ಡಾ.ಸುಬ್ರಮಣಿಯನ್ ಸ್ವಾಮಿರನ್ನು ಭೇಟಿಯಾದ ಸಿಎನ್‌ಸಿ ನಿಯೋಗ

MDK04
Published on

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ನಿಯೋಗ ಮಾಜಿ ಕೇಂದ್ರ ಸಚಿವ ಹಾಗೂ ಖ್ಯಾತ ಅರ್ಥ ಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿರವರನ್ನು ಭೇಟಿಯಾಗಿ ಸ್ವಾಯತ್ತ ಕೊಡವ ಲ್ಯಾಂಡ್ ಬೇಡಿಕೆಯ ಕುರಿತು ಚರ್ಚಿಸಿತು.


ರೇವ ಯೂನಿವರ್ಸಿಟಿ-ಬ್ಯುಸಿನೆಸ್ ಸ್ಕೂಲ್‌ನಲ್ಲಿ ಡಾ.ಸ್ವಾಮಿ, ವಿಹೆಚ್‌ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಹಾಗೂ ಸುಪ್ರೀಂ ಕೋರ್ಟ್ ವಕೀಲ ಸತ್ಯ ಸಬರ್ವಾಲ್ ಅವರನ್ನು ಭೇಟಿಯಾದ ಸಿಎನ್‌ಸಿ ನಿಯೋಗ ಕೊಡವ ನ್ಯಾಷನಲ್ ಡೇ ಯಲ್ಲಿ ನೀಡಿದ ಭರವಸೆಯಂತೆ ಕೊಡವ ಲ್ಯಾಂಡ್ ಕುರಿತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿತು.


ನಂತರ ಮಾತನಾಡಿದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ನ್ಯಾಯಾಲಯದ ರಜೆ ಮುಗಿದ ನಂತರ ರಿಟ್ ಅರ್ಜಿಯನ್ನು ಸಲ್ಲಿಸುವ ಭರವಸೆ ದೊರೆತ್ತಿದೆ. ನಮ್ಮ ಬೇಡಿಕೆ ಈಡೇರುವ ಬಗ್ಗೆ ಸಂಪೂರ್ಣ ವಿಶ್ವಾಸವಿದ್ದು, ಡಾ.ಸ್ವಾಮಿ ಅವರನ್ನು ಮತ್ತೆ ಭೇಟಿಯಾಗಿ ನ್ಯಾಯಾಲಯದಲ್ಲಿ ಕೈಗೊಳ್ಳಬೇಕಾದ ಪ್ರಕ್ರಿಯೆ ಕುರಿತು ಗೌರವಯುತವಾಗಿ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.


ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯನ್ನು ಸಾಧಿಸುವ ಗಂಭೀರತೆ ಮತ್ತು ಬದ್ಧತೆಯನ್ನು ಡಾ.ಸ್ವಾಮಿ ಪ್ರದರ್ಶಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಂವಿಧಾನದ ೩೨ ನೇ ವಿಧಿಯಡಿಯಲ್ಲಿ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮೊದಲು ಕೇಂದ್ರ ಸರ್ಕಾರ ಮತ್ತು ಜಿಓಕೆ ಗೆ ವಿವರವಾದ ಮನವಿ ಸಲ್ಲಿಸಲಿದ್ದಾರೆ ಎಂದರು.


ಸಿಎನ್‌ಸಿ ಪ್ರಮುಖರಾದ ಕಲಿಯಂಡ ಮೀನಾ ಪ್ರಕಾಶ್, ಲೆಫ್ಟಿನೆಂಟ್ ಕರ್ನಲ್ ಪಾರ್ವತಿ, ಮುಕ್ಕಾಟೀರ ಶಾಂತಿ, ಕಲಿಯಂಡ ಪ್ರಕಾಶ್, ಅಲ್ಮಂಡ ಭೀಮಯ್ಯ, ವಾಟೇರಿರ ಪೂವಣ್ಣ, ಪಾಲಂಧೀರ ಜೋಯಪ್ಪ, ಬೊಳ್ಳಾರಪಂಡ ಮಾಚಯ್ಯ ಮತ್ತಿತರರು ನಿಯೋಗದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net