

ಮಡಿಕೇರಿ: ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು ಕೊಡವರು ಎಂದು ನಮೂದಿಸಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಕೊಡಗರು ಪದ ಬಳಕೆಯನ್ನು ಕೈಬಿಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಈ ಸಂದರ್ಭ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ, ೨೦೧೦ ರಲ್ಲಿ ಆಯೋಗವು ಕೊಡಗರು ಬದಲಿಗೆ ಕೊಡವರು ಎಂದು ಸರಿಪಡಿಸಲು ಶಿಫಾರಸ್ಸು ಮಾಡಿದೆ. ಸರ್ಕಾರದ ಆದೇಶದ ಹೊರತಾಗಿಯೂ ಇದುವರೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ ಎಂದು ಗಮನ ಸೆಳೆದರು.
ಈ ವಿಚಾರದಲ್ಲಿ ೨೦೧೪ ರಲ್ಲಿ ಸಿಎನ್‌ಸಿ ಹೈಕೋರ್ಟ್ ಮೊರೆ ಹೋಗಿತ್ತು. ಇದರ ಪರಿಣಾಮ ೨೦೨೧ ಡಿ೮ ರಂದು ಕೊಡವ ಪದ ಬಳಕೆ ಮಾಡುವಂತೆ ಕೋರ್ಟ್ ಮಹತ್ವದ ತೀರ್ಪು ನೀಡಿತು. ಇದು ತ್ವರಿತವಾಗಿ ಅನುಷ್ಠಾಗೊಳ್ಳಲು ಆಯೋಗ ಮಧ್ಯ ಪ್ರವೇಶ ಮಾಡಬೇಕೆಂದು ನಾಚಪ್ಪರವರು ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಮಾಡಿದರು.