

ಕಾರವಾರ : ಜಿಲ್ಲೆಯಲ್ಲಿ 252 ಸಹಕಾರ ಸಂಘಗಳು ನಷ್ಟದಲ್ಲಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸಹಕಾರ ಸಂಘಗಳ ಇಲಾಖೆಯ ಅಡಿ 984 ಸಹಕಾರಿ ಹಣಕಾಸು ಸಂಸ್ಥೆಗಳು ನೋಂದಣಿಯಾಗಿ ಕಾರ್ಯ ನಿರ್ವಹಿಸುತ್ತಿವೆ. 2023-24 ರ ಆಡಿಟ್ ವರದಿಯಂತೆ 732 ಸಂಘಗಳು ಲಾಭದಲ್ಲಿದ್ದರೆ, ಇನ್ನುಳಿದವು ನಷ್ಟದಲ್ಲಿದ್ದು, ಅವುಗಳಲ್ಲಿ ಹಲವು ಮುಚ್ಚುವ ಹಂತದಲ್ಲಿವೆ.
ನಷ್ಟದಲ್ಲಿರುವ ಸಹಕಾರ ಸಂಘಗಳ ಪಟ್ಟಿ ಅವಲೋಕಿಸಿದಾಗ ಕೆಲವು ಅವ್ಯವಹಾರದ ಕಾರಣ ನಷ್ಟದ ಹಾದಿ ಹಿಡಿದಿದ್ದರೆ, ಇನ್ನು ಕೆಲವು ಅಸಮರ್ಪಕ ನಿರ್ವಹಣೆ ಹಾಗೂ ಅನಧಿಕೃತ ಕಾರ್ಯ ಚಟುವಟಿಕೆಗಳಿಂದ ನಷ್ಟದಲ್ಲಿವೆ. ಉದಾಹರಣೆಗೆ ಕಾರವಾರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್, ಕಾರವಾರದ ಆಶ್ರಯ ಪತ್ತಿನ ಸಹಕಾರ ಸಂಘ, ಶಿರಸಿಯ ಗೋಳಿ ಸಹಕಾರ ಸಂಘ ಸೇರಿ ಹಲವು ಸಂಸ್ಥೆಗಳಲ್ಲಿ ಹಣಕಾಸಿನ ಅವ್ಯವಹಾರ ಕೇಳಿ ಬಂದಿದೆ. ಒಟ್ಟಾರೆ ಜಿಲ್ಲೆಯ 8 ಸಹಕಾರಿ ಸಂಘಗಳಲ್ಲಿ 200 ಕೋಟಿಗೂ ಅಧಿಕ ಅವ್ಯವಹಾರದ ಆರೋಪ ಕೇಳಿ ಬಂದಿದ್ದು, ಸಹಕಾರ ಕಾಯ್ದೆಯ ಸೆಕ್ಷನ್ 64 ರ ಅನ್ವಯ ತನಿಖೆ ನಡೆದಿದೆ.
ಕಾರವಾರ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳೇ ಕಡಿಮೆಯಾದ ಕಾರಣ ತಾಲೂಕಿನ ಕೆಲವು ಕೃಷಿ ಸಹಕಾರಿ ಸಂಘಗಳು ನಷ್ಟದ ಹಾದಿ ಹಿಡಿದಿರುವುದು ಕಂಡು ಬರುತ್ತದೆ. ಜಿಲ್ಲೆಯಲ್ಲಿ ಹೈನೋದ್ಯಮ ಕಡಿಮೆಯಾಗುತ್ತಿರುವ ಕಾರಣ ಹಾಲು ಉತ್ಪಾದಕ ಸಹಕಾರಿ ಸಂಘಗಳು ನಷ್ಟದ ಹಾದಿ ಹಿಡಿಯುತ್ತಿರುವುದು ಕಂಡುಬತುತಿದೆ.
ಮಲೆನಾಡಿನ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಹಲವು ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘಗಳು ಘಟ್ಟಿಯಾಗಿ ಬೆಳೆದಿವೆ. ಸಹಕಾರಿ ತತ್ವದಡಿ ಕೃಷಿಕರಿಗೆ ಬೇಕಾದ ಸಾಲ ಸೌಲಭ್ಯ ಒದಗಿಸುವುದು ಮಾತ್ರವಲ್ಲದೇ ಕೃಷಿ ಸಲಕರಣೆಗಳನ್ನು ಒದಗಿಸುವುದು, ಅಗತ್ಯ ತರಬೇತಿ ಮುಂತಾದ ಎಲ್ಲ ವ್ಯವಹಾರಗಳನ್ನು ಸಂಘಗಳು ನಡೆಸಿಕೊಂಡು ಬಂದಿವೆ. ಸರಿಯಾಗಿ ವ್ಯವಹಾರ ನೋಡಿಕೊಂಡು ಬಂದ ಎಲ್ಲ ಸಹಕಾರ ಸಂಘಗಳೂ ಲಾಭದಲ್ಲಿವೆ ಎನ್ನುತ್ತಾರೆ ಸಹಕಾರ ಇಲಾಖೆಯ ಅಧಿಕಾರಿಗಳು. ಆದರೆ, ಅಲ್ಲೊಂದು, ಇಲ್ಲೊಂದು ಸಂಘಗಳಲ್ಲಿ ನಡೆದ ಅವ್ಯವಹಾರಗಳು, ಜಿಲ್ಲೆಯ ಇಡೀ ಸಹಕಾರ ವ್ಯವಸ್ಥೆಯನ್ನೇ ಅಲ್ಲಾಡಿಸುತ್ತಿವೆ ಎಂಬುದು ಹಿರಿಯ ಸಹಕಾರಿಗಳ ಅಭಿಪ್ರಾಯ.
ಜವಾಬ್ದಾರ‍್ಯಾರು..?
ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಉಪ ನಿಬಂಧಕರು, ಜಂಟಿ ನಿಬಂಧಕರ ಕಚೇರಿಯಡಿ ನೋಂದಣಯಾಗಿ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು, ಕೃಷಿಯೇತರ ಪತ್ತಿನ ಸಹಕಾರ ಸಂಘಗಳು, ತಾಲೂಕು ಹುಟ್ಟುವಳಿ ಮಾರಾಟ ಸಹಕಾರ ಸಂಘಗಳು, ಅರ್ಬನ್ ಬ್ಯಾಂಕ್‌ಗಳು ಹೀಗೆ ವಿವಿಧ ಸಂಸ್ಥೆಗಳು ಹಣಕಾಸಿನ ವ್ಯವಹಾರ ನಡೆಸುತ್ತಿವೆ. ಅವುಗಳಲ್ಲಿ ಕೆಲವನ್ನು ನೇರವಾಗಿ ಸಹಕಾರ ಸಂಘಗಳ ಇಲಾಖೆ ಮೇಲ್ವಿಚಾರಣೆ ಮಾಡಿದರೆ, ಸೌಹಾರ್ದ ಸಹಕಾರಿ ಸೊಸೈಟಿಗಳನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಮೇಲ್ವಿಚಾಚರಣೆ ನಡೆಸುತ್ತದೆ. ಅರ್ಬನ್ ಬ್ಯಾಂಕ್‌ಗಳು ಸಹಕಾರ ಇಲಾಖೆಯ ಜತೆ ಆರ್‌ಬಿಐ ಕೂಡ ಮೇಲ್ವಿಚಾರಣೆ ಮಾಡುತ್ತದೆ.
ನಷ್ಟದಲ್ಲಿರುವುದೆಷ್ಟು..? ಕೃಷಿಯೇತರ ಕ್ರೆಡಿಟ್ ಸೊಸೈಟಿಗಳು ನಷ್ಟದಲ್ಲಿರುವುದು ಹೆಚ್ಚು. ಜಿಲ್ಲೆಯಲ್ಲಿ 124 ಕ್ರೆಡಿಟ್ ಸೊಸೈಟಿಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ 28 ಸೊಸೈಟಿಗಳು ನಷ್ಟದ ಹಂತದಲ್ಲಿವೆ.ಅವುಗಳಲ್ಲಿ ಕಾರವಾರದ 8, ಶಿರಸಿ-5, ಹಳಿಯಾಳ-4, ಅಂಕೋಲಾ-3, ಮುಂಡಗೋಡ, ಹೊನ್ನಾವರ, ಭಟ್ಕಳ ತಲಾ 2, ಯಲ್ಲಾಪುರ ಹಾಗೂ ಕುಮಟಾ-ತಲಾ-1 ಸೊಸೈಟಿಗಳು ನಷ್ಟದಲ್ಲಿವೆ ಎಂದು ಆಡಿಟ್ ವರದಿ ಹೇಳಿದೆ. 176 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ 158 ಲಾಭದಲ್ಲಿದ್ದರೆ 18 ನಷ್ಟದಲ್ಲಿವೆ. ಅದರಲ್ಲಿ ಮುಂಡಗೋಡ ಹಾಗೂ ಶಿರಸಿಯಲ್ಲಿ ತಲಾ-4, ಹೊನ್ನಾವರದ-3, ಕಾರವಾರ ಹಾಗೂ ಜೊಯಿಡಾ ತಲಾ-2,ಸಿದ್ದಾಪುರ, ಯಲ್ಲಾಪುರ, ಕುಮಟಾದ ತಲಾ-1 ಸೊಸೈಟಿಗಳು ಆಪತ್ತಿನಲ್ಲಿವೆ. ಜಿಲ್ಲೆಯಲ್ಲಿ 11 ಅರ್ಬನ್ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಹಳಿಯಾಳ ಹಾಗೂ ಸಿದ್ದಾಪುರ ಅರ್ಬನ್ ಬ್ಯಾಂಕ್‌ಗಳು ಲಿಕ್ವಿಡೇಶನ್ ಹಂತದಲ್ಲಿವೆ. ಕಾರವಾರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಯುತ್ತಿದೆ.ಜಿಲ್ಲೆಯಲ್ಲಿ 12 ತಾಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್)ಗಳಿದ್ದು, ಅವುಗಳಲ್ಲಿ ಕಾರವಾರ ಟಿಎಪಿಸಿಎಂಎಸ್ ಸಮಾಪನೆಗೊಂಡಿದ್ದು, ಯಲ್ಲಾಪುರದ ಒಂದು ಬ್ಯಾಂಕ್ ನಷ್ಟದಲ್ಲಿದೆ. ಜಿಲ್ಲೆಯಲ್ಲಿ 330 ಹಾಲು ಉತ್ಪಾದಕ ಸಹಕಾರಿ ಸಂಘಗಳಿದ್ದು, ಅವುಗಳಲ್ಲಿ 69 ನಷ್ಟದಲ್ಲಿವೆ ಎಂದು ಸಹಕಾರಿ ಸಂಘಗಳ ಉಪ ನಿಬಂಧಕರ ಕಚೇರಿಯ ಮಾಹಿತಿ ತಿಳಿಸಿದೆ.
ಸಹಕಾರ ಸಂಘಗಳನ್ನು ಲಾಭದಲ್ಲಿ ನಡೆಸಲು ಬೇಕಾದ ಎಲ್ಲ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರ ಸಹಕಾರ ಕಾಯ್ದೆಯ ಸೆಕ್ಷನ್ 28 ಸಿ ದಂತೆ ಆಡಳಿತ ಮಂಡಳಿಗೆ ಪ್ರದತ್ತವಾಗಿದೆ. ನಾವು ನಿರ್ದೇಶನಗಳನ್ನು ನೀಡಬಹುದು. ಇನ್ನು ಅವ್ಯವಹಾರ ನಡೆದರೆ ನಾವು ಸಹಕಾರ ಕಾಯ್ದೆಯ ಸೆಕ್ಷನ್ 64 ರಂತೆ ತನಿಖೆ ನಡೆಸಿ, ಸೆಕ್ಷನ್ 68 ರಂತೆ ಕ್ರಮ ವಹಿಸುವ ಅಧಿಕಾರ ನಮಗಿದೆ.ಮಂಜುನಾಥ