ಜ.೨೫ಕ್ಕೆ ಕೊಡಗಿಗೆ ಸಿಎಂ ಭೇಟಿ

CM's visit to Kodagu on Jan. 25
Published on

ಮಡಿಕೇರಿ:

ಜ. ೨೫ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದು, ಜಿಲ್ಲೆಗೆ ಅತ್ಯಗತ್ಯವಾಗಿ ಬೇಕಿರುವ ಯೋಜನೆಗಳ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಸಲಹೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಾನೂನು ಕಾಲೇಜು ಇಲ್ಲದಿರುವುದರಿಂದ ಕಾನೂನು ಕಾಲೇಜು ಆರಂಭ ಸೇರಿದಂತೆ ಹಲವು ಯೋಜನೆಗಳ ಪ್ರಸ್ತಾವನೆಯ ಪಟ್ಟಿಮಾಡಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾನೂನು ಪದವೀಧರರಿಗೆ ಎರಡು ವರ್ಷದವರೆಗೆ ಪ್ರತಿ ತಿಂಗಳು ೧೦ ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಸೌಲಭ್ಯವಿದ್ದು, ಈ ಯೋಜನೆಗೆ ಜಿಲ್ಲೆಯಲ್ಲಿ ಅರ್ಹರು ಸಿಗುತ್ತಿಲ್ಲ ಎಂಬ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗಮನಕ್ಕೆ ತಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವ್ಯಾಪ್ತಿಯಲ್ಲಿ ಫಿಜಿಯೋ ಥೆರಫಿ ಕಾಲೇಜು ಇಲ್ಲದಿರುವ ಬಗ್ಗೆ ಗಮನ ಸೆಳೆದ ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಅವರಿಗೆ ಈ ಬಗ್ಗೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಲಹೆ ಮಾಡಿದರು.
ಕುಶಾಲನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಘಟಕ ಆರಂಭ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಗೆ ಶಿಷ್ಟಾಚಾರದಂತೆ ಸಿದ್ಧತೆ ಮಾಡಿಕೊಳ್ಳಲು ಡಾ.ಎನ್.ವಿ.ಪ್ರಸಾದ್ ಸೂಚಿಸಿದರು.

ಕೃಷಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ನಗರ ನೀರು ಪೂರೈಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನಗರಾಭಿವೃದ್ಧಿ ಕೋಶ, ಇಂದಿರಾ ಕ್ಯಾಂಟಿನ್, ಜಲಜೀವನ್ ಅಭಿಯಾನ, ಏತ ನೀರಾವರಿ, ಮತ್ತಿತರ ಇಲಾಖೆಗಳ ವ್ಯಾಪ್ತಿಯ ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಂಬಂಧಿಸಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಐಟಿಡಿಪಿ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹೀಗೆ ವಿವಿಧ ಇಲಾಖೆಗಳಿಗೆ ವಿದ್ಯಾರ್ಥಿ ನಿಲಯಕ್ಕೆ ನಿವೇಶನ ಬೇಕಿದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ನೋಂದಣಿಯಾಗದಿರುವವರು ಕೂರ್ಗ್‌ಹನಿ ಹೆಸರಿನಲ್ಲಿ ಜೇನು ತುಪ್ಪ ಮಾರಾಟ ಮಾಡುತ್ತಿದ್ದು, ಈ ಸಂಬಂಧ ’ಜಿಐ ಟ್ಯಾಗ್’ ಮಾಡಿಸುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸಲಹೆ ಮಾಡಿದರು. ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಬೇಕು, ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗಮನಹರಿಸಲಾಗಿದೆ. ಈ ಸಂಬಂಧ ಸಮಸ್ಯೆ ಇರುವುದನ್ನು ಗಮನಿಸಿ ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು. ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ವಸತಿ ಯೋಜನೆಯ ಅನುಷ್ಠಾನ, ಜಲಜೀವನ್ ಮಿಷನ್, ಗ್ರಾಮೀಣ ಕುಡಿಯುವ ನೀರು, ರಸ್ತೆ ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಜಿ.ಪಂ.ಉಪ ಕಾರ್ಯದರ್ಶಿ ಧನರಾಜ್ ಹಲವು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net