

ಭರತ್ ಶೆಟ್ಟಿಗಾರ್ ಮಂಗಳೂರು
ಕೊಚ್ಚಿಯಿಂದ ಮಂಗಳೂರಿಗೆ ಕೊಳವೆ ಮಾರ್ಗದ ಮೂಲಕ ಬರಲಿರುವ ದ್ರವೀಕೃತ ನೈಸರ್ಗಿಕ ಅನಿಲ(ಎಲ್‌ಎನ್‌ಜಿ)ವನ್ನು ಸಂಕುಚಿತ ನೈಸರ್ಗಿಕ ಅನಿಲ(ಸಿಎನ್‌ಜಿ)ವಾಗಿ ಪರಿವರ್ತಿಸಿ ವಾಹನಗಳಿಗೆ ಪೂರೈಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಯಲ್ಲಿ 100 ವಿತರಣಾ ಕೇಂದ್ರ ಆರಂಭಿಸಲು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ(ಗೈಲ್) ಉದ್ದೇಶಿಸಿದೆ. ಆ ಗುರಿ ಪೂರೈಸಲು ಸಾಕಷ್ಟು ಸಮಯ ಬೇಕಿದ್ದು, ಅದಕ್ಕೆ ಮೊದಲು ಈಗಿರುವ ಪೆಟ್ರೋಲ್ ಪಂಪ್‌ಗಳಲ್ಲೇ ಸಿಎನ್‌ಜಿ ಬಂಕ್ ನಿರ್ಮಿಸಲಾಗುತ್ತಿದೆ.
ಮಂಗಳೂರು ಆಸುಪಾಸಿನ ಮೂಲ್ಕಿ, ಹಳೆಯಂಗಡಿ, ಹೊಸಬೆಟ್ಟು, ಕೂಳೂರು, ಪಡೀಲ್, ಕಾವೂರು, ಅಡ್ಯಾರ್‌ನಲ್ಲಿ ಏಳು ಪೆಟ್ರೋಲ್ ಬಂಕ್‌ಗಳಲ್ಲಿ ಪ್ರಸ್ತುತ ಗ್ಯಾಸ್ ಪೂರೈಕೆಗೆ ಬೇಕಾದ ಪಂಪ್, ಪರಿವರ್ತಕಗಳು, ಕೊಳವೆ, ಸಿಲಿಂಡರ್ ಮೊದಲಾದ ಪರಿಕರಗಳ ಅಳವಡಿಕೆ, ವಿದ್ಯುತ್ ಸಂಪರ್ಕ ಕಲ್ಪಿಸುವುದು ಮೊದಲಾದ ಕೆಲಸಗಳು ನಡೆಯುತ್ತಿದೆ.
ಅಕ್ಟೋಬರ್ ಅಂತ್ಯದ ವೇಳೆಗೆ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಕಾಸರಗೋಡಿನ ಚಂದ್ರಗಿರಿ ನದಿ ಭಾಗದಲ್ಲಿ ನಡೆಯುತ್ತಿರುವ ಕೊಚ್ಚಿಯಿಂದ ಮಂಗಳೂರು ಅನಿಲ ಕೊಳವೆ ಮಾರ್ಗದ ಕೆಲಸಗಳು ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಲಾಗಿದೆ. ಒಂದು ವೇಳೆ ಅನಿಲ ಸರಬರಾಜು ಮತ್ತಷ್ಟು ತಡವಾದರೆ ಬೆಂಗಳೂರು ಅಥವಾ ಕೊಚ್ಚಿಯಿಂದ ಕ್ರಯೋಜನಿಕ್ ಟ್ಯಾಂಕರ್‌ಗಳ ಮೂಲಕ ಸಿಎನ್‌ಜಿ ತಂದು ಪೂರೈಕೆ ಮಾಡುವ ಚಿಂತನೆಯಿದೆ ಎನ್ನುವುದು ಅಧಿಕಾರಿಗಳ ಮಾತು.
ಮಾರ್ಚ್ ವೇಳೆ 4 ಜಿಎನ್‌ಜಿ ಸ್ಟೇಷನ್?
ಮಂಗಳೂರಿನಲ್ಲಿ ಒಟ್ಟು 2028ರೊಳಗೆ ಪೂರ್ಣ ಪ್ರಮಾಣದ 100 ಸಿಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸುವ ನಿಟ್ಟಿನಲ್ಲಿ ಜಾಗ, ಮಾಲೀಕತ್ವಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ವ್ಯಾಪಾರಿ ಒಡೆತನ ವ್ಯಾಪಾರಿ ಚಾಲಿತ(ಡೋಡೋ) ಮಾದರಿಯಲ್ಲಿ ಸಿಎನ್‌ಜಿ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಮಾರ್ಚ್ ವೇಳೆಗೆ ಕನಿಷ್ಠ ನಾಲ್ಕು ಪೂರ್ಣ ಪ್ರಮಾಣದ ಸಿಎನ್‌ಜಿ ಸ್ಟೇಷನ್ ಕಾರ್ಯಾರಂಭಿಸುವ ಸಾಧ್ಯತೆಯಿದೆ. ಉಡುಪಿಯಲ್ಲಿ ಅದಾನಿ ಸಂಸ್ಥೆ ಅನಿಲ ವಿತರಣೆ ಹೊಣೆ ಹೊತ್ತಿದ್ದು, ಮಣಿಪಾಲ ಮತ್ತು ಉಡುಪಿಯಲ್ಲಿ ಎರಡು ಕೇಂದ್ರಗಳು ಆರಂಭವಾಗಲಿವೆ ಎಂದು ತಿಳಿದು ಬಂದಿದೆ.
ವಾಹನ ಮಾರಾಟ ಆರಂಭ: ಪೆಟ್ರೋಲ್ ಜತೆ ಸಿಎನ್‌ಜಿ ಅವಕಾಶ ಇರುವ ಕಾರುಗಳ ಮಾರಾಟ ನಗರದಲ್ಲಿ ಈಗಾಗಲೇ ಆರಂಭವಾಗಿದೆ. ವಾಹನ ಮಾರಾಟ ಸಂಸ್ಥೆಗಳಿಗೆ ಗ್ರಾಹಕರು ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಮಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ಸಿಎನ್‌ಜಿ ಸ್ಟೇಷನ್ ಆರಂಭವಾಗದಿರುವ ಹಿನ್ನೆಲೆಯಲ್ಲಿ ಖರೀದಿಗೆ ಹಿಂಜರಿಯುತ್ತಿದ್ದಾರೆ. ಕೆಲವಾರು ಮಂದಿ ಖರೀದಿಸಿದವರು ಪೆಟ್ರೋಲ್ ಬಳಸಿ ವಾಹನ ಚಲಾಯಿಸುತ್ತಿದ್ದಾರೆ. ಸಿಎನ್‌ಜಿ ಪಂಪ್‌ಗಳ ಆರಂಭವಾದರೆ ಗ್ರಾಹಕರ ಸಂಖ್ಯೆ ಹೆಚ್ಚಾಗಬಹುದು ಎನ್ನುತ್ತಾರೆ ಮಾರಾಟ ಸಂಸ್ಥೆಗಳ ಪ್ರತಿನಿಧಿಗಳು. ಈಗಾಗಲೇ ಇರುವ ವಾಹನಗಳಲ್ಲೂ ಸಿಎನ್‌ಜಿ ಕಿಟ್ ಅಳವಡಿಸಬಹುದಾಗಿದೆ.
ಯಾಕೆ ಸಿಎನ್‌ಜಿ?
ಸಿಎನ್‌ಜಿ ನೈಸರ್ಗಿಕ ಅನಿಲ. ಪೆಟ್ರೋಲ್/ಡೀಸೆಲ್ ಇಂಧನಗಳಿಗೆ ಹೋಲಿಸಿದರೆ ಕಡಿಮೆ ಮೌಲ್ಯ ಹೊಂದಿದ್ದು, ಇಂಜಿನ್‌ಗಳು ಹೆಚ್ಚು ಶಕ್ತಿಶಾಲಿಯಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ಬಿಡುಗಡೆ ಮಾಡುವ ಇಂಗಾಲದ ಡೈಆಕ್ಸೈಡ್ ಅಥವಾ ಉಂಟಾಗುವ ಮಾಲಿನ್ಯ ಪ್ರಮಾಣ ಅತೀ ಕಡಿಮೆ. ದೇಶದ ಪ್ರಮುಖ ಮಹಾನಗರಗಳಲ್ಲಿ ಈಗಾಗಲೇ ಸಿಎನ್‌ಜಿಗೆ ಹೆಚ್ಚು ಬೇಡಿಕೆಯಿದೆ.
ಮಂಗಳೂರು ಆಸುಪಾಸಿನ 7 ರಿಟೇಲ್ ಔಟ್‌ಲೆಟ್‌ಗಳಲ್ಲಿ ಸಿಎನ್‌ಜಿ ಪೂರೈಸುವ ನಿಟ್ಟಿನಲ್ಲಿ ಪಂಪ್‌ಗಳನ್ನು ಅಳವಡಿಸುವ ಕೆಲಸಗಳು ನಡೆಯುತ್ತಿದೆ. ಕರೊನಾ ಹಿನ್ನೆಲೆಯಲ್ಲಿ ಈಗಾಗಲೇ ತಡವಾಗಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಬಳಿಕ ಯಾವ ಮೂಲದಿಂದ ಸಿಎನ್‌ಜಿ ಪೂರೈಕೆ ಮಾಡಬೇಕು ಎಂದು ನಿರ್ಧರಿಸಲಾಗುವುದು.
ವಿಲಿನ್ ಜುಂಕೆ, ಡಿಜಿಎಂ, ಗೈಲ್ ಗ್ಯಾಸ್