ದೇವಟ್ ಪರಂಬು ಹೆಸರಿನಲ್ಲಿ ರಾಜಕೀಯ ಮಾಡದಂತೆ ಒತ್ತಾಯ

MDK05
Published on

ಮಡಿಕೇರಿ: ದೇವಟ್ ಪರಂಬುವಿನಲ್ಲಿ ಟಿಪ್ಪುವಿನಿಂದ ಕೊಡವರ ಹತ್ಯಾಕಾಂಡವಾಗಿ ೨೩೭ ವರ್ಷ ತುಂಬಿದ ದಿನವಾದ ಸೋಮವಾರ ಸ್ಮಾರಕ ಸಮಾಧಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪುಷ್ಪನಮನದ ಮೂಲಕ ಹಿರಿಯರಿಗೆ ಗೌರವ ಅರ್ಪಿಸಿತು.


ಈ ಸಂದರ್ಭ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಅರಮನೆ ರಾಜಕೀಯ ಪಿತೂರಿಯಿಂದ ಕೊಡವರು ಹತ್ಯೆಗೀಡಾದ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಸೂಕ್ತವಲ್ಲ. ನಾಲ್ನಾಡ್ ಅರಮನೆ, ಮಡಿಕೇರಿ ಕೋಟೆ ಮತ್ತು ದೇವಟ್ ಪರಂಬುವಿನಲ್ಲಿ ನಡೆದ ಸಂಚಿನ ಹತ್ಯಾಕಾಂಡ ಕೊಡವ ಜನಾಂಗದ ಇತಿಹಾಸದಲ್ಲಿ ಮರೆಯಲಾಗದ ಆಘಾತಕಾರಿ ಅಧ್ಯಾಯವಾಗಿದೆ. ಆದರೆ, ಕೆಲವು ಚಲನಚಿತ್ರ ತಯಾರಕರು, ಸಾಮಾಜಿಕ ಜಾಲತಾಣಗಳಲ್ಲಿ ತೊಗಡಿಸಿಕೊಂಡಿರುವವರು, ಕೃತಿ ಚೌರ್ಯ ಮಾಡುವವರು, ದೇವಟ್‌ಪರಂಬುವಿಗೆ ಎಂದಿಗೂ ಭೇಟಿ ನೀಡದ ರಾಜಕೀಯ ವರ್ಗದವರು ಅಂತರರಾಷ್ಟ್ರೀಯ ಕೊಡವ ಹತ್ಯಾಕಾಂಡದ ಸ್ಮಾರಕದ ಬೇಡಿಕೆಯನ್ನು ಬೆಂಬಲಿಸಲಿಲ್ಲ ಅಥವಾ ಅಂಗೀಕರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಟಿಪ್ಪು, ಕೊಡವ ಮತ್ತು ದೇವಟ್ ಪರಂಬು ಹೆಸರಿನಲ್ಲಿ ಕೆಲವರು ಚುನಾವಣಾ ಲಾಭ ಗಳಿಸಲು ಬಯಸುತ್ತಾರೆ ಮತ್ತು ತಮ್ಮ ಕೊಳಕು ರಾಜಕೀಯ ಸುಗ್ಗಿಯ ಪ್ರಚಾರಕ್ಕಾಗಿ ಅದನ್ನು ಸ್ಪ್ರಿಂಗ್ ಬೋರ್ಡ್ ಆಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.


ಪುಷ್ಪ ನಮನದ ನಂತರ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿದರು. ದೇವಟ್‌ಪರಂಬ್ ಸಮಾಧಿಯಲ್ಲಿ ಅಂತರರಾಷ್ಟ್ರೀಯ ಕೊಡವ ಜನಾಂಗೀಯ ಹತ್ಯೆಯ ಸ್ಮಾರಕ ನಿರ್ಮಿಸಬೇಕು. ಆಂತರಿಕ ರಾಜಕೀಯ ಸ್ವ-ನಿರ್ಣಯದೊಂದಿಗೆ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ನೀಡಬೇಕು. ಕೋವಿ ಹಕ್ಕನ್ನು ರಕ್ಷಿಸಿ ಕೊಡವ ಜನಾಂಗದ ಸಮಗ್ರ ಸಬಲೀಕರಣಕ್ಕಾಗಿ ಎಸ್‌ಟಿ ಟ್ಯಾಗ್ ಘೋಷಿಸಬೇಕು. ೨೩೭ ವರ್ಷಗಳ ಹಿಂದಿನ ದುರಂತದಿಂದ ಕೊಡವ ಜನಾಂಗ ಕ್ಷೀಣಿಸಿದೆ, ದುರ್ಬಲ ಸ್ಥಿತಿಯಲ್ಲಿರುವ ಅತಿ ಸೂಕ್ಷ್ಮ ಕೊಡವ ಜನಾಂಗವನ್ನು ಅಳಿವಿನ ಅಂಚಿನಿಂದ ಸಾಂವಿಧಾನಿಕವಾಗಿ ರಕ್ಷಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಮುದಗೇರಿನಾಡಿನ ಪುಲ್ಲೇರ ಸ್ವಾತಿ ಕಾಳಪ್ಪ, ಪಾಡಿನಾಡಿನ ಅರೆಯಡ ಸವಿತಾ ಗಿರೀಶ್, ಬಳ್ಳತ್ತನಾಡಿನ ಕರವಂಡ ಸರಸು, ನೂರಂಬದನಾಡಿನ ಕಲಿಯಂಡ ಪ್ರಕಾಶ್, ಪಾಡಿನಾಡಿನ ಬಾಚಮಂಡ ರಾಜ ಪೂವಣ್ಣ, ಮುದಗೇರಿನಾಡಿನ ಪುಲ್ಲೇರ ಕಾಳಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಸಾಂಕೇತಿಕವಾಗಿ ಕೋವಿಗಳನ್ನು ಇಟ್ಟು ಹಕ್ಕನ್ನು ಪ್ರತಿಪಾದಿಸಲಾಯಿತ್ತಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಮೌನ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net