

ಮಡಿಕೇರಿ: ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ದಿನವಾದ ಮಂಗಳವಾರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವ ಮೂಲಕ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿತು.
ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಪ್ರಮುಖರು ಅತಿಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗದ ವಿರುದ್ಧ ನಡೆಯುತ್ತಿರುವ ತಾರತಮ್ಯ ಮತ್ತು ಪ್ರಚೋದನೆಯನ್ನು ಹತ್ತಿಕ್ಕಲು ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಧರಣಿಯ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ಈಶಾನ್ಯ ಭಾರತ, ಲೇಹ್ ಮತ್ತು ಲಡಾಕ್, ಸ್ವಲ್ಪ ಮಟ್ಟಿನ ಹೈದರಾಬಾದ್ ಕರ್ನಾಟಕ ಪ್ರದೇಶದ ಮಾದರಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕೊಡವ ಲ್ಯಾಂಡ್‌ನ್ನು ನೀಡಬೇಕು. ಕೊಡವ ಜನಾಂಗವನ್ನು ಸಂವಿಧಾನದ ೩೪೦ ಮತ್ತು ೩೪೨ ವಿಧಿಯಡಿ ಎಸ್ಟಿ ಎಂದು ಘೋಷಿಸಬೇಕು. ಕೊಡವರ ಭೂಮಿ, ಜಾನಪದ ಕಲೆ, ಸಂಸ್ಕೃತಿ, ಜಾನಪದ ಕಾನೂನು ವ್ಯವಸ್ಥೆಗಳು, ಸಂಪ್ರದಾಯದ ಕಾನೂನು ಮತ್ತು ಅದರ ಐತಿಹಾಸಿಕ ನಿರಂತರತೆಯನ್ನು ಯಾವುದೇ ಅಡೆತಡೆಯಿಲ್ಲದೆ ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ನದಿಯ ನೀರಿನ ಪಾಲನ್ನು ಕೊಡಗಿಗೂ ನೀಡಬೇಕು. ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆಯ ಸಂಚಿನಲ್ಲಿ ರಾಜಕೀಯ ಹತ್ಯೆಗೊಳಗಾದ ಹಿರಿಯರ ಸ್ಮಾರಕ ನಿರ್ಮಿಸಬೇಕು. ಕೊಡವ ಜನಾಂಗದ ಹಿಂದಿನ ಕಾಲದ ಯುದ್ಧಭೂಮಿ ದೇವಟ್ ಪರಂಬನ್ನು ಸಂರಕ್ಷಿಸಬೇಕು. ಹೊಸ ಸಂಸತ್ತಿನ ಕೇಂದ್ರ ವಿಸ್ತಾದಲ್ಲಿ ಕೊಡವ ಪ್ರಾತಿನಿಧ್ಯವನ್ನು ನೀಡಬೇಕು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಬರೆದಿರುವ ಮನವಿ ಪತ್ರವನ್ನು ನಾಚಪ್ಪ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುಲ್ಲೇರ ಸ್ವಾತಿ ಕಾಳಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ.ಪಾರ್ವತಿ, ಕೂಪದಿರ ಪುಷ್ಪ ಮುತ್ತಪ್ಪ, ಅಜ್ಜಿನಿಕಂಡ ಇನಿತ ಮಾಚಯ್ಯ, ಇಟ್ಟಿರ ಸಬಿತ ಭೀಮಯ್ಯ, ಮುಂಡಚಾಡಿರ ಫ್ಯಾನ್ಸಿ ಕರುಂಬಯ್ಯ, ಅಪ್ಪಚ್ಚಿರ ರೀನಾ ನಾಣಯ್ಯ, ಚೋಳಪಂಡ ಜ್ಯೋತಿ ನಾಣಯ್ಯ, ಕಲಿಯಂಡ ಪ್ರಕಾಶ್ ಇತರರಿದ್ದರು.