

ಸಿದ್ದಾಪುರ: ಸಹಕಾರಿ ಕ್ಷೇತ್ರ ರೈತರಿಗೆ ಆಲದ ಮರ ಇದ್ದಂತೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಲೋಪ ಹತ್ತದಂತೆ ನೋಡಿಕೊಳ್ಳುವುದು ಮುಖ್ಯ. ರಾಜ್ಯದಲ್ಲಿಯೇ ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸ್ಥಳೀಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಅನ್ನಪೂರ್ಣ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಮೃತಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಅಡಕೆಗೆ ಎಲೆ ಚುಕ್ಕಿ ರೋಗ ಸೇರಿ ವಿವಿಧ ರೋಗಗಳು ಹರಡುತ್ತಿರುವುದರಿಂದ ರೈತರು ಮಿಶ್ರಬೆಳೆ ಬೆಳೆಯಲು ಮುಂದಾಗಬೇಕು. ಸರ್ಕಾರ ಯಾವತ್ತೂ ರೈತರನ್ನು ಕೈಬಿಡುವುದಿಲ್ಲ. ಕಸ್ತೂರಿ ರಂಗನ್ ವರದಿಯನ್ನು ಈಗಾಗಲೇ ವಿರೋಧಿಸಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬೆಟ್ಟ ಲ್ಯಾಂಡ್ ಅನ್ನು ಈ ಹಿಂದಿನಂತೆ ಅಡಕೆ ಬೆಳೆಗಾರರ ಭಾಗಾಯತಕ್ಕೆ ಮಾಡಿಕೊಡುವಂತೆ ಈಗಾಗಲೇ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.
ಅಮೃತ ಸಿಂಚನ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸದಸ್ಯರಿಗೆ ನೆನಪಿನ ಕಾಣಿಕೆ ವಿತರಿಸಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ, ಎಲ್ಲಿ ಸಹಕಾರಿ ಕ್ಷೇತ್ರ ಜೀವಂತವಾಗಿ ಇರುತ್ತದೆಯೋ ಅಲ್ಲಿ ರೈತ ಜೀವಂತವಾಗಿರುತ್ತಾನೆ. ಎಲ್ಲಿ ಸಹಕಾರಿ ಕ್ಷೇತ್ರ ದುರ್ಬಲವಾಗಿರುತ್ತದೆಯೋ ಅಲ್ಲಿ ರೈತ ಶಕ್ತಿಯುತನಾಗಿ ಬದುಕುವುದು ಅಸಾಧ್ಯ. ಉಕ ಜಿಲ್ಲೆಯಲ್ಲಿ ಹಿರಿಯರ ಸಹಕಾರದಿಂದ ಸಹಕಾರಿ ಕ್ಷೇತ್ರ ಉತ್ತಮವಾಗಿ ಬೆಳೆದು ರೈತರ ಆಶೋತ್ತರಗಳನ್ನು ಈಡೇರಿಸುತ್ತಿದೆ ಎಂದರು. ಸಂಘದ ಅಧ್ಯಕ್ಷ ಎಂ.ಎಲ್. ಭಟ್ಟ ಉಂಚಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವ್ಯೆದ್ಯ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಹೆಗ್ಗರಣಿ ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣ ಚೆನ್ನಯ್ಯ, ತಂಡಾಗುಂಡಿ ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಗೌಡ, ಇತರರು ಉಪಸ್ಥಿತರಿದ್ದರು.
ಸಂಘದ ಮಾಜಿ ಹಾಗೂ ಹಾಲಿ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು, ಆಡಳಿತ ಮಂಡಳಿ ಸದಸ್ಯರು, ಸಂಘದಲ್ಲಿ ವ್ಯವಹಾರ ಮಾಡಿದ ಹಿರಿಯ ಸದಸ್ಯರು ಹಾಗೂ ಸಂಘದ ವ್ಯಾಪ್ತಿಯ ಎಲ್ಲ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಚಿದಂಬರ ನಾಯ್ಕ ವರದಿ ವಾಚಿಸಿದರು. ಪ್ರಕಾಶ ಹೆಗಡೆ ಸಂದೇಶ ವಾಚನ ಮಾಡಿದರು. ಎಂ.ಎಸ್. ಹೆಗಡೆ, ಸುಬ್ರಾಯ ಹೆಗಡೆ ಸಾಯೀಮನೆ, ಜಯಲಕ್ಷ್ಮೀ ಹೆಗಡೆ, ಬಸವರಾಜ ಕಡಪಟ್ಟಿ ಕಾರ್ಯಕ್ರಮ ನಿರ್ವಹಿಸಿದರು.