

ಮಡಿಕೇರಿ: ಕೊಡವ ಮಹಿಳೆಯರಿಗೆ ಭದ್ರತೆ ಹಿನ್ನಲೆಯಲ್ಲಿ ಬಂದೂಕು ತರಬೇತಿಯನ್ನು ಕಡ್ಡಾಯವಾಗಿ ಸರ್ಕಾರದ ವತಿಯಿಂದ ನೀಡಬೇಕು ಎಂದು ಸಿಎನ್‌ಸಿ ವತಿಯಿಂದ ಶನಿವಾರ ಆಯೋಜಿಸಿದ್ದ ೧೩ನೇ ವರ್ಷದ ತೋಕ್ ನಮ್ಮೆ ಕಾರ್ಯಕ್ರಮದಲ್ಲಿ ಒತ್ತಾಯಿಸಲಾಯಿತು.
ದಕ್ಷಿಣ ಕೊಡಗಿನ ಕುಚಿ ಗ್ರಾಮದ ಅಜ್ಜಮಾಡ ಕುಟುಂಬದ ಐನ್ ಮನೆಯಲ್ಲಿ ಸಿಎನ್‌ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋವಿ ಪರವಾನಗಿ ವಿನಾಯಿತಿ ಪತ್ರವನ್ನು ಕೊಡಗಿನ ಪ್ರತೀ ಐನ್ ಮನೆ ವತಿಯಿಂದ ಕುಟುಂಬಸ್ಥರಿಗೆ ದೊರಕುವಂತೆ ಮಾಡಬೇಕು. ಜಿಲ್ಲಾಧಿಕಾರಿ ಕಛೇರಿಯಲ್ಲಿ ಏಕಗವಾಕ್ಷಿ ವ್ಯವಸ್ಥೆಯಡಿ ಕೋವಿ ಪರವಾನಗಿ ವಿನಾಯಿತಿ ಪತ್ರವನ್ನು ಹಕ್ಕುದಾರರಿಗೆ ವಿಳಂಭರಹಿತವಾಗಿ ನೀಡುವಂತಾಗಬೇಕು ಸೇರಿದಂತೆ ಹಲವು ಪ್ರಮುಖ ಹಕ್ಕೋತ್ತಾಯಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭ ಜರುಗಿದ ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದೆನೆರವಂಡ ನಾಚಪ್ಪ, ಕೊಡಗಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದೆ. ಕೊಡವರ ಭದ್ರತೆ ದೃಷ್ಟಿಯಿಂದ ಕೊಡವತಿಯರಿಗೂ ಬಂದೂಕು ಚಲಾಯಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿಯನ್ನು ಸರ್ಕಾರದ ವತಿಯಿಂದಲೇ ನೀಡಬೇಕು. ಈ ಮೂಲಕ ದೇಶದ್ರೋಹಿ ಕತ್ಯದಲ್ಲಿ ತೊಡಗಿರುವವರು, ವನ್ಯಜೀವಿಗಳಿಂದ ಪ್ರಾಣ ಸಂರಕ್ಷಣೆ ನಿಟ್ಟಿನಲ್ಲಿ ಕೊಡವ ಮಹಿಳೆಯರಿಗೂ ಸೂಕ್ತ ತರಬೇತಿ ನೀಡಿದಂತಾಗುತ್ತದೆ ಎಂದು ಒತ್ತಾಯಿಸಿದರು.
ಕೊಡವ ಯುವತಿಯರ ಮದುವೆ ಸಂದರ್ಭ ಕಾಣಿಕೆ ಪೆಟ್ಟಿಗೆಯಲ್ಲಿ ಕಡ್ಡಾಯವಾಗಿ ಕೋವಿ ಮತ್ತು ಕೊಡವರ ಹಕ್ಕಾದ ಕೋವಿ ಪರವಾನಗಿ ವಿನಾಯಿತಿ ಪತ್ರವನ್ನು ಇರಿಸುವಂತಾಗಬೇಕು. ಕೊಡವರು ಕೋವಿ ಹಕ್ಕು ಹೊಂದಿದ್ದರೂ ಈವರೆಗೂ ಅದನ್ನು ಅಶಾಂತಿ ಕಲ್ಪಿಸುವ ಅಥವಾ ಬೇರೆಯಾವುದೇ ರೀತಿಯಲ್ಲಿ ದುರುಪಯೋಗ ಪಡಿಸಿಕೊಂಡಿಲ್ಲ. ಕೋವಿ ದೈವಿ ಸಮಾನವಾಗಿದೆ. ಸಿಖ್ ಸಮುದಾಯಕ್ಕೆ ನೀಡಿದ ಕಪಾಣ್ ಹಕ್ಕಿನ ರೀತಿಯಲ್ಲಿಯೇ ಕೊಡವರಿಗೂ ಹಕ್ಕನ್ನು ಕೊಡವರ ಧಾರ್ಮಿಕ ಸಂಸ್ಕಾರ ಎಂದು ಪರಿಗಣಿಸಿ ಸಂವಿಧಾನದ ೨೫ ಮತ್ತು ೨೬ ರ ವಿದಿಯಂತೆ ನೀಡಬೇಕು ಎಂದೂ ನಾಚಪ್ಪ ಆಗ್ರಹಿಸಿದರು.
ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಯುವಜನಾಂಗಕ್ಕೆ ಕೊಡವರ ಕೋವಿ ಹಕ್ಕು ಸೇರಿದಂತೆ ಕೊಡವರ ಹಕ್ಕುಗಳನ್ನು ತಿಳಿಹೇಳುವ ಅಗತ್ಯವಿದೆ. ಭವಿಷ್ಯದ ಪೀಳಿಗೆಗಾಗಿ ಕಳೆದುಕೊಂಡಿರುವ ಹಕ್ಕುಗಳನ್ನು ಕೊಡವರು ಈಗಿನಿಂದಲೇ ಮರಳಿ ಪಡೆಯಬೇಕಾದ ಅನಿವಾರ್ಯತೆ ಇದೆ. ತಮ್ಮ ಜನ್ಮಸಿದ್ದ ಹಕ್ಕುಗಳನ್ನು ಗಳಿಸಿಕೊಳ್ಳುವ ಮೂಲಕ ಕೊಡವರು ಸ್ವಾಭಿಮಾನಿ ಜೀವನವನ್ನು ಮತ್ತೆ ಕಟ್ಟಿಕೊಳ್ಳಬೇಕಾಗಿದೆ. ಎಲ್ಲಾ ಹಕ್ಕುಗಳನ್ನು ಸರ್ಕಾರ ಕೊಡವರ ಬೇಡಿಕೆಗಳನ್ನು ಪರಿಗಣಿಸಿ ಮರಳಿಸಲೇಬೇಕು. ಇಲ್ಲದೇ ಹೋದಲ್ಲಿ ಕಾನೂನಿನ ಮೂಲಕ ಹಕ್ಕುಗಳನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಹೋರಾಟಕ್ಕೆ ಸಿಎನ್‌ಸಿ ಮುಂದಾಗಲಿದೆ ಎಂದು ಎಚ್ಚರಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್‌ನ ಹಲವಾರು ವರ್ಷಗಳ ನಿರಂತರವಾದ ಪ್ರಾಮಾಣಿಕ ಶಾಂತಿಯುತ ಹೋರಾಟದ ಫಲವಾಗಿಯೇ ಹೆಸರಾಂತ ವಕೀಲ ಡಾ.ಸುಬ್ರಹ್ಮಣ್ಯ ಸ್ವಾಮಿ ಮುಂದಾಳತ್ವುದಲ್ಲಿ ಕೊಡವ ಸ್ವಾಯತ್ತ ನಾಡಿನ ಬೇಡಿಕೆ ಸರ್ವೋಚ್ಚ ನ್ಯಾಯಾಲಯದ ಹೊಸ್ತಿಲನ್ನು ತಲುಪಿದೆ. ಸದ್ಯದಲ್ಲಿಯೇ ಈ ಬಗ್ಗೆ ನ್ಯಾಯಾಂಗ ಕೂಡ ಗಮನ ಹರಿಸಿ ಕೊಡವರ ಆದ್ಯತೆಯ ಬೇಡಿಕೆಗೆ ಸ್ಪಂದಿಸುವ ನಿರೀಕ್ಷೆಯಿದೆ ಎಂದು ನಾಚಪ್ಪ ಆಶಾಭಾವನೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅಜ್ಜಮಾಡ ಕಟ್ಟಿಮಂದಯ್ಯ, ಅಜ್ಜಮಾಡ ವೇಣುಸುಬ್ಬಯ್ಯ, ಜಮ್ಮಡ ಮೋಹನ್, ಪುಲ್ಲೇರ ಸ್ವಾತಿ, ಪಟ್ಟಮಾಡ ಕುಶ, ಅಜ್ಜಮಡ ಕುಟುಂಬದ ನೂರಾರು ಸದಸ್ಯರು, ಸಿಎನ್ ಸಿ ಕಾರ್ಯಕರ್ತರು ಹಾಜರಿದ್ದರು.
ಆಕರ್ಷಕ ನತ್ಯ ಪ್ರದರ್ಶನ: ಕೋವಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದ ಬಳಿಕ ಅಜ್ಜಮಾಡ ಐನ್ ಮನೆ ವ್ಯಾಪ್ತಿಯಲ್ಲಿ ಕೋವಿ ಹಿಡಿದ ಕೊಡವರು, ಕೊಡವತಿಯರು, ಮೆರವಣಿಗೆ ನಡೆಸಿ ಕೋವಿಯ ಮಹತ್ವ ಸಾರಿದರು. ಇದೇ ಸಂದರ್ಭ ಕುರ್ಚಿ ಗ್ರಾಮದ ದಕ್ಷಿಣ ಗಂಗೆ ತಂಡದಿಂದ ಆಕರ್ಷಕ ನತ್ಯ ಪ್ರದರ್ಶನ ಜರುಗಿತು. ತೋಕು ನಮ್ಮೆಯ ಅಂಗವಾಗಿ ಆಯೋಜಿತ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಹಿಳೆಯರೂ ಮಕ್ಕಳೂ ಸೇರಿದಂತೆ ನೂರಾರು ಕೊಡವರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.
ಕೊಡವ ವಿಭೂಷಣ ಪ್ರಶಸ್ತಿ ಪ್ರಧಾನ: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೧೩ನೇ ವರ್ಷದ ತೋಕ್ ನಮ್ಮೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಡವ ವಿಭೂಷಣ ಪ್ರಶಸ್ತಿಯನ್ನು ನಂದಿನೆರವಂಡ ನಾಚಪ್ಪ ಪ್ರಧಾನ ಮಾಡಿದರು. ಪ್ರೊ.ಮುಲ್ಲೇಂಗಡ ರೇವತಿ ಪೂವಯ್ಯ(ಸಂಶೋಧನೆ), ಎಚ್.ಟಿ.ಅನಿಲ್(ಮಾಧ್ಯಮ ಮತ್ತು ಪ್ರವಾಸೋದ್ಯಮ), ಹಂಚೆಟ್ಟೀರ ಮನುಮುದ್ದಪ್ಪ ಅವರ ಮುಕ್ಕೋಡ್ಲು ವ್ಯಾಲಿಡ್ಯೂ ಕಲ್ಚರಲ್ ಅಸೋಸಿಯೇಷನ್ ಸಂಸ್ಥೆ(ಸಾಂಸ್ಕತಿಕ ಕ್ಷೇತ್ರ), ದಕ್ಷಿಣ ಗಂಗೆ ಸಾಂಸ್ಕತಿಕ ತಂಡ(ಸಾಂಸ್ಕತಿಕ), ಅಜ್ಜಮಾಡ ಚಂಗಪ್ಪ(ಸಮಾಜಸೇವೆ), ಅಜ್ಜಮಾಡ ಸಾವಿತ್ರಿ(ಕೊಡವ ಜಾನಪದ) ಇವರುಗಳಿಗೆ ಕೊಡವ ವಿಭೂಷಣ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.