

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ೩೧ನೇ ವರ್ಷದ ಎಡಮ್ಯಾರ್ ೧ನ್ನು ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆಯ ಮೂಲಕ ಆಚರಿಸಿತು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಇತ್ತೀಚೆಗೆ ಆರ್‌ಎಂಸಿ ಯಾರ್ಡ್‌ನಿಂದ ಬಸ್ ನಿಲ್ದಾಣದವರೆಗೆ ಮುಖ್ಯ ಬೀದಿಗಳಲ್ಲಿ ಪಂಜಿನ ಮೆರವಣಿಗೆಯಲ್ಲಿ ಸಾಗಿದ ಸದಸ್ಯರು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.
ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಎನ್.ಯು.ನಾಚಪ್ಪ, ಪೊಂಬೊಳಕ್ ಮೆರವಣಿಗೆ ಆಚರಣೆಯು ಆದಿಮಸಂಜಾತ ಕೊಡವ ಜನಾಂಗೀಯ ಸಮುದಾಯದ ಶ್ರೀಮಂತ ಪರಂಪರೆ ಮತ್ತು ಕಾನೂನು ಬದ್ಧ ಸಾಂವಿಧಾನಿಕ ಹಕ್ಕುಗಳ ಕುರಿತು ಜಗತ್ತಿಗೆ ತಿಳಿಸುವ ಉದ್ದೇಶವಾಗಿದೆ ಎಂದರು.
ಎಡಮ್ಯಾರ್-೧ ಕೊಡವ ಜನಾಂಗದ ಸೌರಮಾನ ಹೊಸ ವರ್ಷವನ್ನು ಪ್ರಕೃತಿಯ ಚಕ್ರದಲ್ಲಿ ಮೊದಲ ಹಬ್ಬವೆಂದು ಪರಿಗಣಿಸಲಾಗಿದೆ. ಕೊಡವ ಮಂಗಳಕರ ಹೊಸ ವರ್ಷವನ್ನು ನಾವು ಧಾರ್ಮಿಕ ಉತ್ಸಾಹದಿಂದ ಆಚರಿಸುತ್ತಿದ್ದೇವೆ ಎಂದ ಅವರು, ಚಾರಿತ್ರಿಕ ದಂತಕತೆಗಳಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಎಂ.ಕೆ.ಗಾಂಧಿ ಅವರುಗಳ ಆದರ್ಶವಾದ ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಎಂ.ಕೆ.ಗಾಂಧಿಯವರು ತಮ್ಮ ಹಕ್ಕುಗಳನ್ನು ಸಾಧಿಸಲು ಇಡೀ ಜಗತ್ತಿಗೆ ಶಾಂತಿಯುತ ಮತ್ತು ಸತ್ಯವಾದ ಅಹಿಂಸಾತ್ಮಕ ಸತ್ಯಾಗ್ರಹವನ್ನು ಕಲಿಸಿದರು. ಸಿಎನ್‌ಸಿ ಈರ್ವರು ಶ್ರೇಷ್ಠ ಧಾರ್ಶನಿಕರ ಸಂದೇಶಗಳನ್ನು ಅಂತರ್ಗತ ಮಾಡಿಕೊಂಡಿದೆ. ಸಿಎನ್‌ಸಿ ತನ್ನ ಕಾನೂನುಬದ್ಧ ಆಕಾಂಕ್ಷೆಗಳನ್ನು ಸಾಧಿಸಲು ಸಂವಿಧಾನದ ತತ್ವಗಳನ್ನು ನಂಬುತ್ತದೆ. ತನ್ನ ಗೌರವಾನ್ವಿತ ಗುರಿಗಳನ್ನು ಸಾಧಿಸಲು ಎಂ.ಕೆ.ಗಾಂಧಿಯವರ ಮಾರ್ಗ ಮತ್ತು ಶಾಂತಿಯುತ ಸತ್ಯಾಗ್ರಹದ ಸಾರವನ್ನು ಅಳವಡಿಸಿಕೊಂಡಿದೆ. ಹಿಂಸಾಚಾರವಿಲ್ಲದೆ ಪ್ರತಿರೋಧ, ಶತ್ರುತ್ವಗಳಿಲ್ಲದೆ ಮುಖಾಮುಖಿ ಗೆಲುವಿನ ತನಕ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೊಟ್ಟಂಗಡ ಸವಿತಾ, ಶ್ರೀಮತಿ ಅರೆಯಡ ಸವಿತಾ, ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಪಟ್ಟಮಾಡ ಸೌಮ್ಯ ಪೃಥ್ವಿ, ಸರ್ವಶ್ರೀ ಕೊಲ್ಲೀರ ಗಯಾ, ಬಾಚರಣಿಯಂಡ ಚಿಪ್ಪಣ್ಣ, ಕೊಲ್ಲೀರ ಗೋಪಿ ಚಿಣ್ಣಪ್ಪ, ಕಂಬೀರಂಡ ಬೋಪಣ್ಣ, ಅಳಮಂಡ ಜೈ ಗಣಪತಿ, ಪುಚ್ಚಿಮಾಡ ಸುಭಾಷ್, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಅಜ್ಜಿಕುಟ್ಟೀರ ಲೋಕೇಶ್, ಪಟ್ಟಮಾಡ ಕುಶ, ಕಾಂಡೇರ ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.