

ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿರವರ ಜನ್ಮದಿನವಾದ ಶುಕ್ರವಾರ ತೀರ್ಥಕ್ಷೇತ್ರ ತಲಕಾವೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪಾದಯಾತ್ರೆ ಆರಂಭಿಸಿತು.
ಕೊಡಗು ಜಿಲ್ಲೆಯ ವಿವಿಧೆಡೆ ಐದು ಹಂತಗಳಲ್ಲಿ ಪಾದಯಾತ್ರೆ ನಡೆಯಲಿದೆ. ತಲಕಾವೇರಿಯಲ್ಲಿ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಯೋಗಕ್ಷೇಮಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗಾಗಿ ಪ್ರಾರ್ಥನೆ ಸಲ್ಲಿಸಿದರು. ನಂತರ ಕೊಡವ ಲ್ಯಾಂಡ್ ಪರ ಘೋಷಣೆಯೊಂದಿಗೆ ಪಾದಯಾತ್ರೆ ಆರಂಭಗೊಂಡಿತು.
ತಲಕಾವೇರಿ(ತಾವುನಾಡ್), ದೇವಟ್ ಪರಂಬ್(ದೇಶ ಮಂದ್), ಮಚ್ಚುರೋಡೆ ಮಂದ್(ಬಲ್ಲತ್ ನಾಡ್) ಮತ್ತು ಬೇಂಗ್ ನಾಡ್ ಮಂದ್ (ಚೇರಂಬಾಣೆ) ಯಲ್ಲಿ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪರವರು ಪಾದಯಾತ್ರೆಯ ಉದ್ದೇಶದ ಕುರಿತು ಮಾತನಾಡಿದರು.
ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರುವವರೆಗೆ ಸಂವಿಧಾನದ ಚೌಕಟ್ಟಿನಡಿ ಸಿಎನ್‌ಸಿ ಸಂಘಟನೆ ಶಾಂತಿಯುತ ಹೋರಾಟವನ್ನು ಮುಂದುವರೆಸಲಿದೆ. ತಲಕಾವೇರಿಯಿಂದ ಆರಂಭಗೊಂಡಿರುವ ಈ ಪಾದಯಾತ್ರೆ ೫ ಹಂತಗಳಲ್ಲಿ ನಡೆಯಲಿದ್ದು, ಮಾರ್ಗದುದ್ದಕ್ಕೂ ಕೊಡವರನ್ನು ಭೇಟಿ ಮಾಡಲಾಗುವುದು. ಪ್ರತಿ ನಾಡ ಮಂದ್‌ಗಳಲ್ಲಿ ಸಭೆ ನಡೆಸಿ ಜನಜಾಗೃತಿ ಮೂಡಿಸುವುದರೊಂದಿಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಸಿಎನ್‌ಸಿಯ ೯ ಬೇಡಿಕೆಗಳ ಕುರಿತು ಪಾದಯಾತ್ರೆ ಸಂದರ್ಭ ಜನಜಾಗೃತಿ ಮೂಡಿಸಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು.
ಪುಲ್ಲೇರ ಸ್ವಾತಿ ಕಾಳಪ್ಪ, ಪಟ್ಟಮಾಡ ಲಲಿತ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ನಂದಿನೆರವಂಡ ನಿಶ ಅಚ್ಚಯ್ಯ, ನಂದಿನೆರವಂಡ ಕೃಪ, ಅರೆಯಡ ಕವಿತಾ ಗಿರೀಶ್, ಕಲಿಯಂಡ ದೀನ ಪ್ರಕಾಶ್, ಕರವಂಡ ಸರಸು, ಪಟ್ಟಮಾಡ ಸೀತಮ್ಮ, ಮಂದಪಂಡ ಸೀತವ್ವ ಮುತ್ತಣ್ಣ, ಪ್ರಕಾಶ್, ಮಂದಪಂಡ ಮನೋಜ್, ಪಟ್ಟಮಾಡ ಕುಶ, ಅಳಮಂಡ ಜೈ, ಅಳಮಂಡ ನೆಹರು, ಬಾಚರಣಿಯಂಡ ಚಿಪ್ಪಣ್ಣ, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಪುಲ್ಲೇರ ಕಾಳಪ್ಪ, ನಂದಿನೆರವಂಡ ವಿಜು, ನಂದಿನೆರವಂಡ ಬೋಪಣ್ಣ ಮಂದಪಂಡ ಸೂರಾಜ್ ಮತ್ತಿತರರು ಪಾದಯಾತ್ರೆ ಸಂದರ್ಭ ಹಾಜರಿದ್ದರು.