

ಮಡಿಕೇರಿ: ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಹೊಸ ಸಂಸತ್‌ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪರವರ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕೊಡವ ಲ್ಯಾಂಡ್ ಮತ್ತು ಕೊಡವ ಪ್ರಾತಿನಿಧ್ಯದ ಪರ ಪ್ರಮುಖರು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ ಅನುಚ್ಛೇದ ೨೪೪ ಆರ್/ಡಬ್ಲ್ಯೂ ೬ನೇ ಮತ್ತು ೮ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು. ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಮತ ಕ್ಷೇತ್ರದ ಮಾದರಿಯಲ್ಲಿ ಹೊಸ ಸಂಸತ್‌ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಕೊಡವ ಲ್ಯಾಂಡ್ ಸ್ವಯಂ ಆಡಳಿತ ಮತ್ತು ಸಂಸತ್‌ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯದ ಕುರಿತು ರಾಷ್ಟ್ರಪತಿಗಳು ಸುಗ್ರಿವಾಜ್ಞೆ ಹೊರಡಿಸಬೇಕು. ಆರ್ಟಿಕಲ್ ೩೨ರ ಅಡಿಯಲ್ಲಿ ಸಾಂವಿಧಾನಿಕ ಪರಿಹಾರವಾಗಿ ಸಾಂವಿಧಾನಿಕ ಕಾರ್ಯವಿಧಾನವನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಈಗ ಕೇವಲ ೮೪೨ ಕೊಡವ ಕುಲಗಳಿವೆ. ಕೊಡವಲ್ಯಾಂಡ್ ಎಕೆಎ ಕೂರ್ಗ್‌ನಲ್ಲಿ ಸುಮಾರು ೮೦,೦೦೦ ಕೊಡವರು ವಾಸಿಸುತ್ತಿದ್ದಾರೆ. ಸುಮಾರು ೭೦,೦೦೦ ಕೊಡವರು ಕೊಡಗಿನಿಂದ ಹೊರಗೆ ಬದುಕು ಕಟ್ಟಿಕೊಂಡಿದ್ದಾರೆ. ಕೊಡವರು ಅತೀ ನಗಣ್ಯ ಸೂಕ್ಷ್ಮತಿ ಸೂಕ್ಷ್ಮ ಗುಂಪಾಗಿದ್ದು, ವಿನಾಶದಿಂದ ಶಾಸನಬದ್ಧ ರಕ್ಷಣೆಯ ಮೂಲಕ ನಮ್ಮ ಕೊಡವ ಸಮುದಾಯವನ್ನು ರಕ್ಷಿಸಬೇಕಾಗಿದೆ. ನಮ್ಮನ್ನು ಸಂರಕ್ಷಿಸಲು ನಾವು ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಕೊಡವರಿಗೆ ಸ್ವ-ಆಡಳಿತವನ್ನು ಬಯಸುತ್ತೇವೆ. ಗೂರ್ಖಾಲ್ಯಾಂಡ್, ಲಡಾಖ್ ಮತ್ತು ಲೇಹ್ ಬೌದ್ಧ ಸ್ವಾಯತ್ತ ಮಂಡಳಿಗಳ ಮಾದರಿಯಲ್ಲೆ ಸಂವಿಧಾನದ ಅಡಿಯಲ್ಲಿ ಈ ಹಕ್ಕೊತ್ತಯವನ್ನು ಪ್ರತಿಪಾದಿಸುತ್ತಿದ್ದೇವೆ ಎಂದರು.
ವಿಶೇಷವಾದ ಕೊಡವ ಅದೃಶ್ಯ-ವರ್ಚುವಲ್ ಕ್ಷೇತ್ರಗಳನ್ನು ರಚಿಸಿ ಕೇಂದ್ರೀಯ ವಿಸ್ಟಾ ಅಂದರೆ ಹೊಸ ಸಂಸತ್ತಿನಲ್ಲಿ ನಮಗೆ ಪ್ರಾತಿನಿಧ್ಯ ನೀಡಬೇಕು. ಕೊಡವರು ನೈಸರ್ಗಿಕ ನ್ಯಾಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಶಾಶ್ವತವಾಗಿ ಸಾಂವಿಧಾನಿಕ ಕಾರ್ಯವಿಧಾನದಲ್ಲಿ ಭಾಗವಹಿಸಲು ಪ್ರಜಾಪ್ರಭುತ್ವ ದೇಗುಲದಲ್ಲಿ ಸ್ಥಳ ನೀಡಬೇಕೆಂದು ಹೇಳಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸಂವಿಧಾನದ ತತ್ವಗಳಿಗೆ ಬದ್ಧವಾಗಿದೆ. ನಾವು ನಮ್ಮ ರಾಷ್ಟ್ರದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಗೌರವಿಸುತ್ತಿದ್ದೇವೆ. ನಮ್ಮ ಕಾನೂನುಬದ್ಧ ಆಕಾಂಕ್ಷೆಗಳು ಮತ್ತು ಗೌರವಾನ್ವಿತ ಗುರಿಗಳು ಸಾಂವಿಧಾನಿಕ ಚೌಕಟ್ಟಿನೊಳಗೆ ಇವೆ. ಆದ್ದರಿಂದ ಸಂಸತ್ ನಲ್ಲಿ ಕೊಡವರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಮತ್ತು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕೆಂದು ನಾಚಪ್ಪ ಒತ್ತಾಯಿಸಿದರು.
ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಕಾನೂನು ಮಂತ್ರಿ, ಭಾರತದ ಚುನಾವಣಾ ಆಯೋಗ, ವಿಶ್ವ ವಿಖ್ಯಾತ ಅರ್ಥ ಶಾಸ್ತ್ರಜ್ಞ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ವಿಶ್ವ ರಾಷ್ಟ್ರ ಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟಾನಿಯೋ ಗುಟರಸ್ ಅವರುಗಳಿಗೆ ಎನ್.ಯು.ನಾಚಪ್ಪರವರು ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಚೋಳಪಂಡ ಜ್ಯೋತಿ ನಾಣಯ್ಯ, ಅಪ್ಪನೆರವಂಡ ಶಾಂತಿ ಅಚಪ್ಪ ಸರ್ವ ಜಮ್ಮಡ ಮೋಹನ್, ಪಟ್ಟಮಾಡ ಕುಶಾಲಪ್ಪ, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಅರೆಯಡ ಗಿರೀಶ್, ಕಿರಿಯಮಡ ಶರೀನ್, ಚಂಬಂಡ ಜನತ್, ಮಂದಪಂಡ ಮನೋಜ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.