ಕೊಡವರ ಹಕ್ಕುಗಳ ಈಡೇರಿಕೆಗೆ ಆಯೋಗ ರಚಿಸಲು ಡಾ.ಸುಬ್ರಮಣಿಯನ್ ಸ್ವಾಮಿ ಆಗ್ರಹ

23mdkd2 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡವ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳಿಗಾಗಿ ವರದಿ ನೀಡಲು ಆಯೋಗ ರಚಿಸುವಂತೆ ಮಾಜಿ ಕೇಂದ್ರ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು, ಗೃಹ ಕಾರ್ಯದರ್ಶಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು ಕೊಡವ ಬುಡಕಟ್ಟು ಸಮುದಾಯವನ್ನು ಆಡಳಿತ ವ್ಯವಸ್ಥೆ ನಿರ್ಲಕ್ಷಿಸುತ್ತಿದ್ದು, ಕೊಡಗಿನಲ್ಲಿ ೧೯೫೬ ರ ಹಿಂದಿನ ಗತವೈಭವ ಮರುಸ್ಥಾಪಿಸಲು ಮಧ್ಯ ಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.

ಕೊಡವ ಸಮುದಾಯವನ್ನು ಕಡೆಗಣಿಸುತ್ತಲೇ ಬಂದರೆ ಜನಾಂಗದ ಇತಿಹಾಸ ಮತ್ತು ಸಂಸ್ಕೃತಿಯ ಕುರುಹು ಮರೆಯಾಗುವ ಎಲ್ಲಾ ಸಾಧ್ಯತೆಗಳಿದೆ. ಕಳೆದ ಹಲವು ವರ್ಷಗಳಿಂದ ನಂದಿನೆರವಂಡ ಯು.ನಾಚಪ್ಪ ನೇತೃತ್ವದ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಕೊಡವ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಈ ಸಂಘಟನೆಯ ಕಾನೂನು ಬದ್ಧ ಬೇಡಿಕೆ ಪರಿಶೀಲಿಸಿ ಆಯೋಗ ರಚಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಂವಿಧಾನದ ೬ ನೇ ಶೆಡ್ಯೂಲ್ ಪ್ರಕಾರ ಕೊಡವ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕುಗಳ ಅನುಷ್ಠಾನ, ಕೊಡವ ಬುಡಕಟ್ಟು ಜನಾಂಗವನ್ನು ಎಸ್‌ಟಿ ಪಟ್ಟಿಗೆ ಸೇರಿಸಬೇಕು, ಸಿಖ್ ರ ಕಿರ್ಫಾಣ್ ಮಾದರಿಯಲ್ಲಿ ಕೊಡವ ಸಾಂಪ್ರದಾಯಿಕ ಜನಾಂಗೀಯ ಸಂಸ್ಕಾರ ತೋಕ್ ಗನ್‌ನ ಹಕ್ಕುಗಳನ್ನು ಸಂವಿಧಾನದ ೨೫ ಮತ್ತು ೨೬ ನೇ ವಿಧಿಗಳಡಿಯಲ್ಲಿ ರಕ್ಷಿಸಬೇಕು ಕೊಡವ ಥಕ್ ಅನ್ನು ೮ ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕೆಂದು ಗಮನ ಸೆಳೆದಿದ್ದಾರೆ.

ಭಾರತವು ಸ್ವಾತಂತ್ರ್ಯಪಡೆದ ಸಮಯದಲ್ಲಿ ೬೦೦ ರಾಜಪ್ರಭುತ್ವದ ರಾಜ್ಯಗಳು, ಅನೇಕ ಸಂರಕ್ಷಿತ ಪ್ರದೇಶಗಳು, ೪ ಬ್ರಿಟಿಷ್ ಇಂಡಿಯಾ ಪ್ರೆಸಿಡೆನ್ಸಿಗಳು, ಹಲವಾರು ಬ್ರಿಟಿಷ್ ಇಂಡಿಯಾ ಪ್ರಾಂತ್ಯಗಳು ಅಸ್ತಿತ್ವದಲ್ಲಿದ್ದವು. ಕೊಡವ ಸಾಂಪ್ರದಾಯಿಕ ಹೋಮ್ ಕೂರ್ಗ್ ಪ್ರಾಂತ್ಯವು ಅವುಗಳಲ್ಲಿ ಒಂದಾಗಿತ್ತು. ಫ್ರೆಂಚ್ ಇಂಡಿಯಾ ವಸಾಹತುಗಳ ಜೊತೆಗೆ ಪಾಂಡಿಚೇರಿ, ಚಂದ್ರನಗರ ಮತ್ತು ಪೋರ್ಚುಗೀಸ್ ಇಂಡಿಯಾ ಕಾಲೋನಿ ಗೋವಾ ಕೂಡ ಅಸ್ತಿತ್ವದಲ್ಲಿತ್ತು. ಭಾರತವು ಸ್ವಾತಂತ್ರ್ಯ ಗಳಿಸಿದ ನಂತರ ೫೬೨ ರಾಜಪ್ರಭುತ್ವದ ರಾಜ್ಯಗಳು ಭಾರತೀಯ ಒಕ್ಕೂಟದೊಂದಿಗೆ ಲೀನಗೊಂಡವು.

೧೯೫೦ ರಲ್ಲಿ ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ನಂತರ ಸಿ ಸ್ಟೇಟ್ ಆಕ್ಟ್, ೧೯೫೧ ರ ಅಡಿಯಲ್ಲಿ, ಕೂರ್ಗ್‌ನಲ್ಲಿ ಹೊಸ ಶಾಸಕಾಂಗ ಸಭೆ ಅಸ್ತಿತ್ವಕ್ಕೆ ಬಂದಿತು. ಸಂವಿಧಾನದ ೨೪೨ ನೇ ವಿಧಿಯನ್ನು ಕೂರ್ಗ್ ರಾಜ್ಯಕ್ಕೆ ಪ್ರತ್ಯೇಕವಾಗಿ ಸೇರಿಸಲಾಯಿತು. ಸಂವಿಧಾನದ ೭ ನೇ ಶೆಡ್ಯೂಲ್ ಅಡಿ ರಾಜ್ಯ ಪಟ್ಟಿ ಮತ್ತು ಸಮಕಾಲೀನ ಪಟ್ಟಿಗೆ ಸೇರಿಸಲಾಯಿತು. ಕೊಡಗು ರಾಜ್ಯವು ಸಂಸತ್ತಿನ ಉಭಯ ಸದನಗಳಿಗೆ ಅಂದರೆ ರಾಜ್ಯಸಭೆ ಮತ್ತು ಲೋಕಸಭೆಗೆ ತಲಾ ಒಬ್ಬ ಪ್ರತಿನಿಧಿ ಕಳುಸುವ ಅವಕಾಶ ಹೊಂದಿತ್ತು.

’ಸಿ’ ಸ್ಟೇಟ್ಸ್ ಆಕ್ಟ್ ೧೯೫೨ ರ ಪ್ರಕಾರ ಕೊಡವ ತಾಯ್ನಡು ಕೂರ್ಗ್ ಭಾರತದ ಏಕೈಕ ಸ್ವಾವಲಂಬಿ ರಾಜ್ಯವಾದ ಭಾರತೀಯ ಒಕ್ಕೂಟದ ಭಾಗ ’ಸಿ’ ರಾಜ್ಯವಾಯಿತು. ಸರ್ದಾರ್ ವಲ್ಲಬಾಯಿ ಪಟೇಲ್ ಅವರು ಸಂಸತ್ತಿನಲ್ಲಿ ಕೂರ್ಗ್‌ನ್ನು ಭಾರತದ ಏಕೈಕ ರಾಮರಾಜ್ಯ ಎಂದು ಹೆಮ್ಮೆ ಯಿಂದ ಕರೆದಿದ್ದರೆಂದು ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net