

ಮಡಿಕೇರಿ: ಹುಟ್ಟಿನಿಂದಲೇ ಬುಡಕಟ್ಟು ಹಿನ್ನೆಲೆಯುಳ್ಳ ಕೊಡವರಿಗೆ ಸಾಂವಿಧಾನಿಕ ಸ್ಥಾನಮಾನ ನೀಡುವುದು ಸರ್ಕಾರದ ಕರ್ತವ್ಯ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ನಂದಿನೆರವಂಡ ಯು. ನಾಚಪ್ಪ ಕೊಡವ ಹೇಳಿದರು.
ಬುಧವಾರ ಸಂಜೆ ಆನ್‌ಲೈನ್‌ನಲ್ಲಿ ಆಯೋಜಿಸಲಾಗಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ವೆಬಿನಾರ್‌ನಲ್ಲಿ ಪಾಲ್ಗೊಂಡು ಮಾತನಾಡಿದರು.
ಕೊಡವ ಜನಾಂಗವೂ ಕೊಡಗಿನ ಏಕೈಕ ಆದಿ ಮೂಲನಿವಾಸಿ ಜನಾಂಗವಾಗಿದ್ದು, ಪಶ್ಚಿಮಘಟ್ಟ ಬೆಟ್ಟ ಸಾಲುಗಳ, ಅರಣ್ಯ ಪ್ರದೇಶದಲ್ಲಿ ಮಾನವ ಉತ್ಪತ್ತಿಯ ಕಾಲ ದಿಂದಲೇ, ಉಗುರು, ಬೆರಳುಗಳಿಂದ ಬೆಟ್ಟ ಗುಡ್ಡ ಅಗೆದು ಬಗೆದು ಬದುಕು ಕಟ್ಟಿಕೊಂಡ ಬುಡಕಟ್ಟು ಜನಾಂಗ. ಬುಡಕಟ್ಟು ಸಂಸ್ಕೃತಿಯು ರಕ್ತದಲ್ಲಿಯೇ ಇದೆ. ಇದನ್ನು ಸರ್ಕಾರ ಸಂವಿಧಾನ ಬದ್ಧವಾಗಿ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯ. ಅದನ್ನು ಆದಷ್ಟು ಜರೂರಾಗಿ ನೀಡುವಂತಾಗಬೇಕೆಂದರು.
ಕೊಡವರು ಹುಟ್ಟಿನಿಂದಲೇ ಬುಡಕಟ್ಟು ಬದುಕನ್ನು ಆದಿ ಯುಗದಿಂದ ಇಂದಿನವರೆಗೂ ನಡೆಸಿಕೊಂಡು ಬರುತ್ತಿದ್ದೇವೆ. ಇದಕ್ಕೆ ನಮ್ಮ ಸಂಪ್ರದಾಯ ಆಚರಣೆ, ಬದುಕಿನ ಶೈಲಿಯೇ ಸಾಕ್ಷಿ ಇದಕ್ಕಿಂತ ಹೆಚ್ಚಿನ ಸಾಕ್ಷಿಯ ಅಗತ್ಯವಿಲ್ಲ. ದೇಶ ಹಾಗೂ ಪ್ರಪಂಚದಾದ್ಯಂತ ಈಗಾಗಲೇ ಹಲವಾರು ಬುಡಕಟ್ಟು ಜನಾಂಗಗಳನ್ನು ಆಯಾ ಸರ್ಕಾರಗಳು ಗುರುತಿಸಿ ಸಾಂವಿಧಾನಿಕ ಭದ್ರತೆ ನೀಡಿದೆ. ಅದರಂತೆ ಕೊಡವರೂ ಕೂಡ ಇದಕ್ಕೆ ಅರ್ಹರಾಗಿದ್ದು ಸರ್ಕಾರ ಕೂಡಲೆ ಈ ಕುರಿತು ಅಗತ್ಯ ನಿರ್ಧಾರಕ್ಕೆ ಮುಂದಾಗಬೇಕು. ಕೊಡವರಿಗೆ ಬುಡಕಟ್ಟು ಸ್ಥಾನಮಾನವು ನಮ್ಮ ಹಕ್ಕಾಗಿದ್ದು ಸರ್ಕಾರವೂ ಕೂಡ ಇದನ್ನ ಹಕ್ಕಾಗಿಯೇ ಸಾಂವಿಧಾನಿಕ ಖಾತ್ರಿ ನೀಡಬೇಕು ಹೊರತಾಗಿ ಭಿಕ್ಷೆ ಎಂದು ಭಾವಿಸಬಾರದೆಂದು ನಾಚಪ್ಪ ಕೊಡವ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆ ಉಪಾಧ್ಯಕ್ಷೆ ಕುಲ್ಲಚಂಡ ವಿನುತಾ ಕೇಸರಿ, ಸದಾ ಸಮಾಜಮುಖಿ ಚಿಂತನೆಯೊಂದಿಗೆ ಜನಾಂಗದ ಸೇವೆಗೆ ನಮ್ಮ ಸಂಘಟನೆ ತುಡಿಯುದೆ ಎಂದರು.
ಕೊಡವಾಮೆರ ಕೊಂಡಾಟ ಸಂಘಟನೆ ಸ್ಥಾಪಕಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಮಾತನಾಡಿ, ಬುಡಕಟ್ಟು ಎಂದರೆ ಪ್ರಕೃತಿಯ ಆದಿ ಯಿಂದಲೇ ಬಂದವರು. ಕೊಡವರು ಬುಡಕಟ್ಟು ಪರಂಪರೆಯನ್ನು ರಕ್ತದಲ್ಲಿಯೇ ಪಡೆದವರು. ಇದಕ್ಕೆ ಸರ್ಕಾರ ಸಾಂವಿಧಾನಿಕ ಭದ್ರತೆ ನೀಡಬೇಕು. ಇದಕ್ಕಾಗಿ ಹೋರಾಡುವವರಿಗೆ ನಮ್ಮ ಸಂಘಟನೆ ಬೆಂಬಲಿ ಇದೆ ಎಂದು ಹೇಳಿದರು.
ಅಜ್ಜಿಕುಟ್ಟಿರ ಭವ್ಯ ಬೋಪಣ್ಣ ಸ್ವಾಗತಿಸಿದರು. ಕುಯ್ಮಂಡ ಮಮತಾ ಮೇದಪ್ಪ ನಿರೂಪಿಸಿದರು. ಕುಂಞಿರ ಗಿರೀಶ್ ಭೀಮಯ್ಯ ವಂದಿಸಿ ದರು. ಕುಲ್ಲಚಂಡ ದೇಚಮ್ಮ ಕೇಸರಿ ನಿರೂಪಿಸಿದರು.