ಕೈಲ್ ಪೊವ್ದ್ ಪ್ರಯುಕ್ತ ಪುಷ್ಪ ನಮನ

cnc
Published on

ಮಡಿಕೇರಿ: ಕೈಲ್ ಪೊವ್ದ್ ಹಬ್ಬದ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ಕೊಡವರ ನರಮೇಧದ ಸ್ಮಾರಕ ಸ್ಥಳದಲ್ಲಿ ಮಂಗಳವಾರ ಪುಷ್ಪ ನಮನ ಸಲ್ಲಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಹಿರಿಯರಿಗೆ ಮೀದಿ ಇಟ್ಟು ತೋಕ್ ಪೂವ್ ಸಮರ್ಪಿಸಿದ ಸದಸ್ಯರು ಗೌರವ ಸಲ್ಲಿಸಿ ಮುಂದಿನ ಹೋರಾಟಕ್ಕೆ ಬೆಂಬಲ ಕೋರಿದರು.

ಹಬ್ಬದ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ ಎನ್.ಯು.ನಾಚಪ್ಪ ಅವರು ಕೈಲ್ ಪೊವ್ದ್ ಮತ್ತು ಕೊಡವರ ಧಾರ್ಮಿಕ ಸಂಸ್ಕಾರ ಕೋವಿ ಹಕ್ಕಿನ ಕುರಿತು ಪ್ರತಿಪಾದಿಸಿದರು.

ಆದಿಮ ಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಏಕ-ಜನಾಂಗೀಯ ಅನಿಮಿಸ್ಟಿಕ್ ಕೊಡವ ಸಮುದಾಯಕ್ಕೆ ಕೊಡವ ಜನಾಂಗೀಯತೆಯ ಧಾರ್ಮಿಕ ಸಂಸ್ಕಾರ ಗನ್‌ಗೆ ಸಾಂವಿಧಾನಿಕ ಖಾತರಿ ನೀಡಬೇಕು. ಭಾರತೀಯ ಸಂವಿಧಾನದ ೨೫ ಮತ್ತು ೨೬ ವಿಧಿಗಳಡಿಯಲ್ಲಿ ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸೂಕ್ಷ್ಮವಾದ ಪ್ರಾಚೀನ ಕೊಡವ ಬುಡಕಟ್ಟು ಜನಾಂಗವನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ರಕ್ಷಿಸಬೇಕು. ೧೯೬೪ರ ವೆನಿಸ್ ಚಾರ್ಟರ್ ನ ಆರ್ಟಿಕಲ್ ೭ ಮತ್ತು ಭಾರತದ ಸಂವಿಧಾನದ ಆರ್ಟಿಕಲ್ ೪೯ರ ಅಡಿಯಲ್ಲಿ ದೇವಟ್ ಪರಂಬ್ ದುರಂತ ಸ್ಮಾರಕ ಸ್ಥಳದಲ್ಲಿ ಅಂತರರಾಷ್ಟ್ರೀಯ ಕೊಡವ ನರಮೇಧ ಸ್ಮಾರಕವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಲಿಯಂಡ ಮೀನಾ, ಕಲಿಯಂಡ ಪ್ರಕಾಶ್, ಅಳಮಂಡ ಜೈ, ಮಂದಪಂಡ ಮನೋಜ್, ಮಂದಪಂಡ ಸೂರಜ್, ಚಿಯಬೆರ ಸತೀಶ್, ಮಂಗೇರಿರ ಜಗದೀಶ್ ಹಾಗೂ ಮಂದಪಂಡ ನಾಣಯ್ಯ ಅವರುಗಳು ಹಾಜರಿದ್ದು ಹಿರಿಯರಿಗೆ ಗೌರವ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net