

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ 44ನೇ ವಾರ್ಷಿಕ ಸಾಮಾನ್ಯ ಸಭೆ ಸೋಮವಾರ ಗಿರಣಿಯ ಆವರಣದಲ್ಲಿ ಜರುಗಿತು.
ಸದಸ್ಯರಾದ ಶ್ರೀಕಂಠಗೌಡ ಹಿರೇಗೌಡ್ರ, ನಿವೃತ್ತ ಶಿಕ್ಷಕ ಎ.ಎಚ್. ಅಂಚಿ, ನಾಗಪ್ಪ ಮೂಕಿ ಮಾತನಾಡಿ, ದಿ.ಗೂಳಪ್ಪ ಉಪನಾಳರು ಸಾಕಷ್ಟು ಕಷ್ಟಪಟ್ಟು ಗಿರಣಿಯನ್ನು ಕಟ್ಟಿದ್ದಾರೆ. ಆದರೆ, ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಈಗಿನ ಆಡಳಿತ ಮಂಡಳಿಯ ಮೇಲಿದೆ. ಸ್ಥಗಿತಗೊಂಡಿರುವ ಗಿರಣಿಯನ್ನು ಪುನಾರಂಭಿಸಲು ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಗಿರಣಿಗೆ ನೂತನವಾಗಿ ಸರ್ಕಾರಿ ಪ್ರತಿನಿಧಿಯಾಗಿ ನೇಮಕಗೊಂಡಿರುವ ವೀರಯ್ಯ ಮಠಪತಿ ಮಾತನಾಡಿ, 1991-92ರಲ್ಲಿ ಗಿರಣಿ ಉತ್ಪಾದನೆ ಆರಂಭಿಸಿತ್ತು. ಅಂದಿನಿಂದ ನೂರಾರು ಕುಟುಂಬಗಳಿಗೆ ಉದ್ಯೋಗ ನೀಡಿತ್ತು. ಆದರೆ, ಹತ್ತು ಹಲವು ಕಾರಣಗಳಿಂದಾಗಿ ಸಧ್ಯ ಬಂದ್ ಆಗಿದೆ. ಮತ್ತೆ ಉತ್ಪಾದನೆ ಆರಂಭವಾಗಬೇಕಾದರೆ ಸರ್ಕಾರದ ನೆರವು ಅಗತ್ಯ ಎಂದರು.
ಗಿರಣಿಯ ಮಾಜಿ ಎಂಡಿ ಜೆ. ಕೊಟ್ರೇಶ ಮಾತನಾಡಿ ಗಿರಣಿಯನ್ನು ಲೀಜ್ ಕೊಡಲು ಸಿದ್ಧವಿದ್ದರೂ ಯಾರೂ ಮುಂದೆ ಬರುತ್ತಿಲ್ಲ. ನೂಲಿಗೆ ಬೇಡಿಕೆ ಕುಸಿದಿದೆ. ಜವಳಿ ಉದ್ಯಮವೂ ನೆಲ ಕಚ್ಚಿದೆ. ರಾಜ್ಯದಲ್ಲಿ ನೂಲಿನ ಗಿರಣಿಗಳ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗಿರಣಿಯ ಅಧ್ಯಕ್ಷ ಪುಲಿಕೇಶ ಉಪನಾಳ ಮಾತನಾಡಿ ಗಿರಣಿಯ ಆಡಳಿತ ಕಚೇರಿಯನ್ನು ಅರಳು ಸಂಸ್ಥೆಗೆ ಹಾಗೂ ಸಿಬ್ಬಂದಿಯ ವಸತಿ ಗೃಹವನ್ನು ದುರಸ್ತಿ ಮಾಡಿಸಿ ಅವುಗಳನ್ನೂ ಬಾಡಿಗೆ ಆಧಾರದಲ್ಲಿ ಕೊಡಲು ವ್ಯವಸ್ಥೆ ಮಾಡಲಾಗಿದೆ. ಗಿರಣಿಯ ಸ್ಥಿತಿ ಕುರಿತು ಶಾಸಕರು, ಸಂಸದರು ಮತ್ತು ಸಂಬಂಧಿಸಿದ ಸಚಿವರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
ಗಿರಣಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಜಿ.ಬಿ. ಮೆಣಸಿನಕಾಯಿ, ನಿರ್ದೇಶಕರಾದ ನೀಲಪ್ಪ ಹತ್ತಿ, ಶಿರೂರಪ್ಪ ಬಿಸನಳ್ಳಿ, ಎನ್.ಎನ್. ರಗಟಿ, ಎಂ.ಕೆ. ಕಳ್ಳಿಮಠ, ನಾಗನೂರ, ಸಿ.ಕೆ. ಗುಂಜಳ, ಶಂಕ್ರಪ್ಪ ಗೊರವರ, ಎನ್.ಸಿ. ಧರ್ಮಾಯತ, ಬಿ.ಪಿ. ಸಾಸಲವಾಡ, ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪನಿರ್ದೇಶಕರಾದ ಎಚ್.ಬಿ. ಪಾಟೀಲ ಜಿ.ರೇವಣ್ಣ ಮತ್ತು ಸಲಹಾ ಸಮಿತಿ ಸದಸ್ಯರು ಇದ್ದರು. ಮಂಜುನಾಥ ಕುಂಬಾರ ನಿರೂಪಿಸಿದರು. ನಿರ್ಮಲಾ ಅರಳಿ ವಂದಿಸಿದರು.