

ಸಚಿವ ಸತೀಶ್ ಜಾರಕಿಹೊಳಿ ರಾಜ್ಯ ರಾಜಕೀಯದಲ್ಲೇ ಉಳಿಯಲಿ: ಆಯಿಶಾ ಸನದಿ
ಬೆಳಗಾವಿ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯ ರಾಜಕೀಯದಲ್ಲಿ ಇರಬೇಕು. ಹೈಕಮಾಂಡ್ ಅವರನ್ನು ಲೋಕಸಭೆ ಚುನಾವಣೆಗೆ ಸ್ಫರ್ಧಿಸಲು ಟಿಕೆಟ್ ನೀಡಬಾರದು. ಅವರ ಬದಲಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ನೀಡಲಿ ಎಂದು ಕೆಪಿಸಿಸಿ ಸದಸ್ಯೆ ಆಯಿಶಾ ಸನದಿ ಮನವಿ ಮಾಡಿದ್ದಾರೆ.
ನಗರದ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅವರು ಈಗಾಗಲೇ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರವೂ ದೊಡ್ಡದಿದೆ. ಅವರ ದೂರದೃಷ್ಟಿಯಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಸಾಗುತ್ತಿವೆ. ಹೀಗಾಗಿ ಸಚಿವ ಸತೀಶ್ ಜಾರಕಿಹೊಳಿ ಅವರು ರಾಜ್ಯ ರಾಜಕೀಯದಲ್ಲಿ ಇರಬೇಕೆಂದು ಮನವಿ ಮಾಡುತ್ತೇನೆಂದು ತಿಳಿಸಿದರು.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಅರ್ಹತೆ ಇರುವ ಅನೇಕ ಅಭ್ಯರ್ಥಿಗಳು ಇದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಅಂಜಲಿ ನಿಂಬಾಳ್ಕರ್, ಪ್ರಿಯಂಕಾ ಜಾರಕಿಹೊಳಿ ಸ್ಪರ್ಧಿಸಲು ಅವಕಾಶ ನೀಡಬೇಕು. ಕಾರಣ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಬಿಟ್ಟು ಮಹಿಳೆಯರಿಗಾದರೂ ಟಿಕೆಟ್ ನೀಡಬೇಕು. ಇಲ್ಲವಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಟಿಕೆಟ್ ನೀಡಿ. ಅವರಿಗೆ ಟಿಕೆಟ್ ನೀಡಿದರೆ ಅವರನ್ನು ಗೆಲ್ಲಿಸಲು ಹಗಲು ರಾತ್ರಿ ದುಡಿಯುತ್ತೇವೆ ಎಂದು ತಿಳಿಸಿದರು.
ನಮ್ಮ ನಾಯಕ ರಾಜ್ಯ ರಾಜಕೀಯದಲ್ಲೇ ಇರಲಿ ಎಂಬುವುದು ನಮ್ಮ ಆಶಯ. ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸಿ ಅವರನ್ನು ರಾಜ್ಯ ರಾಜ್ಯಕೀಯದಲ್ಲಿ ಉಳಿಯಲು ಅವಕಾಶ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಅವರಿಗೆ ಡಿಸಿಎಂ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಿದರು.
ಖುರ್ಸಿದ್ದ ಮುಲ್ಲಾ, ಲತಾ ಮಾನೆ, ರೋಹಿಣಿ ಬಾಬಾಸೇಕ್, ಸಾರಂಬಿ ಜತ್ತಿ, ಹಸೀನಾ ಪಿರ್ಜಾದೆ ಇತರರಿದ್ದರು.