

ರಾಯಚೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಸಿದಂತೆ ಉಂಟಾಗಿರುವ ಬಿಕ್ಕಟ್ಟು ನಿವಾರಣೆಗೆ ಸಿಎಂ ಸಿದ್ದರಾಮಯ್ಯ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಈ ಹಿಂದೆ ಸಿಎಂ ಇದ್ದಾಗ ಬಂಗಾರಪ್ಪ ಕೈಗೊಂಡಿದ್ದಂತೆ ದಿಟ್ಟ ನಿರ್ಧಾರವನ್ನು ಸಿದ್ದರಾಮಯ್ಯ ಕೈಗೊಂಡರೆ ಅವರ ಬೆನ್ನಹಿಂದಿರುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಸ್ಥಳೀಯ ಸಚಿವ ಎನ್.ಎಸ್.ಬೋಸರಾಜು ನಿವಾಸದಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಅಂದು ಬಂಗಾರಪ್ಪ ಕಾವೇರಿ ನೀರು ಪ್ರಾಕಾರದ ನಿರ್ಧಾರಕ್ಕೆ ಸೆಡ್ಡು ಹೊಡದಿದ್ದರು. ಆದರೆ ಅಂದಿನ ಕಾನೂನು ಇಂದಿನ ಕಾನೂನು ಬೇರೆಯಾಗಿದೆ ಎಂದರು.
ಕಾನೂನಿಗೆ ವಿರುದ್ಧವಾಗಿ ಕ್ರಮಕೈಗೊಂಡರೆ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯ ಬಂಗಾರಪ್ಪ ತೆಗೆದುಕೊಂಡಿದ್ದಂತ ನಿರ್ಧಾರ ಕೈಗೊಳ್ಳುವ ಸಮಯ ಬಂದರೆ ನಾವೆಲ್ಲ ಅವರೊಟ್ಟಿಗೆ ಇರುತ್ತೇವೆ. ಸಿಎಂ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆಯಿದೆ.
ವರ್ಗಾವಣೆಗೊಂಡ ಶಿಕ್ಷಕರನ್ನು ಆದೇಶ ಉಲ್ಲಂಸಿ ಹಣ ಪಡೆದು ಕರ್ತವ್ಯದಿಂದ ಬಿಡುಗಡೆಗೊಳಿಸಿರುವ ಕುರಿತು ಪರಿಶೀಲನೆ ನಡೆಸಲಾಗುವುದು. ಈ ಬಗ್ಗೆ ವರದಿ ತರಿಸಿಕೊಂಡು ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು.
ಶಾಲೆಗಳಲ್ಲಿ ಮಕ್ಕಳು ದುಡಿಯಲು ಹೋಗುತ್ತಿರುವುದರಿಂದ ಹಾಜರಾತಿ ಕಡಿಮೆಯಿದ್ದರೂ ಬಿಸಿಯೂಟದ ಮಕ್ಕಳ ಹಾಜರಾತಿ ಹಾಕುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಬಹಳಷ್ಟು ಶಾಲಾ ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಿಸಿ 8,500 ಕೊಠಡಿಗಳ ನಿರ್ಮಾಣ ಮಂಜೂರಾತಿ ನೀಡಲಾಗುತ್ತಿದೆ.
ರಾಜ್ಯದಲ್ಲಿ ವಿಧಾನಸಭೆ ಕ್ಷೇತ್ರಕ್ಕೆ ತಾಲ ಮುರ‌್ನಾಲ್ಕರಂತೆ ಕೆಪ್ಲಸ್ ಮಾದರಿ ಶಾಲೆ ತೆರೆಯಲು ನಿರ್ಧರಿಸಲಾಗಿದ್ದು, ಸಿಎಸ್‌ಆರ್ ಅನುದಾನದಡಿ ಮಾರ್ಚ್ ಅಥವಾ ಏಪ್ರಿಲ್ ಅಂತ್ಯದೊಳಗೆ ಶಾಲೆಗಳ ಆರಂಭಿಸಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು. ಸಚಿವ ಎನ್.ಎಸ್.ಬೋಸರಾಜು ಉಪಸ್ಥಿತರಿದ್ದರು.