನ್ನು ಹುಡುಕುತ್ತಿದ್ದ ಸಹಕಾರಿ ಸಂಘಗಳು ಈಗ ಹೆಚ್ಚು ಸಾಲ ತೆಗೆದು ಕೊಳ್ಳುವವರನ್ನು ಹುಡುಕುವಷ್ಟು ಬದಲಾವಣೆಯಾಗಿವೆ. ಕೋಡೂರಿನ ಸಂಘ ಎಲ್ಲರ ಪರಿಶ್ರಮದಿಂದ ಬೆಳೆದ ಪರಿಣಾಮವಾಗಿ ನಬಾರ್ಡ್, ಆಡಳಿತಕ್ಕೆ ಅನುಕೂಲ ಕಲ್ಪಿಸುವ ಸುಸಜ್ಜಿತ ಗೋದಾಮು ನಿರ್ಮಾಣ ಮಾಡಿದೆ ಎಂದರು.
ಸಂಘ ಗಳಿಸುವ ಲಾಭದಲ್ಲಿ ಪ್ರತಿಯೊಬ್ಬ ಷೇರುದಾರನ ಪಾಲಿದ್ದು ಪ್ರತಿಯೊಂದು ವ್ಯವಹಾರ ವಹಿವಾಟುಗಳನ್ನು ಸಂಘದಲ್ಲಿಯೇ ನಡೆಸಿದರೆ ಸಂಸ್ಥೆ ಅಭಿವೃದ್ಧಿ ಆಗುತ್ತದೆ. ಸಂಘಗಳಿಗೆ ನಿರ್ದೇಶಕರಾಗುವವರು ಒಳ್ಳೆಯ ಮನಸ್ಸಿನವರಾಗಿರಬೇಕು. ಕನಿಷ್ಠ ಸಂಘದ ಲೆಕ್ಕಪತ್ರವನ್ನಾದರೂ ನೋಡಲು, ಓದಲು ಬರಬೇಕು. ಇಲ್ಲದಿದ್ದಲ್ಲಿ ಲೋಪ ಆಗುವ ಅಪಾಯವಿರುತ್ತದೆ. ಸಹಕಾರಿ ಸಂಘಗಳೆಂದಾಕ್ಷಣ ಕೆಲವರು ಕದಿಯಲೆಂದೇ ಚುನಾಯಿತರಾಗಿ ಬರುತ್ತಿದ್ದರು. ಯಾರು ಸಹಕಾರ ಸಂಘದ ಮೇಲುಸ್ತುವಾರಿಯನ್ನು ನೋಡಬೇಕೋ ಅವರೇ ಕದಿಯುವವರಾದರೆ ಆ ಸಂಘದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್‌ನಲ್ಲಿ ಅವ್ಯವಹಾರವಾದಾಗ ಮನಸ್ಸಿಗೆ ಬಹಳ ನೋವಾಯಿತು. ಕಾರಣ ಜಿಲ್ಲಾ ಕೇಂದ್ರ ಬ್ಯಾಂಕನ್ನೇ ನಂಬಿದ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮುಳುಗುವ ಅಪಾಯದಲ್ಲಿದ್ದವು. ಕಲಾನಾಥೇಶ್ವರ ಪತ್ತಿನ ಸಹಕಾರ ಸಂಘದಿಂದಲೇ ನನ್ನ ರಾಜಕೀಯ ಆರಂಭವಾಗಿದ್ದು ಸಹಕಾರ ಸಂಘಗಳ ಸಾದಕ ಬಾಧಕಗಳನ್ನು ಅರಿತಿದ್ದೇನೆ. ಜನರ ಏಳಿಗೆಯಲ್ಲಿ ಶ್ರಮಿಸುವ ಸಹಕಾರಿ ಸಂಸ್ಥೆಗಳು ಯಾರದೋ ಕಪಿಮುಷ್ಠಿಗೆ ಸಿಲುಕಿ ನಲುಗಿದರೆ ನೋವಾಗುತ್ತದೆ. ವಾರ್ಷಿಕ ಮಹಾಸಭೆಗಳಲ್ಲಿ ಸದಸ್ಯರು ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನುತಟ್ಟಿ, ತಪ್ಪು ಮಾಡಿದರೆ ಸಹಿಸಬೇಡಿ. ಹಾಗೇನಾದರೂ ಹೊಂದಾಣಿಕೆ ಮಾಡಿಕೊಂಡಲ್ಲಿ ಸಹಕಾರ ಸಂಘಗಳ ಉದ್ದೇಶ ಹಾಗೂ ಅಸ್ಥಿತ್ವ ನಶಿಸುತ್ತದೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ರೈತರು ಅಪ್ಪ ನೆಟ್ಟ ಆಲದಮರದಲ್ಲಿಯೇ ಜೋತು ಬೀಳದೆ ಯಾಂತ್ರಿಕೃತ ಕೃಷಿ ಚಟುವಟಿಕೆಗೆ ಹೊಂದಿಕೊಳ್ಳಬೇಕು. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಸಂಘವನ್ನು ಸುಸ್ಥಿರವಾಗಿಟ್ಟುಕೊಂಡು ಮಾದರಿ ಆದರ್ಶ ರೈತರಾಗಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎಲ್.ಷಡಕ್ಷರಿ ಮಾತನಾಡಿ, ಸಾರ್ವಜನಿಕ ಎಲ್ಲ ಕ್ಷೇತ್ರಗಳಲ್ಲಿಯೂ ನಾನು ಜನರಿಂದ ಆಯ್ಕೆಯಾಗಿ ಅನುಭವವನ್ನು ಪಡೆದುಕೊಂಡಿದ್ದೇನೆ. ಆದರೆ ಸಹಕಾರ ಸಂಘದ ಕೆಲಸದಲ್ಲಿ ಸಿಗುವ ನೆಮ್ಮದಿ ಮತ್ತ್ಯಾವುದರಲ್ಲಿಯೂ ಇಲ್ಲ. ಜನೋಪಯೋಗಿ ಕಾರ್ಯಕ್ಕೆ ಡಿಸಿಸಿ ಬ್ಯಾಂಕ್ ಸದೃಢವಾಗಿದ್ದು, ಸಹಕಾರ ಸಂಘಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಘದ ಅಧ್ಯಕ್ಷ ವೇದಾಂತಪ್ಪ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಂ.ಪರಮೇಶ್, ಪ್ರಮುಖರಾದ ಕಲಗೋಡು ರತ್ನಾಕರ್, ಬಿ.ಜಿ.ಚಂದ್ರಮೌಳಿ, ವಿನಯ್‌ಕುಮಾರ್, ಗ್ರಾಪಂ ಅಧ್ಯಕ್ಷ ಉಮೇಶ್, ಸಂಘದ ನಿರ್ದೇಶಕರಾದ ಸುಬ್ಬಣ್ಣ, ಕುಮಾರಸ್ವಾಮಿ, ವಾಸುದೇವ ಕುನ್ನೂರು, ಜಯಪ್ರಕಾಶ ಶೆಟ್ಟಿ, ವೀರೇಂದ್ರ, ಗಂಗಮ್ಮ, ಗೌರಮ್ಮ, ಹರೀಶ, ರಾಜು, ಪರಮೇಶ್, ಕಾರ್ಯನಿರ್ವಹಣಾಧಿಕಾರಿ ರಾಜಶೇಖರ್ ಇತರರಿದ್ದರು.

ಸಮಸ್ಯೆಗಳನ್ನು ನನ್ನ ಗಮನಕ್ಕೆ ತನ್ನಿ; ಆತ್ಮಹತ್ಯೆ ಮಾಡಿಕೊಳ್ಳಬೇಡಿ
ಪ್ರಸ್ತುತ ಸಾಲಿನಲ್ಲಿ ಮಳೆ ಕೊರತೆಯು ರೈತರಲ್ಲಿ ಆತಂಕ ಸೃಷ್ಟಿಸಿದೆ. ಆದರೆ ಬಹು ಬೆಳೆಗಳನ್ನು ಅವಲಂಬಿಸಿ ಸರ್ಕಾರದ ಯೋಜನೆಯಿಂದ ದೊರೆಯುವ ಸಾಲ ಸೌಲಭ್ಯಗಳನ್ನು ಪಡೆದು ಸದ್ಬಳಕೆ ಮಾಡಿಕೊಳ್ಳಿ ಎಂದು ರೈತರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು. ಕಠಿಣ ಪರಿಸ್ಥಿತಿಯಲ್ಲಿದ್ದ ರೈತರಿಗೆ ಆರ್ಥಿಕ ನೆರವನ್ನು ನೀಡಿ ಕಾಲಕಾಲಕ್ಕೆ ಸರಿಯಾಗಿ ಮಾಹಿತಿ, ಮಾರ್ಗದರ್ಶನ ನೀಡುವ ಮೂಲಕ ಸಹಕಾರ ಸಂಘಗಳು ರೈತರ ದನಿಯಾಗಬೇಕು. ಕಷ್ಟ ಬಂದಿದೆ ಎಂದು ಆತಂಕಕ್ಕೊಳಗಾಗುವ ರೈತರು ಆತ್ಮಹತ್ಯೆಗೆ ಮನಸ್ಸು ಮಾಡಬೇಡಿ. ಸಮಸ್ಯೆಗಳನ್ನು ನನ್ನ ಹಾಗೂ ಸರ್ಕಾರದ ಗಮನಕ್ಕೆ ತನ್ನಿ. ನಿಮ್ಮ ಬೆಂಗಾವಲಾಗಿ ನಾವೀರುತ್ತೇವೆ. ಭಯ ಪಡಬೇಡಿ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net