

ಮಡಿಕೇರಿ: ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಹೇಳುತ್ತಾರೆ. ಆದರೆ, ಸಹಕಾರ ಕ್ಷೇತ್ರ ಸೇರಿದಂತೆ ಪ್ರತಿಯೊಂದು ರಂಗದಲ್ಲಿಯೂ ಸಹ ಜಾತಿ, ಸಮಾಜ, ರಾಜಕಾರಣ ಇದ್ದೇ ಇದೆ. ಇದರ ನಡುವೆಯೂ ಹಿಂದಿನವರು ಕಟ್ಟಿಕೊಂಡು ಬಂದಿರುವ ಸಹಕಾರ ಕ್ಷೇತ್ರವನ್ನು ಬಲಪಡಿಸುವುದು ಅತ್ಯವಶ್ಯಕ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ ಪ್ರತಿಪಾದಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆಯಿಂದ ಕರ್ನಾಟಕ ಇನ್ಸ್‌ಸಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಬಾಲಭವನದಲ್ಲಿ ೭೧ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಪ್ರಾಯೋಜಿತ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರ ಕ್ಷೇತ್ರದಲ್ಲಿ ಯಾರೂ ಸಹ ಮೂಗು ತೂರಿಸಬಾರದು ಎಂದು ಹೇಳುತ್ತಾರೆ. ಆದರೆ, ಎಲ್ಲಾ ರಂಗದಲ್ಲಿಯೂ ಒಂದಲ್ಲ ಒಂದು ರೀತಿಯ ರಾಜಕಾರಣ ಇರುತ್ತದೆ. ಇದರಿಂದ ಯಾವುದೇ ರಂಗ ಹೊರತಾಗಿಲ್ಲ. ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ರಾಜ್ಯದಲ್ಲಿ ಬಲಿಷ್ಠವಾಗಿದೆ. ಹಲವು ಸಹಕಾರ ಸಂಘಗಳನ್ನು ಕಟ್ಟುವಲ್ಲಿ ಹಿರಿಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ, ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಕೊಡಗು ಜಿಲ್ಲೆಗೆ ಮೀನ-ಮೇಷ ಎಣಿಸುತ್ತಾರೆ ಎಂದು ಮನುಮುತ್ತಪ್ಪ ಬೇಸರ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದಲ್ಲಿ ಹಿರಿಯರು ಫಲಾಪೇಕ್ಷೆ ಇಲ್ಲದೆ ಸಹಕಾರ ಸಂಘಗಳನ್ನು ಉಳಿಸಿ-ಬೆಳೆಸಿಕೊಂಡು ಬಂದಿರುವುದಕ್ಕೆ ಕೃತಜ್ಞತೆ ಸಲ್ಲಿಸಬೇಕು. ಸಹಕಾರ ಸಂಘಗಳಲ್ಲಿ ದುಡಿಯುತ್ತಿರುವವರಲ್ಲಿ ಯಾವುದೇ ರೀತಿಯ ಸ್ವಾರ್ಥ ಇರಬಾರದು. ಸ್ವಾರ್ಥ ಇದ್ದಲ್ಲಿ ಸಹಕಾರ ಸಂಘಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದರು.
ಅಭಿವೃದ್ಧಿಯಲ್ಲಿ ಇಡೀ ವಿಶ್ವದಲ್ಲಿ ಭಾರತವು ೧೧ನೇ ಸ್ಥಾನದಲ್ಲಿದ್ದು, ೪ನೇ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಪ್ರಧಾನಮಂತ್ರಿ ಶ್ರಮಿಸುತ್ತಿದ್ದಾರೆ. ೨೦೪೭ರ ವೇಳೆಗೆ ಇಡೀ ವಿಶ್ವದಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮುನ್ನಡೆಯುವಂತಾಗಲು ಪ್ರಯತ್ನಿಸಲಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಆಗಬೇಕು ಎಂಬ ಉದ್ದೇಶದಿಂದ ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳನ್ನು ಬಲಪಡಿಸುವಲ್ಲಿ ಮುಂದಾಗಲಾಗಿದೆ ಎಂದು ಹೇಳಿದರು.
ಹಿರಿಯ ಸಹಕಾರಿಗಳು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳನ್ನು ಹಿರಿಯರು ಉಳಿಸಿ, ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಆ ನಿಟ್ಟಿನಲ್ಲಿ ಸಹಕಾರ ಸಂಘಗಳನ್ನು ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಸಾಧಿಸುವತ್ತ ಗಮನಹರಿಸಬೇಕು. ಕೊಡಗು ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಸೇರಿದಂತೆ ಕಲೆ, ಸಾಹಿತ್ಯ, ಜಾನಪದ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆಗೆ ಒತ್ತು ನೀಡಲು ಶ್ರಮಿಸಲಾಗಿದೆ. ಎಲ್ಲರ ಸಹಕಾರಗಳಿಂದ ಇಂತಹ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು ಎಂದು ರಾಣಿ ಮಾಚಯ್ಯ ಸ್ಮರಿಸಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ನಾಪಂಡ ಉಮೇಶ್ ಉತ್ತಪ್ಪ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ದುಡಿದವರನ್ನು ಗುರುತಿಸಿ ಗೌರವಿಸುವುದು ಅತ್ಯಗತ್ಯವಾಗಿದೆ. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಎಲ್ಲರೂ ಶ್ರಮಿಸಬೇಕಿದೆ. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಸಮಾಜಮುಖಿಯಾಗಿ ಯೋಚಿಸಬೇಕು. ಆ ನಿಟ್ಟಿನಲ್ಲಿ ಸಹಕಾರ ಸಂಘಗಳ ಮಹತ್ವ ಬಗ್ಗೆ ಎಲ್ಲರಲ್ಲಿಯೂ ಅರಿವಿರಬೇಕು ಎಂದರು.
ಕೆಐಸಿಎಂನ ನಿವೃತ್ತ ಪ್ರಾಂಶುಪಾಲೆ ಎಂ.ಎಂ.ಶ್ಯಾಮಲ ಅವರು ಸಹಕಾರ ಕ್ಷೇತ್ರದ ಮಹತ್ವ ಕುರಿತು ಮಾತನಾಡಿದರು. ಕೊಡಗು ಜಿಲ್ಲೆಯ ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ನಂದಿನೆರವಂಡ ರವಿ ಬಸಪ್ಪ, ಕಾಯಪಂಡ ಟಾಟ ಚಂಗಪ್ಪ, ಪಾಸುರ ಎನ್.ಉತ್ತಪ್ಪ, ಹಾಗೂ ಶ್ರೇಷ್ಠ ಮಹಿಳಾ ಸಹಕಾರಿ ಮೊಳ್ಳೆರ ಸರಸು ಪೊನ್ನಪ್ಪ ಅವರನ್ನು ಇದೇ ಸನ್ಮಾನಿಸಿ ಗೌರವಿಸಲಾಯಿತು.
ಸಹಕಾರ ಸಂಘಗಳ ಉಪ ನಿಬಂಧಕ ಜಿ.ಆರ್.ವಿಜಯ್ ಕುಮಾರ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ನಿರ್ದೇಶಕರಾದ ಬಿದ್ದಾಟಂಡ ರಮೇಶ್ ಚಂಗಪ್ಪ, ಪಿ.ಸಿ.ಅಚ್ಚಯ್ಯ, ಪ್ರೇಮ ಸೋಮಯ್ಯ, ಕೋಡಿರ ಎಂ.ತಮ್ಮಯ್ಯ ಇತರರು ಇದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ವಂದಿಸಿದರು, ಮಂಜುಳಾ ಪ್ರಾರ್ಥಿಸಿದರು.