

ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ ೯ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡಗು ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನುಬದ್ಧ ಹಕ್ಕೊತ್ತಾಯಗಳ ಪ್ರತಿಪಾದಕ, ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಜನ್ಮದಿನವಾದ ಸೆ.೧೫ ರಂದು ಕೊಡವರ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ (ತಾವುನಾಡ್) ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ತಲಕಾವೇರಿಯಿಂದ ಆರಂಭಗೊಳ್ಳುವ ಪಾದಯಾತ್ರೆ ೫ ಹಂತಗಳಲ್ಲಿ ನಡೆಯಲಿದ್ದು, ಮಾರ್ಗದುದ್ದಕ್ಕೂ ಕೊಡವರನ್ನು ಭೇಟಿ ಮಾಡಲಾಗುವುದು. ಭೂತ, ವರ್ತಮಾನ ಮತ್ತು ಭವಿಷ್ಯದ ಭಂಡಾರವಾಗಿರುವ ಪ್ರತಿ ನಾಡ ಮಂದ್‌ಗಳಲ್ಲಿ ಸಭೆ ನಡೆಸಿ ಕೊಡವ ಜನಜಾಗೃತಿ ಮೂಡಿಸಲಾಗುವುದು. ಪಾದಯಾತ್ರೆಯು ನವೆಂಬರ್ ಎರಡನೇ ವಾರ ಶ್ರೀಪಾಡಿ ಇಗ್ಗುತ್ತಪ್ಪ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ.
ಸಿಎನ್‌ಸಿ ಮೂಲಕ ಜನರ ಆಕಾಂಕ್ಷೆಗಳನ್ನು ಪ್ರತಿಧ್ವನಿಸಲು, ಮೂಲೆ ಮೂಲೆಗಳಲ್ಲಿ ಯುಎನ್/ವಿಶ್ವ ರಾಷ್ಟ್ರ ಸಂಸ್ಥೆ ಚಾರ್ಟರ್‌ನಲ್ಲಿ ಪ್ರತಿಪಾದಿಸಿರುವ ಸಾರ್ವತ್ರಿಕ ಕಾನೂನಿನ ಪ್ರಕಾರ ಮತ್ತು ಭಾರತದ ಸಂವಿಧಾನದ ಅಡಿಯಲ್ಲಿ ಸ್ವಯಂ ಆಡಳಿತ ಹಾಗೂ ಸ್ವಯಂ ನಿರ್ಣಯದ ಹಕ್ಕುಗಳನ್ನು ಸ್ಥಾಪಿಸಲು ಆರ್ಟಿಕಲ್ ೩೨ ಅನ್ನು ಕಸರತ್ತು ಮಾಡುವ ಮೂಲಕ ಪ್ರಚಾರ ಮಾಡುತ್ತಿದ್ದೇವೆ. ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಯತ್ತತೆಯೂ ಕರ್ನಾಟಕದ ಸ್ವಾಧೀನದ ಅಡಿಯಲ್ಲಿ ಭಾರತದ ಸಾರ್ವಭೌಮತ್ವಕ್ಕೆ ಪೂರಕವಾಗಿರುತ್ತದೆ ಎಂದು ನಾಚಪ್ಪ ಸ್ಪಷ್ಟಪಡಿಸಿದ್ದಾರೆ.