ಪುಷ್ಪ ನಮನ ಸಲ್ಲಿಸಿ ಹಿರಿಯರನ್ನು ಸ್ಮರಿಸಿದ ಸಿಎನ್‌ಸಿ

cnc
Published on

ಮಡಿಕೇರಿ: ದೇವಟ್ ಪರಂಬುವಿನಲ್ಲಿ ಕೊಡವರ ನರಮೇಧ ನಡೆದು ೨೩೮ ವರ್ಷಗಳು ತುಂಬಿದ ಹಿನ್ನೆಲೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಹಿರಿಯರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಅರ್ಪಿಸಿತು.


ಸಮಾಧಿ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪರವರು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ಮಾತನಾಡಿದ ಅವರು, ೧೭೮೫ ಡಿ.೧೨ ರಂದು ಷಡ್ಯಂತ್ರದಿಂದ ಸಾವಿರಾರು ಕೊಡವರ ಹತ್ಯೆಯಾಗಿದೆ. ಮೈಸೂರು ಸೈನ್ಯವನ್ನು ವಿಶ್ವದ ಅತ್ಯಂತ ಬಲಿಷ್ಠ ಸೇನಾ ಶಕ್ತಿ ಎಂದು ಪರಿಗಣಿಸಲಾಗಿತ್ತು ಮತ್ತು ಯುರೋಪಿಯನ್ ಸೈನ್ಯಕ್ಕಿಂತ ಹೆಚ್ಚು ಶಕ್ತಿಶಾಲಿ ಸೈನ್ಯವಾಗಿತ್ತು. ಅಂತಹ ಪ್ರಬಲ ಸೈನ್ಯವು ಕೊಡವ ಯೋಧ ಜನಾಂಗವನ್ನು ಸೋಲಿಸಲು ಸಾಧ್ಯವಾಗಲಿಲ್ಲ. (ಮೇಕಿಂಗ್ ಹಿಸ್ಟರಿ ಆಫ್ ಕರ್ನಾಟಕದಲ್ಲಿ ದಾಖಲಿಸಲಾಗಿದೆ) ಕೊಡವ ಬುಡಕಟ್ಟುಗಳು ಅಂತಹ ನುರಿತ ಮತ್ತು ಅತ್ಯುತ್ತಮ ಗೆರಿಲ್ಲಾ ಯೋಧರು. ಆದರೆ, ಅವರ ಮಿಲಿಟರಿ ಕೌಶಲ್ಯ ಮತ್ತು ಕುರುಡು ನಿಷ್ಠೆಯನ್ನು ಕೃತಘ್ನ ರಾಜ ಪರಿವಾರವು ವ್ಯರ್ಥಮಾಡಿತು ಮತ್ತು ದುರುಪಯೋಗಪಡಿಸಿಕೊಂಡಿತು ಎಂದರು.


ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿರವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಪರವಾಗಿ ಆಯೋಗವನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು. ದೇವಟ್ ಪರಂಬು ಸಮಾಧಿಯಲ್ಲಿ ಅಂತರ ರಾಷ್ಟ್ರೀಯ ಕೊಡವ ನರಮೇಧ ಸ್ಮಾರಕ ನಿರ್ಮಿಸಬೇಕು. ಸೇರಿದಂತೆ ಸಿಎನ್‌ಸಿ ಮೂಲಕ ಪ್ರಮುಖ ಹಕ್ಕೊತ್ತಾಯಗಳನ್ನು ಮಂಡಿಸಿದರು.


ಈ ಸಂದರ್ಭದಲ್ಲಿ ಮುದಗೇರಿನಾಡಿನ ಪುಲ್ಲೇರ ಸ್ವಾತಿ ಕಾಳಪ್ಪ, ನೆಲ್ಲಿಯಪುದಿಕೇರಿ ನಾಡಿನ ನಂದೇಟಿರ ಕವಿತ, ನೂರುಕ್ಕನಾಡಿನ ಚೋಳಪಂಡ ಜ್ಯೋತಿ ನಾಣಯ್ಯ, ಬೇಂಗ್ ನಾಡಿನ ಅಲ್ಮಂಡ ಜೈ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಪಟ್ಟಮಾಡ ಅಶೋಕ್ ಮತ್ತಿತರರು ಪಾಲ್ಗೊಂಡು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net