ಕ್ರಿಮಿನಲ್ ಪ್ರಕರಣ ಹಿಂಪಡೆದು ತುಷ್ಠೀಕರಣಕ್ಕೆ ಮುಂದಾದ ಸರ್ಕಾರ

JOSHI NEW
Published on

ಹುಬ್ಬಳ್ಳಿ : ವಾಣಿಜ್ಯ ನಗರಿಯನ್ನು ತಲ್ಲಣಗೊಳಿಸಿದ್ದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕ್ರಿಮಿನಲ್ ಪ್ರಕರಣ ಹಾಗೂ ರಾಜ್ಯದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿದ್ದ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಕ್ರಮ ಖಂಡನೀಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರಿಗೆ ಪತ್ರ ಬರೆದಿರುವ ಪ್ರಲ್ಹಾದ ಜೋಶಿ, ತಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದು 4 ತಿಂಗಳಲ್ಲೇ ಇಂತಹ ತುಷ್ಠೀಕರಣ ರಾಜಕಾರಣ ಪರಾಕಾಷ್ಠತೆ ತಲುಪಿದೆ ಎಂದು ದೂರಿದ್ದಾರೆ.

ಇಂತಹ ಪ್ರಕರಣಗಳಲ್ಲಿನ ಆರೋಪಿಗಳು ಸಮಾಜ ಘಾತುಕ ಶಕ್ತಿಗಳಾಗಿರುತ್ತಾರೆ. ಈ ಪ್ರಕರಣಗಳನ್ನು ಕೈಬಿಡುವುದರಿಂದ ತಮ್ಮ ಸರ್ಕಾರ ರಾಷ್ಟ್ರೀಯ ಭದ್ರತೆಯ ವಿಷಯದೊಂದಿಗೆ ರಾಜಿ ಮಾಡಿಕೊಂಡಂತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

2022ರ ಏ. 16ರಂದು ಹಳೇ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಯ ಪ್ರಕರಣ ಸೇರಿದಂತೆ ರಾಜ್ಯದಲ್ಲಿನ ಒಟ್ಟು 11 ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯುವ ಬಗ್ಗೆ ಪ್ರಕ್ರಿಯೆ ನಡೆದಿರುವುದು ಅತ್ಯಂತ ಹೇಯ ಚಿಂತನೆಯಾಗಿದೆ ಎಂದು ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏ. 16ರಂದು ನಡೆದ ಕಲ್ಲು ತೂರಾಟ, ಹಿಂಸಾಚಾರದಲ್ಲಿ ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿದ್ದವು. ನಾಲ್ಕು ಪೊಲೀಸ್ ವಾಹನಗಳು ಸಂಪೂರ್ಣ ಜಖಂಗೊಂಡಿದ್ದವು. ಅಂದು ರಾತ್ರಿ ಏಕಾಏಕಿ ಒಂದು ಕೋಮಿನ ನೂರಾರು ಜನರು ಬೀದಿಗಿಳಿದು ಪೊಲೀಸ್ ವಾಹನ, ಆಸ್ಪತ್ರೆ, ದೇವಸ್ಥಾನ, ಅಂಗಡಿ, ಬಸ್​ಗಳ ಮೇಲೆ ಕಲ್ಲು ತೂರಾಟ ನಡೆಸಿ, ಬೀದಿದೀಪಗಳನ್ನು ಒಡೆದು ಹಾಕಿದ್ದರು. ಅಮಾಯಕರನ್ನು ಕೊಲೆ ಮಾಡುವ ಪ್ರಯತ್ನವೂ ನಡೆದಿತ್ತು. ಹುಬ್ಬಳ್ಳಿ ಅಕ್ಷರಶಃ ರಣರಂಗವಾಗಿ ಮಾರ್ಪಾಡಾಗಿತ್ತು ಎಂದು ಸ್ಮರಿಸಿದ್ದಾರೆ.

ಈ ಘಟನೆಯಿಂದ ಹುಬ್ಬಳ್ಳಿ ಜನ ಅಷ್ಟೇ ಅಲ್ಲದೇ ಇಡಿ ರಾಜ್ಯದ ಜನ ಬೆಚ್ಚಿಬಿದ್ದಿದ್ದರು. ಒಟ್ಟು 146 ಸಮಾಜ ವಿರೋಧಿ ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ 6 ಜನರಿಗೆ ಮಾತ್ರ ಜಾಮೀನು ನೀಡಲಾಗಿದು, ಉಳಿದ 140 ಆಪಾದಿತರ ಪರವಾದ ಜಾಮೀನು ಅರ್ಜಿ ನಿರಾಕರಿಸಲಾಗಿದ್ದು ಮೊಕದ್ದಮೆ ನ್ಯಾಯಾಲಯದಲ್ಲಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಕ್ರಮದಿಂದ ರಾಷ್ಟ್ರ ವಿರೋಧಿ ಹಾಗೂ ಮೂಲಭೂತ ವಾದಿಗಳಿಗೆ ಮತ್ತಷ್ಟು ಕುಮ್ಮಕ್ಕು ಸಿಗುವುದು. ಮುಖ್ಯಮಂತ್ರಿ ಅವರು ಈ ವಿಷಯ ಗಂಭೀರವಾಗಿ ಪರಿಗಣಿಸಿ, ಇಂತಹ ಕ್ರಮದಿಂದ ದೂರ ಸರಿಯಬೇಕು. ಇಲ್ಲದಿದ್ದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net