ಸಿಎನ್‌ಸಿಯಿಂದ ಸತ್ಯಾಗ್ರಹ, ಹಕ್ಕೊತ್ತಾಯ ಮಂಡನೆ

cnc
Published on

ಮಡಿಕೇರಿ: ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವಾದ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಿತು.

ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿದ ಸಂಘಟನೆಯ ಸದಸ್ಯರು ಕೊಡವರ ಪರವಾದ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಸಿಎನ್‌ಸಿ ಸಂಘಟನೆ ಕಳೆದ ೩೫ ವರ್ಷಗಳಿಂದ ಸಂವಿಧಾನಬದ್ಧವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಶಾಂತಿಯುತವಾಗಿ ಹೋರಾಟ ನಡೆಸುತ್ತಿದೆ. ಖ್ಯಾತ ಅರ್ಥಶಾಸ್ತ್ರಜ್ಞ, ಹಾರ್ವರ್ಡ್ ವಿದ್ವಾಂಸ ಡಾ.ಸುಬ್ರಮಣಿಯನ್ ಸ್ವಾಮಿ ಹಾಗೂ ಸಿಎನ್‌ಸಿ ಜಂಟಿಯಾಗಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ಸಲ್ಲಿಸಿದ್ದು, ಕಾನೂನುಬದ್ಧ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಹೇಳಿದರು.

ಆದಿಮಸಂಜಾತ ಕೊಡವ ಜನಾಂಗವನ್ನು ಪರಿಶಿಷ್ಟ ಪಂಗಡ ಎಂದು ಗುರುತಿಸಬೇಕು. ಅಂತರರಾಷ್ಟ್ರೀಯ ಕಾನೂನಿನಡಿಯಲ್ಲಿ ಕೊಡವರ ಹಕ್ಕುಗಳನ್ನು ಪರಿಗಣಿಸಬೇಕು. ಕೊಡವ ಜಾನಪದ ಸಾಂಸ್ಕೃತಿಕ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಪರಿಗಣಿಸಬೇಕು. ಕೊಡವ ಸಮುದಾಯದ ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಪದ್ಧತಿಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಮತ್ತು ರಕ್ಷಣೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೇಖಾ ನಾಚಪ್ಪ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಅಜ್ಜಿಕುಟ್ಟೀರ ಲೋಕೇಶ್, ಬೊಟ್ಟಂಗಡ ಗಿರೀಶ್, ಅರೆಯಡ ಗಿರೀಶ್, ಮಂದಪಂಡ ಮನೋಜ್, ಕಾಂಡೇರ ಸುರೇಶ್, ಕಾಟುಮಣಿಯಂಡ ಉಮೇಶ್, ಕಿರಿಯಮಾಡ ಶೆರಿನ್, ಕೂಪದಿರ ಸಾಬು, ಪುಟ್ಟಿಚಂಡ ಡಾನ್ ದೇವಯ್ಯ, ಬೇಪಡಿಯಂಡ ಬಿದ್ದಪ್ಪ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net