ಸಹಕಾರ ಸಂಘಗಳಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ

ಫೋಟೋ ಶೀರ್ಷಿಕೆ08 ಸಿಆರ್_ಪಿ-1ಎ
Published on

ಚನ್ನರಾಯಪಟ್ಟಣ : ಸಹಕಾರ ಸಂಘಗಳಿಂದ ಗ್ರಾಮೀಣ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ತಾಲೂಕಿನ ದಿಂಡಗೂರು ಗ್ರಾಮದಲ್ಲಿ 44 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರವು ಗ್ರಾಮೀಣ ಭಾಗದ ಜನರ ಕಲ್ಯಾಣಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಡಿಸಿಸಿ, ಪಿಎಲ್‌ಡಿ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಜನರ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.
ಸಹಕಾರಿ ಕ್ಷೇತ್ರದಲ್ಲಿ ನಾನು ಎನ್ನುವ ಬದಲಾಗಿ ನಾವು ಎಂದಾಗ ಮಾತ್ರ ಅಭಿವೃದ್ಧಿ ಸಾಧ್ಯ. ತಾಲೂಕಿನಲ್ಲಿ 68,000 ಪಹಣಿದಾರರಿದ್ದು, ಈ ಪೈಕಿ 55,000 ಪಹಣಿದಾರ ರೈತರಿಗೆ ಸಾಲ ನೀಡಲಾಗಿದೆ. ಈ ಹಿಂದೆ ವಿವಿಧ ಸಹಕಾರ ಸಂಘಗಳಿಂದ 30 ಕೋಟಿ ರೂ. ಸಾಲ ನೀಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ 330 ಕೋಟಿ ರೂ. ಸಾಲ ನೀಡುವ ಮೂಲಕ ಅತ್ಯಧಿಕ ಗುರಿ ಸಾಧಿಸಲಾಗಿದೆ.
ಜಿಲ್ಲೆಯ ಸಹಕಾರಿ ಬ್ಯಾಂಕ್‌ಗಳಲ್ಲಿ ನಾಲ್ಕು ಬಾರಿ ಮಾಡಿದ ಸಾಲ ಮನ್ನಾದಿಂದ ರೈತರಿಗೆ ನೆರವಾಗಿದೆ. ತಾಲೂಕಿನ 30 ಸಹಕಾರ ಸಂಘಗಳಲ್ಲಿ ಪಹಣಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ದಿಂಡಗೂರು ಕೃಷಿಪತ್ತಿನ ಸಹಕಾರ ಸಂಘದಲ್ಲೂ ಪಹಣಿ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದರು.
ಇದೇ ವೇಳೆ ರಾಜ್ಯ ಮಾರಾಟ ಮಂಡಳದ ವತಿಯಿಂದ ನೂತನ ಕಟ್ಟಡಕ್ಕೆ 3 ಲಕ್ಷ ರೂ. ಸಹಾಯ ಧನವನ್ನು ನಿರ್ದೇಶಕ ಸಿ.ಎನ್. ಪುಟ್ಟಸ್ವಾಮಿಗೌಡ ಹಸ್ತಾಂತರಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ, ದಿಂಡಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ, ಉಪಾಧ್ಯಕ್ಷ ರೇಣುಕಾಬಸವರಾಜು, ನಿರ್ದೇಶಕರಾದ ಮಂಜೇಗೌಡ, ವಿಜಯಕುಮಾರ, ಜೆ.ಎಸ್. ಕುಮಾರ್, ಹೇಮಂತ್‌ಕುಮಾರ್, ಚಂದ್ರಮ್ಮ ಮಹಾಲಿಂಗೇಗೌಡ, ರಂಗಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net