ಉಡುಪಿಯ ಆಟೋಗಳಿಗೆ 'ಸಿಎನ್​ಜಿ' ಕಗ್ಗಂಟು

CNG Problem
ಉಡುಪಿಯ ಗುಂಡಿಬೈಲ್​ನ ಪೆಟ್ರೋಲ್​ ಪಂಪ್​ನಲ್ಲಿರುವ ಅದಾನಿ ಸಿಎನ್​ಜಿ ಟಕದ ಬಳಿ ರಸ್ತೆಯಲ್ಲಿ ಸಾಲು ನಿಂತ ನೂರಾರು ಆಟೋಗಳು.
Published on

ಪೂರೈಕೆಯಾಗದ ನೈಸರ್ಗಿಕ ಅನಿಲ -- ಗ್ಯಾಸ್​ ಪಂಪ್​ ಬಳಿ ಚಾಲಕರ ಜಾಗರಣೆ

ಪ್ರಶಾಂತ ಭಾಗ್ವತ, ಉಡುಪಿ
ಕಳೆದ ಒಂದು ತಿಂಗಳಿಂದ ಉಡುಪಿ ಜಿಲ್ಲೆಗೆ ಸಮರ್ಪಕವಾಗಿ ಸಿಎನ್​ಜಿ (ಕಾಂಪ್ರೆಸ್ಡ್​ ನ್ಯಾಚುರಲ್​ ಗ್ಯಾಸ್​) ಇಂಧನ ಪೂರೈಕೆಯಾಗದೆ ಆಟೋ ಚಾಲಕರು ಕಂಗಾಲಾಗಿದ್ದು, ಪ್ರತಿದಿನವೂ ಪಂಪ್​ ಬಳಿ ಆಟೋದೊಂದಿಗೆ ಜಾಗರಣೆ ಮಾಡುವಂತಾಗಿದೆ.

ಬೆಳಗ್ಗೆಯಿಂದ ರಾತ್ರಿವರೆಗೂ ಪಂಪ್​ಬಳಿ ಕಾದು ಸುಸ್ತಾಗುತ್ತಿರುವ ಡ್ರೈವರ್ ಗಳಿಗೆ, ಸಿಎನ್​ಜಿ ಅಳವಡಿಕೆಯ ಆಟೋಗಳು ಇದೀಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಾಡಿಗೆ ಓಡಿಸಲೂ ಆಗದೆ, ಜೀವನ ನಿರ್ವಹಣೆಯೂ ಆಗದೆ ಪರದಾಡುವಂತಾಗಿದೆ.

ಆಗುತ್ತಿರುವ ಸಮಸ್ಯೆ ಏನು?

ಹೆಜಮಾಡಿಯಿಂದ ಕುಂದಾಪುರದವರೆಗೆ ಕಾರ್ಕಳವೂ ಸೇರಿದಂತೆ ಅದಾನಿ ಕಂಪನಿಗೆ ಸಿಎನ್​ಜಿ ಪೂರೈಕೆಯ ಟೆಂಡರ್​ ಆಗಿದ್ದು, ಒಟ್ಟು 8 ಪಂಪ್​ಗಳಲ್ಲಿ 'ಅದಾನಿ ಸಿಎನ್​ಜಿ' ಸೌಲಭ್ಯ ಅಳವಡಿಸಲಾಗಿದೆ. ಈ ಭಾಗಕ್ಕೆ ಮಂಗಳೂರಿನಿಂದ ಸಿಎನ್​ಜಿ ಪೂರೈಸುತ್ತಿರುವ ಅದಾನಿ ಕಂಪನಿಗೆ ಪ್ರಸ್ತುತವಾಗಿ ಮಂಗಳೂರಿನಲ್ಲಿ ಸಿಎನ್​ಜಿ ಉತ್ಪಾದಿಸುವ ಸ್ವಂತ ಘಟಕ ಇಲ್ಲ. ಹೀಗಾಗಿ ಗೇಲ್​ ಕಂಪನಿಯಿಂದಲೇ ಸಿಎನ್​ಜಿ ಖರೀದಿಸಿ, ತನ್ನ ಏಜೆನ್ಸಿಯವರಿಗೆ ಪೂರೈಕೆ ಮಾಡುತ್ತಿದೆ. ಸ್ವಂತ ಪ್ಲಾಂಟೇಷನ್​ ಇಲ್ಲದೆ ಇನ್ನೊಬ್ಬರಿಂದ ಖರೀದಿಸಿ ಪೂರೈಕೆ ಮಾಡುತ್ತಿರುವುದೇ ಸದ್ಯದ ದೊಡ್ಡ ಸಮಸ್ಯೆಯಾಗಿದೆ.

ಪ್ರತಿದಿನವೂ 3 ಲೋಡ್ ಕೊರತೆ

ಅದಾನಿ ಕಂಪನಿಗೆ ಸಂಬಂಧಿತ 8 ಪಂಪ್​ಗಳಿಗೆ ದಿನಕ್ಕೆ 5 ಲೋಡ್​ (ಲಾರಿ) ಸಿಎನ್​ಜಿಯ ಅಗತ್ಯತೆ ಇದೆ. ಆದರೆ, ದಿನಕ್ಕೆ 2 ಲೋಡ್​ ಬರುತ್ತಿದ್ದು, ಅದೂ ಸರಿಯಾಗಿ ಪೂರೈಕೆ ಆಗುತ್ತಿಲ್ಲ. 8 ಪಂಪ್​ಗೆ 2 ಲೋಡ್​ನಂತೆ ಪೂರೈಕೆ ಮಾಡಲು 16 ಲಾರಿಗಳು ಇರಬೇಕು. ಆದರೆ, 13 ಲಾರಿ ಇದ್ದು, ಪ್ರತಿದಿನವೂ 3 ಲಾರಿಯಷ್ಟು ಸಿಎನ್​ಜಿ ಕಡಿಮೆ ಪೂರೈಕೆ ಆಗುತ್ತಿದೆ. ಒಂದು ಲೋಡ್​ನಲ್ಲಿ 500 ಕೆಜಿಯಿಂದ ಗರಿಷ್ಠ 650 ಕೆಜಿ ಮಾತ್ರ ಗ್ಯಾಸ್​ ಇರುತ್ತದೆ.

ಬೇಡಿಕೆಯಷ್ಟು ಲಭಿಸದ ಸಿಎನ್​ಜಿ

ಮಂಗಳೂರಿನಲ್ಲಿ ಸ್ವಂತ ಸಿಎನ್​ಜಿ ಪ್ಲಾಂಟೇಷನ್​ ಹೊಂದಿರುವ ಗೇಲ್​ ಕಂಪನಿಗೆ ಪಡುಬಿದ್ರಿವರೆಗೆ 25ಕ್ಕೂ ಹೆಚ್ಚು ಪಂಪ್​ಗಳಿದ್ದು, ಅವರಿಗೇ ಬೇಡಿಕೆಗೆ ತಕ್ಕಷ್ಟು ಗ್ಯಾಸ್​ ಪೂರೈಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅದಾನಿ ಕಂಪನಿಯ ನಿತ್ಯದ ಬೇಡಿಕೆಯಷ್ಟು ಸಿಎನ್​ಜಿ ಪೂರೈಸಲು ಗೇಲ್​ ಕಂಪನಿಗೆ ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿ ಸಿಎನ್​ಜಿ ಅಳವಡಿಸಿರುವ ಉಡುಪಿಯಲ್ಲಿರುವ ಪಂಪ್​ಗಳ ಮಾಲೀಕರಿಂದ ತಿಳಿದು ಬಂದಿದೆ. ಒಂದು ಪಂಪ್​ಗೆ ನಿತ್ಯ 2 ಲೋಡ್​ ಅಂದರೆ ಗರಿಷ್ಠ 1,300 ಕೆಜಿ ಮಾತ್ರ ಪೂರೈಕೆ ಆಗುತ್ತಿದೆ. ಇದೀಗ ಸಿಎನ್​ಜಿ ಕಾರ್​, ಲಾರಿ, ಬಸ್​ಗಳೂ ಸಹ ಇರುವುದರಿಂದ ಅತ್ಯಲ್ಪ ಪ್ರಮಾಣದ ಪೂರೈಕೆಯಿಂದ ಸಮಸ್ಯೆ ಉಂಟಾಗಿದೆ.

ಪ್ರತಿದಿನವೂ ಡ್ರೈವರ್ ಗಳಿಗೆ ಗೋಳು

ಸ್ವಂತ ಪ್ಲಾಂಟೇಷನ್​ ಇಲ್ಲದಿದ್ದರೆ ಪಂಪ್​ಗಳಲ್ಲಿ ಸಿಎನ್​ಜಿ ಸೌಲಭ್ಯ ಏಕೆ ಅಳವಡಿಸುತ್ತಿದ್ದೀರಿ ಎನ್ನುವುದು ಆಟೋ ಚಾಲಕರ ಪ್ರಶ್ನೆಯಾಗಿದೆ. ಮಂಗಳೂರಿನಲ್ಲಿ ಕೆಜಿಗೆ 81 ರೂಪಾಯಿ ಇದೆ. ಉಡುಪಿಯಲ್ಲಿ ಕೆಜಿಗೆ 83.20 ರೂಪಾಯಿ ಇದೆ. ದರ ಹೆಚ್ಚಿಸಿದ್ದಕ್ಕೆ ಬೇಸರವಿಲ್ಲ. ಸರಿಯಾಗಿ ಪೂರೈಕೆ ಮಾಡುತ್ತಿಲ್ಲ. ಇದೀಗ ಶಾಲೆ-ಕಾಲೇಜುಗಳಿಗೆ ರಜಾ ದಿನಗಳಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಡುಪಿಗೆ ಆಗಮಿಸುತ್ತಿದ್ದಾರೆ. ಆದರೆ, ನಮ್ಮ ಆಟೋಗಳು ಪಂಪ್​ಗಳ ಮುಂದಿನ ರಸ್ತೆಯಲ್ಲಿ ಸಾಲಾಗಿ ನಿಂತಿವೆ. ನಮಗೆ ಊಟ ಇಲ್ಲ, ನಿದ್ದೆ ಇಲ್ಲ, ಕುಡಿಯಲೂ ನೀರಿಲ್ಲ. ಪಂಪ್​ನವರನ್ನು ನಾವು ದೂರುವುದಿಲ್ಲ. ಆದರೆ, ಯಾವ ಶಾಸಕ, ಸಚಿವರೂ ಸಹ ನಮ್ಮ ಗೋಳಿಗೆ ಸ್ಪಂದಿಸುತ್ತಿಲ್ಲ ಎಂದು ಹಿರಿಯ ಚಾಲಕ ಜಾನ್​ ಎಂಬವರು 'ವಿಜಯವಾಣಿ' ಬಳಿ ಅಳಲು ತೋಡಿಕೊಂಡಿದ್ದಾರೆ.

ವಾರದೊಳಗೆ ಸಮಸ್ಯೆ ನೀಗದಿದ್ದಲ್ಲಿ ರಸ್ತೆ ತಡೆಯ ಎಚ್ಚರಿಕೆ

ಈ ಮೊದಲು ಎಲ್ಪಿಜಿ ಬಳಸುತ್ತಿದ್ದೆವು. ಅದರಲ್ಲಿ ಮೈಲೇಜ್​ ಇಲ್ಲ ಎಂದು ಆಟೋ ಕಂಪನಿಗಳೇ ನಮ್ಮ ಆಟೋ ಪಡೆದು, ಸಾಲ ಸೌಲಭ್ಯ ಕಲ್ಪಿಸಿ ಸಿಎನ್​ಜಿ ಆಟೋ ಕೊಡಿಸಿದ್ದಾರೆ. ಉಡುಪಿ ತಾಲೂಕಿನಲ್ಲಿ 2 ಸಾವಿರಕ್ಕೂ ಅಧಿಕ ಸಿಎನ್​ಜಿ ಆಟೋಗಳಿವೆ. ದಿನವೂ ಪಂಪ್​ ಮುಂದೆ ಆಟೋ ನಿಲ್ಲಿಸಿ ಕಾಯುವುದೇ ಆಗಿದೆ. ಹೀಗಾದರೆ ನಾವು ಜೀವನ ಮಾಡುವುದು ಹೇಗೆ? ಬ್ಯಾಂಕ್​ ಸಾಲ ತೀರಿಸುವುದು ಹೇಗೆ? ವಾರದೊಳಗೆ ಸಮಸ್ಯೆ ನೀಗದಿದ್ದಲ್ಲಿ ಆಟೋಗಳನ್ನೆಲ್ಲ ಹೆದ್ದಾರಿಯಲ್ಲಿಟ್ಟು ಪ್ರತಿಭಟಿಸುತ್ತೇವೆ. ಕಾಳಪ್ಪ. ಆಟೋ ಡ್ರೈವರ್, ಉಡುಪಿ

ಪಂಪ್​ನ ಡೀಲರ್ಸ್ ​ಗಳಿಗೆ ಪೆಟ್ರೋಲ್​, ಡೀಸೆಲ್​ ಖರೀದಿಸುವ ಹಾಗೂ ಎಷ್ಟು ಬೇಕಾದರೂ ಸ್ಟಾಕ್​ ಮಾಡಲು ಅವಕಾಶ ಇರುತ್ತದೆ. ಆದರೆ, ಸಿಎನ್​ಜಿ ವಿಚಾರವಾಗಿ ಈ ಭಾಗದಲ್ಲಿ ಅದಾನಿ ಕಂಪನಿ ನಮಗೆ ಎಷ್ಟು ಕೆಜಿ ಸಿಎನ್​ಜಿ ಪೂರೈಸುತ್ತದೆಯೋ ಅದರ ಕಮಿಷನ್​ ಮಾತ್ರ ಲಭಿಸುತ್ತದೆ. ನಮ್ಮಿಂದಲೂ ಆಟೋ ಚಾಲಕರ ಸಮಸ್ಯೆ ನೋಡಲಾಗುತ್ತಿಲ್ಲ. ಪ್ರತಿ ವರ್ಷವೂ ಫೆಬ್ರವರಿಯಿಂದ ಜೂನ್​ ತಿಂಗಳಲ್ಲಿ ಇದೇ ಸಮಸ್ಯೆ ಉಂಟಾಗುತ್ತಿದೆ. ತೇಜಸ್​ ಪಾಲನ್​.ಪೆಟ್ರೋಲ್​ ಪಂಪ್​ನ ಇನ್​ಚಾರ್ಜ್​. ಗುಂಡಿಬೈಲ್​, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net