ಮೇ೧೦ ರಂದು ಸಿಎನ್‌ಸಿ ಧರಣಿ ಸತ್ಯಾಗ್ರಹ

NACHAPPA N.U (2)
Published on

ಮಡಿಕೇರಿ: ಸಿದ್ದಾಪುರ ವ್ಯಾಪ್ತಿಯ ೨೪೦೦ ಏಕರೆ ಬಿಬಿಟಿಸಿ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಭೂಪರಿವರ್ತನೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೇ೧೦ ರಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶುಕ್ರವಾರ ಬೆಳಗ್ಗೆ ೧೦.೩೦ ಗಂಟೆಯಿಂದ ೧೧.೩೦ ರವರೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಹಾಗೂ ಸಂಬಂಧಿಸಿದ ಇತರೆ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.


ಹಸಿರ ಪರಿಸರದಿಂದ ಕೂಡಿರುವ ಕಾಫಿ ತೋಟವನ್ನು ಭೂಪರಿವರ್ತಿಸುವ ಮೂಲಕ ಭೂಮಾಫಿಯಾ, ರೆಸಾರ್ಟ್ ದೊರೆಗಳು, ರಿಯಲ್ ಎಸ್ಟೇಟ್ ದಣಿಗಳು, ಅನಿವಾಸಿ ಭಾರತೀಯ ಉದ್ಯಮಪತಿಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಕಾರ್ಪೋರೇಟ್ ವಲಯಗಳಿಗೆ ವಿಲಾ, ಬೃಹತ್ ಬಂಗಲೆ ಹಾಗೂ ಟೌನ್ ಶಿಪ್ ಗಳನ್ನು ನಿರ್ಮಿಸಲು ಸರ್ಕಾರ ಹಸಿರು ನಿಶಾನೆ ತೋರಿದಂತೆ ಕಂಡು ಬಂದಿದೆ. ಕಾವೇರಿ ನದಿ ಪಾತ್ರದ ಒಂದು ದೊಡ್ಡ ಹಸಿರು ಹೊದಿಕೆಯ ಭೂಪ್ರದೇಶದ ಪರಿಸರವನ್ನು ನಾಶ ಪಡಿಸಿದಲ್ಲಿ ಅದು ಭೌಗೋಳಿಕ ಅಸಮತೋಲನಕ್ಕೆ ಕಾರಣವಾಗಲಿದೆ. ದಕ್ಷಿಣ ಭಾರತದ ಜೀವನ ರೇಖೆಯಾದ ಕಾವೇರಿಯ ಜಲಮೂಲಗಳಿಗೆ ದಕ್ಕೆಯಾಗಲಿದೆ. ಭೂಪರಿವರ್ತಿತ ಪ್ರದೇಶಗಳ ಶಾಂತಿ, ಪ್ರಶಾಂತತೆ ಮತ್ತು ನೆಮ್ಮದಿ ಭಂಗವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net