ಸಿಎನ್‌ಸಿ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆ ಆಚರಣೆ

Published on

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಗುರುವಾರ ಕ್ಯಾಪಿಟಲ್ ವಿಲೇಜ್‌ನಲ್ಲಿ ೨೮ನೇ ಸಾರ್ವತ್ರಿಕ ಕೈಲ್ ಪೊವ್ದ್ ನಮ್ಮೆ ಆಚರಣೆ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.

ಕೊಡವ ಕುಲದ ಧಾರ್ಮಿಕ ಸಂಸ್ಕಾರವಾದ ಕೋವಿ ಮತ್ತು ಒಡಿಕತ್ತಿಗಳನ್ನು ತೋಕ್‌ಪೂನಿಂದ ಸಿಂಗರಿಸುವ ಮೂಲಕ ಕ್ಯಾಪಿಟಲ್ ವಿಲೇಜ್ ಮಂದ್‌ನಲ್ಲಿ ಸಾಂಸ್ಕೃತಿಕ ವಿಧಿ ವಿಧಾನಗಳ ಮೂಲಕ ಗೌರವಾರ್ಪಣೆ ಸಲ್ಲಿಸಿಸಲಾಯಿತು. ಗುರು -ಕಾರೋಣರಿಗೆ ನೈವೇದ್ಯ ಅರ್ಪಿಸ ಲಾಯಿತು.

ಕೊಡವ ರೇಸ್‌ನ ಶಾಶ್ವತ ಅಸ್ತಿತ್ವಕ್ಕಾಗಿ ರಾಜ್ಯಾಂಗ ಖಾತ್ರಿಗೆ ಸಂಬಂಧಪಟ್ಟ ೯ ಪ್ರಧಾನ ಆಶೋತ್ತರಗಳು ಮತ್ತು ಗೌರವಾನ್ವಿತ ಗುರಿಯ ಸಾಧನೆಗಾಗಿ ನಿರ್ಣಯ ಅಂಗೀಕರಿಸಲಾಯಿತು. ಕಾರ್ಯಕ್ರಮದಲ್ಲಿ ದುಡಿಕೊಟ್ಟ್ ಪಾಟ್, ಮಹಿಳೆಯರು ಮತ್ತು ಪುರುಷರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು.

ಸಭಾ ಕಾರ್ಯಕ್ರಮದ ನಂತರ ಕೊಡವ ಸಾಂಪ್ರದಾಯಿಕ ಅಡುಗೆ ಬಡಿಸಲಾಯಿತು. ಮುಕ್ಕೋಡ್ಲು ವ್ಯಾಲಿ ಡ್ಯೂ ಸಾಂಸ್ಕೃತಿಕ ಕಲಾತಂಡ ದಿಂದ ಕತ್ತಿಯಾಟ್, ಕೋಲಾಟ್, ಪೀಲಿಯಾಟ್ ನೃತ್ಯ ಪ್ರದರ್ಶನಗೊಂಡಿತು. ಮಹಿಳೆಯರು, ಪುರುಷರು ತೋಕ್ ಪ್ರದರ್ಶನದ ನೃತ್ಯ ಕೂಡ ನಡೆಯಿತು.

ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್, ಕೊಡವರು ಬೇಟೆ ಮತ್ತು ಸಮರ ಕೌಶಲ ರಕ್ತಗತವಾಗಿ ಅಂತರ್ಗತ ಮಾಡಿಕೊಂಡ ಯೋಧ ಸಮುದಾಯವಾಗಿದ್ದಾರೆ. ಕೊಡವರು ತಮ್ಮದೇ ಆದ ಸೂಕ್ಷ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಒಳಕೋಶ ಹೊಂದಿದ್ದಾರೆಂದರು.

ಮಾನವ ಕುಲ ಸೃಷ್ಟಿಯಾದಾಗಲೇ ಈ ನೆಲದಲ್ಲಿ ಉತ್ಪತ್ತಿಯಾದ ಕೊಡವ ಕುಲ ಮತ್ತು ಈ ಭೂ ಮಂಡಲ ಸೃಷ್ಟಿಯೊಂದಿಗೆ ಉದ್ಭವವಾದ ಕೊಡವ ಜನ್ಮ ಭೂಮಿ ಸೂರ್ಯ -ಚಂದ್ರರಷ್ಟೆ ಪ್ರಾಚೀನವಾಗಿದೆ. ಕೊಡವ ಮೂಲ ವಂಶಸ್ಥರ ಧಾರ್ಮಿಕ ಸಂಸ್ಕಾರವಾದ ಕೋವಿ ಒಂದಕ್ಕೊಂದು ಬೆಸುಗೆಯಾಗಿದೆ. ಕೊಡವರ ಪ್ರಾಚೀನತೆಯು ಮತ್ತು ಕೊಡವರ ಪೂರ್ವಜತೆಯು ಈ ಮೇಲ್ಕಾಣಿಸಿದ ಪತ್ರ ಸಿದ್ದಾಂತ ಗಳೊಂದಿಗೆ ತಳಕು ಹಾಕಿದೆಯೆಂದು ಇಡೀ ಜಗತ್ತಿಗೆ ತೋರಿಸಲು ಸಾರ್ವತ್ರಿಕವಾಗಿ ಹಬ್ಬ ಆಚರಿಸುವುದು ಶ್ಲಾಘನೀಯ ಎಂದರು.

ಸಿಎನ್‌ಸಿ ಪ್ರಮುಖರಾದ ಪುಲ್ಲೇರ ಸ್ವಾತಿ ಕಾಳಪ್ಪ, ಲೆಪ್ಟಿನೆಂಟ್ ಕರ್ನಲ್ ನಂದಿನೆರವಂಡ ಪಾರ್ವತಿ (ನಿ), ಅರೆಯಡ ಸವಿತಾ, ಬೊಟ್ಟಂಗಡ ಸವಿತಾ, ಚೋಳಪ್ಪಂಡ ಜ್ಯೋತಿ, ನಂದಿನೆರವಂಡ ನಿಶ, ಐಲಪಂಡ ಉನ್ನತಿ, ಕಲಿಯಂಡ ಪ್ರಕಾಶ್, ಬಾಚಿರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಬೇಪಡಿಯಂಡ ಬಿದ್ದಪ್ಪ, ಪುಲ್ಲೇರ ಕಾಳಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net