ಸಿಎನ್‌ಸಿ ಮೊದಲ ಹಂತದ ಪಾದಯಾತ್ರೆ ಮುಕ್ತಾಯ

cnc
Published on

ಮಡಿಕೇರಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ೯ ಪ್ರಮುಖ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆರಂಭಿಸಿರುವ ಪಾದಯಾತ್ರೆಯ ಮೊದಲ ಹಂತ ಕೆದಕಲ್ ಮೂಡಗೇರಿ ನಾಡ್ ಮಂದ್‌ನಲ್ಲಿ ಬುಧವಾರ ಪೂರ್ಣಗೊಂಡಿದೆ. ೨ನೇ ಹಂತದ ಪಾದಯಾತ್ರೆ ಸೆ.೨೭ ರಿಂದ ಕುರುಳಿ ಅಂಬಲ ಮಂದ್‌ನಿಂದ ಆರಂಭಗೊಳ್ಳಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಮೊದಲ ಹಂತದ ಕೊನೆಯ ದಿನದ ಪಾದಯಾತ್ರೆ ಮತ್ತು ಕೊಡವ ಜಾಗೃತಿ ಸಭೆ ಪಾಲೇರಿನಾಡ್ ಮಂದ್ ಹಾಗೂ ಮೂಡಗೇರಿ ನಾಡ್ ಮಂದ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಚಪ್ಪ, ಮೊದಲ ಹಂತದ ಪಾದಯಾತ್ರೆ ಯಶಸ್ವಿಯಾಗಿದ್ದು, ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಕೊಡವರ ರಕ್ಷಣೆಗಾಗಿ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಯ ಬೇಡಿಕೆ ಈಡೇರುವವರೆಗೆ ಸಿಎನ್‌ಸಿ ಸಂಘಟನೆ ಶಾಂತಿಯುತ ಹೋರಾಟ ಮುಂದುವರೆಸಲಿದೆ. ಕೊಡವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಐದು ಹಂತಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡಿದ್ದು, ಮೊದಲ ಹಂತ ಈಗಾಗಲೇ ಪೂರ್ಣಗೊಂಡಿದೆ. ಉಳಿದಿರುವ ನಾಲ್ಕು ಹಂತಗಳ ಪಾದಯಾತ್ರೆಗೆ ಸರ್ವ ಕೊಡವರು ಸಹಕರಿಸುವಂತೆ ಮನವಿ ಮಾಡಿದರು.


ಪಾಲೇರಿನಾಡ್ ಮಂದ್‌ನಲ್ಲಿ ಮರುವಂಡ ಸತ್ಯ ಕಾರ್ಯಪ್ಪ, ಬಿಜ್ಜಂಡ ಪೊನ್ನಪ್ಪ, ಮುದ್ದುರ ಗಣಪತಿ, ಮುಲುವೆರ ಬಿದ್ದಪ್ಪ, ಒಡ್ಡಚೆಟ್ಟಿರ ತಮ್ಮಯ್ಯ, ಮರುವಂಡ ಸೋಮಣ್ಣ, ಮುಲುವೆರ ಅಯ್ಯಪ್ಪ, ಅಯ್ಯಕುಟ್ಟೀರ ಮಾದಪ್ಪ, ಮುದ್ದುರ ಪೊನ್ನಣ್ಣ, ಅಯ್ಯಕುಟ್ಟೀರ ತಿಮ್ಮಯ್ಯ, ಅಯ್ಯಕುಟ್ಟೀರ ಗಗನ್ ಸುಬ್ಬಯ್ಯ, ಅಯ್ಯಕುಟ್ಟೀರ ಸದಾ ಮುತ್ತಪ್ಪ, ಮತ್ತಿತರರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.


೨ನೇ ಹಂತದ ಪಾದಯಾತ್ರೆ: ಎರಡನೇ ಹಂತದ ಯಾತ್ರೆಯಲ್ಲಿ ಸೆ.೨೭ ರಂದು ಬೆಳಗ್ಗೆ ೯ ಗಂಟೆಗೆ ಮತ್ತೆ ಮಡಿಕೇರಿ ತಾಲೂಕು ಪೊರೆನಾಲ್‌ನಾಡ್ + ನೂರೊಕ್ಕನಾಡ್ ಕುರುಳಿ ಅಂಬಲ ಮಂದ್‌ನಿಂದ ಪುನರಾರಂಭಗೊಳ್ಳಲಿದೆ. ನಂತರ ನೆಲ್ಲಿಯಪುದಿಕೇರಿನಾಡ್ ಮಧ್ಯಾಹ್ನ ೧೨ ಗಂಟೆಗೆ ಕಟ್ಟೆಮಾಡ್, ೩.೩೦ ಗಂಟೆಗೆ ಅರೆಕಾಡ್ ಮಂದ್‌ನಲ್ಲಿ ಕಾರ್ಯಕ್ರಮ, ಸೆ.೨೮ ರಂದು ಬೆಳಗ್ಗೆ ೧೦ಕ್ಕೆ ಕಾಣತ್ತ್ ಮೂರ್ನಾಡ್(ಮೂರ್ನಾಡ್-ಐಕೊಳ) ಮಧ್ಯಾಹ್ನ ೩ ಗಂಟೆಗೆ ಪಾಲಂದ ಮಂದ್ ಹಾಲುಗುಂದ, ಸಂಜೆ ೫.೩೦ ಗಂಟೆಗೆ ಚೆಂಬೆಬೆಳಿಯೂರ್, ಸೆ.೨೯ ರಂದು ಬೆಳಗ್ಗೆ ೧೦ ಗಂಟೆಗೆ ಎಡೆನಾಲ್‌ನಾಡ್, ೨ ಗಂಟೆಗೆ ಕಳ್ಳಿರ ಬಾಣೆ ಮಂದ್ ಉಮ್ಮತನಾಡ್ ಅಮ್ಮತ್ತಿ-ಬಿಳುಗುಂದದಲ್ಲಿ ನಡೆಯಲಿದೆ ಎಂದು ನಾಚಪ್ಪ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net