

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಭೂಪರಿವರ್ತನೆಗಳ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಜೂ.೧೦ ರಂದು ಬಾಳೆಲೆಯಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ೧೦.೩೦ ಗಂಟೆಗೆ ಬಾಳೆಲೆ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಜಿಲ್ಲೆಯಲ್ಲಿ ನಡೆಯುತ್ತಿರುವ ಭೂಪರಿವರ್ತನೆ ವಿರುದ್ಧ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಮಾಹಿತಿ ನೀಡಿದ ಅವರು, ಕಾಫಿ ತೋಟಗಳ ಭೂಪರಿವರ್ತನೆಯಿಂದ ಕೊಡಗಿನ ಎಲ್ಲಾ ಗ್ರಾಮಗಳು ನಾಶವಾಗುತ್ತಿವೆ. ಮಣ್ಣು ಅಗೆಯುವ ಕೆಲಸದಿಂದ ಬಹುವಾರ್ಷಿಕ ಜಲಮೂಲಗಳ ನರ ಕೇಂದ್ರಗಳು ಈಗಾಗಲೇ ಮುಚ್ಚಿವೆ. ಈ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರೊಂದಿಗೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಎಸ್.ಟಿ ಟ್ಯಾಗ್, ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳನ್ನು ಮಾನ್ಯ ಮಾಡಬೇಕು ಸೇರಿದಂತೆ ಇಡೀ ಕೊಡವ ಜನಾಂಗದ ಪರವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಮಡಿಕೇರಿ, ಸುಂಟಿಕೊಪ್ಪ, ಮಾದಾಪುರ, ಚೆಟ್ಟಳ್ಳಿ, ಚೇರಂಬಾಣೆ, ಮೂರ್ನಾಡು, ಕಕ್ಕಬೆ, ನಾಪೋಕ್ಲು, ವಿರಾಜಪೇಟೆ, ಸಿದ್ದಾಪುರ, ಗೋಣಿಕೊಪ್ಪ, ತಿತಿಮತಿ, ಬಾಳೆಲೆ, ಪೊನ್ನಂಪೇಟೆ, ಹುದಿಕೇರಿ, ಕುಟ್ಟ, ಶ್ರೀಮಂಗಲ, ಟಿ.ಶೆಟ್ಟಿಗೇರಿ ಮತ್ತಿತರೆಡೆ ಕೂಡ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.