

ಹುಬ್ಬಳ್ಳಿ: ನಗರದ ಕೇಶ್ವಾಪುರದಲ್ಲಿನ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸಭಾಂಗಣದಲ್ಲಿ ಸಹಕಾರ ಸಂಘಗಳ ಆಡಿಟ್ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಮಂಗಳವಾರ ಏರ್ಪಡಿಸಲಾಗಿತ್ತು.
ಧಾರವಾಡ ವಿಭಾಗದ ಸಹಕಾರ ಇಲಾಖೆಯ ಆಡಿಟ್ ವಿಭಾಗದ ಉಪ ನಿರ್ದೇಶಕ ಆರ್. ತೇಜೋಮೂರ್ತಿ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಎಲ್ಲ ಬಗೆಯ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ವರದಿಯನ್ನು ನವೀಕೃತಗೊಳಿಸಲಾಗಿದೆ. ಸಹಕಾರ ಸಂಘದ ಹಣಕಾಸಿನ ಸ್ಥಿತಿ ಬಗ್ಗೆ ಸವಿಸ್ತಾರ ಮಾಹಿತಿ ಪಡೆಯಲು ಸರ್ಕಾರ ಇಚ್ಛಿಸುತ್ತಿದೆ. ಆದ್ದರಿಂದ ಲೆಕ್ಕ ಪರಿಶೋಧಕರು, ಸೂಕ್ತ ವಿವರ ನೀಡಿ ಸಹಕಾರಿ ಇಲಾಖೆಗೆ ಗುಣಮಟ್ಟದ ಸೇವೆ ಸಲ್ಲಿಸಬೇಕೆಂದು ಮನವಿ ಮಾಡಿದರು.
ನಂತರ ನಡೆದ ತಾಂತ್ರಿಕ ಅಧಿವೇಶನಗಳಲ್ಲಿ ಸಹಕಾರ ಇಲಾಖೆಯ ಆಡಿಟ್ ವಿಭಾಗದ ನಿವೃತ್ತ ಉಪನಿರ್ದೇಶಕ ಜಿ.ಕೆ. ರಾಮಪ್ಪ ಅವರು 1959ರ ಸಹಕಾರ ಕಾಯ್ದೆಯ ಮಹತ್ವ ವಿವರಿಸಿದರು.
ಬಳ್ಳಾರಿಯ ಹಿರಿಯ ಲೆಕ್ಕ ಪರಿಶೋಧಕ ಶಿ. ಯರ್ರಿಸ್ವಾಮಿ ಅವರು ಪರಿಷ್ಕೃತ ವರದಿಯ ಸಾಧಕ-ಬಾಧಕಗಳನ್ನು ವಿಶ್ಲೇಷಿಸಿದರು.
ಭೋಜನ ವಿರಾಮದ ನಂತರ ನಡೆದ ಅಧಿವೇಶನಗಳಲ್ಲಿ ಜಿಎಸ್ಟಿ ಕಾಯ್ದೆ ಅಡಿಯಲ್ಲಿ ವ್ಯಾಜ್ಯಗಳ ನಿರ್ವಹಣೆ ಕುರಿತು ಲೆಕ್ಕಪರಿಶೋಧಕರಾದ ಕಪಿಲ್ ಭಂಡಾರ್ಕರ್ ಮತ್ತು ಕಾರ್ತಿಕ್ ಶೆಟ್ಟಿ ಉಪನ್ಯಾಸ ನೀಡಿದರು. 150 ಲೆಕ್ಕಪರಿಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹುಬ್ಬಳ್ಳಿಯ ಸಿಎ ಶಾಖೆಯ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಗತಿಸಿದರು. ಕಾರ್ಯದರ್ಶಿ ಧನಪಾಲ್ ಮುನ್ನೋಳಿ ವಂದಿಸಿದರು.