ಸಿಎನ್‌ಸಿ ೨ನೇ ಹಂತದ ಪಾದಯಾತ್ರೆ ಮುಕ್ತಾಯ

MDK04
Published on

ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಕೊಡವ ಜನಜಾಗೃತಿ ಮೂಡಿಸುತ್ತಾ ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ೫ ಹಂತಗಳ ಪಾದಯಾತ್ರೆಯಲ್ಲಿ ೨ನೇ ಹಂತದ ಪಾದಯಾತ್ರೆ ವಿರಾಜಪೇಟೆ ತಾಲೂಕಿನ ಚೆಂಬೆಬೆಳಿಯೂರಿನ ಎಡೆನಾಲ್‌ನಾಡ್ ಮಂದ್‌ನಲ್ಲಿ ಮುಕ್ತಾಯಗೊಂಡಿತು.


ಮೂರನೇ ಹಂತದ ಪಾದಯಾತ್ರೆ ಅ.೭ ರಂದು ಬೆಳಗ್ಗೆ ೧೦ ಗಂಟೆಗೆ ಕಂಗಳತ್ತನಾಡ್(ಗೊಣಿಕೊಪ್ಪ-ಮಾಯಮುಡಿ)ನಿಂದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಚೆಂಬೆಬೆಳಿಯೂರಿನ ಎಡೆನಾಲ್‌ನಾಡ್ ಮಂದ್‌ನಲ್ಲಿ ಕೊಡವ ಜಾಗೃತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎನ್‌ಸಿ ಸಂಘಟನೆ ಅತ್ಯಂತ ತಾಳ್ಮೆಯಿಂದ ಸುದೀರ್ಘ ಹೋರಾಟ ನಡೆಸುವ ಮೂಲಕ ಕೊಡವರಿಗೆ ಸಾಂವಿಧಾನಿಕವಾಗಿ ದೊರಕಬೇಕಾದ ಹಕ್ಕುಗಳ ಪರ ಪ್ರತಿಪಾದಿಸುತ್ತಾ ಬಂದಿದೆ. ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗ ಕೊಡವರಿಗೆ ನ್ಯಾಯಯುತವಾಗಿ ಸಾಂವಿಧಾನಿಕ ಭದ್ರತೆ ಸಿಗುವ ಅಗತ್ಯವಿದೆ. ನಮ್ಮನ್ನು ಆಳುತ್ತಿರುವವರು ಈ ಸಣ್ಣ ಜನಾಂಗಕ್ಕೆ ರಕ್ಷಣೆ ನೀಡದಿದ್ದಲ್ಲಿ ಒಂದು ವಿಶಿಷ್ಟ ಸಂತತಿಯೇ ಅಳಿದು ಹೋಗುವ ಆತಂಕವಿದೆ. ಸಿಎನ್‌ಸಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಬೇರೆಯವರ ಹಕ್ಕುಗಳನ್ನು ಕಸಿಯುವ ಪ್ರಯತ್ನವನ್ನು ನಾವು ಮಾಡುತ್ತಿಲ್ಲ, ನಮ್ಮ ಹಕ್ಕಿಗಾಗಿ ನಿರಂತರ ಹೋರಾಟ ನಡೆಸುತ್ತಿದ್ದೇವೆ. ಇದರ ಭಾಗವಾಗಿ ಐದು ಹಂತಗಳಲ್ಲಿ ಜಿಲ್ಲೆಯಾದ್ಯಂತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.


ಈ ಪಾದಯಾತ್ರೆ ಹೆಚ್ಚು ಪರಿಣಾಮ ಬೀರಿದ್ದು, ಎರಡು ಹಂತಗಳನ್ನು ಈಗಾಗಲೇ ಮುಗಿಸಿದ್ದೇವೆ. ಇನ್ನು ಉಳಿದಿರುವ ಮೂರು ಹಂತಗಳಲ್ಲಿ ಎಲ್ಲರನ್ನೂ ಭೇಟಿಯಾಗಿ ಕೊಡವ ಲ್ಯಾಂಡ್ ಪರ ಹಕ್ಕೊತ್ತಾಯವನ್ನು ಮಂಡಿಸಲಾಗುವುದು ಎಂದು ನಾಚಪ್ಪ ಹೇಳಿದರು.


ಈ ಸಂದರ್ಭದಲ್ಲಿ ಕೋಲುವಂಡ ಪ್ರತಿಮಾ ಹರೀಶ್, ಪೋರುಕೊಂಡ ಪ್ರಕೃತಿ ಗಣಪತಿ, ಮಂಡೇಪಂಡ ಪ್ರಮೀಳ ಗಣಪತಿ, ನಡೆಪಂಡ ಶಾಂತಿ ಬೋಪಯ್ಯ, ಚೇಂದಂಡ ಲಿಲ್ಲಿ ಪೂವಯ್ಯ, ಎನ್.ಎಂ.ಲೀಲಾವತಿ, ಮಂಡೇಪಂಡ ಸುಮಿತ್ರ ಪಾರ್ವತಿ, ಕೋಳೇರ ಟೀನ ರನ್ನು, ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net