ಅಧಃಪತನದತ್ತ ಜಿಲ್ಲೆಯ ಸಹಕಾರಿ ಕ್ಷೇತ್ರ

26 sira 3
ಶಿರಾದಲ್ಲಿ ಜೆಡಿಎಸ್​ನಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಎಸ್​.ಆರ್​.ಗೌಡ, ಆರ್​.ಉಗ್ರೇಶ್​, ತಾಲೂಕು ಜೆಡಿಎಸ್​ ಅಧ್ಯಕ್ಷ ಸತ್ಯಪ್ರಕಾಶ್​, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಾಶಾಮಯ್ಯ ಇತರರು ಇದ್ದರು.
Published on

ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಎಸ್​.ಆರ್​.ಗೌಡ ಬೇಸರ

ಶಿರಾ: ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್​ ಏಕ ವ್ಯಕ್ತಿ ಕಪಿಮುಷ್ಠಿಯಲ್ಲಿದ್ದು, ಇದರಿಂದ ಸಹಕಾರಿ ಕ್ಷೇತ್ರ ಅಭಿವೃದ್ಧಿಯಾಗದೆ ಅಧಃಪತನದತ್ತ ಸಾಗುತ್ತಿದೆ. ಆ.24ರಂದು ನಡೆದ ಚುನಾವಣೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್​.ಆರ್​.ಗೌಡ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 24ರಂದು ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕಿಗೆ ನಡೆದ ಚುನಾವಣೆಯಲ್ಲಿ ಶಿರಾ ತಾಲೂಕಿನಿಂದ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ 10 ಮಂದಿ ಡೆಲಿಗೇಟ್ಸ್​ಗಳು ಮತ ಚಲಾಯಿಸಿರುವು ಹೆಮ್ಮೆಯ ಸಂಗತಿ. ಶಿರಾ ತಾಲೂಕಿನಲ್ಲಿ ಒಟ್ಟು 28 ಡೆಲಿಗೆಟ್ಸ್​ಗಳಿದ್ದು, ಅದರಲ್ಲಿ ಸುಮಾರು 25 ಡೆಲಿಗೇಟ್ಸ್​ಗಳಿಗೆ ಕೇವಲ ಮತದಾನದ ಹಕ್ಕು ನೀಡಿ ಅವರು ಚುನಾವಣೆಗೆ ಸ್ಪರ್ಧಿಸುವ ಹಕ್ಕನ್ನು ಕಸಿದಿದ್ದಾರೆ. ಇದಕ್ಕೆ ಒಂದು ತಿಂಗಳ ಮೊದಲೇ ಸಭಾ ನಡವಳಿ ನಡೆಸಿ ಏಕಪಕ್ಷೀಯ ತೀಮಾರ್ನ ಮಾಡಿ ಸದಸ್ಯರಿಂದ ಸಹಿ ಮಾಡಿಸಿದ್ದಾರೆ ಎಂದು ಆರೋಪಿಸಿದರು. ಇದು ಸಹಕಾರಿ ಕ್ಷೇತ್ರದಲ್ಲಿ ಅವ್ಯವಸ್ಥೆಗೆ ಕಾರಣವಾಗಿದೆ. ಸಂಘಗಳು ಮುಕ್ತವಾಗಿ ಮತ ಚಲಾಯಿಸುವಂತಾಗಬೇಕು ಎಂಬುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೋರಾಡುತ್ತೇವೆ ಎಂದರು.

ರಾಜ್ಯ ಜೆಡಿಎಸ್​ ಕೋರ್​ ಕಮಿತಿ ಸದಸ್ಯ ಆರ್​.ಉಗ್ರೇಶ್​ ಮಾತನಾಡಿ, ಮತದಾನದ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಯಾವುದೇ ಕಾರಣಕ್ಕೂ ಸೋಲಿನಿಂದ ಧೃತಿಗೆಡುವುದಿಲ್ಲ. ಅಧಿಕಾರ ಶಾಶ್ವತವಲ್ಲ, ಪಕ್ಷದ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.

ತಾಲೂಕು ಜೆಡಿಎಸ್​ ಅಧ್ಯಕ್ಷ ಸತ್ಯಪ್ರಕಾಶ್​, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್​, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಡಿ.ನರಸಿಂಹಮೂರ್ತಿ, ಯುವ ಜೆಡಿಎಸ್​ ಘಟಕದ ಅಧ್ಯಕ್ಷ ಪುನೀತ್​ ಗೌಡ, ಮುಖಂಡರಾದ ಮುದ್ದು ಗಣೇಶ್​, ರಂಗನಾಥ, ಈರಣ್ಣ, ಶ್ರೀಧರ್​, ಸುನಿಲ್​ ಕುಮಾರ್​, ಮಹಾದೇವ್​, ಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net