

ಬೆಂಗಳೂರು: ರಾಜಧಾನಿಯಲ್ಲಿ ರಸ್ತೆಗುಂಡಿ ಅವ್ಯವಸ್ಥೆ ಬಗ್ಗೆ ಐಟಿ ಕಂಪನಿಗಳು ಅಸಮಾಧಾನ ವ್ಯಕ್ತಪಡಿಸಿದ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಶನಿವಾರ ದಿಢೀರ್ ನಗರ ಪ್ರದಕ್ಷಿಣೆ ನಡೆಸಿದರು.
ಈ ವೇಳೆ ಹದಗೆಟ್ಟ ರಸ್ತೆಗುಂಡಿಯನ್ನು ತಿಂಗಳದೊಳಗೆ ಮುಚ್ಚಬೇಕು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳಿಗೆ ಗಡುವು ಕೊಟ್ಟಿದ್ದಾರೆ. ಅಲ್ಲದೆ, ಸಮರ್ಪಕವಾಗಿ ನಿರ್ವಹಣೆ ಮಾಡದಿರುವ ಹಿನ್ನೆಲೆಯಲ್ಲಿ ವೈಟ್‌ಟಾಪಿಂಗ್ ಗುತ್ತಿಗೆದಾರರ ಮತ್ತು ಇಂಜಿನಿಯರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ತೆಗೆದುಕೊಳ್ಳುವಂತೆ ಸಿಎಂ ಸೂಚಿಸಿದರು. ಕರ್ತವ್ಯ ನಿರ್ಲಕ್ಷ್ಯ ಹಿನ್ನೆಲೆಯಲ್ಲಿ ಹೆಣ್ಣೂರು-ಬಾಗಲೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ನ್ನು ಅಮಾನತ್ತುಗೊಳಿಸಿದರು.
ಸಚಿವರಾದ ಕೆ.ಜೆ.ಜಾರ್ಜ್, ಭೈರತಿ ಸುರೇಶ್, ಜಿಬಿಎ, ಜಲಮಂಡಲಿ ಸೇರಿ ಇತರ ಇಲಾಖೆ ಅಧಿಕಾರಿಗಳೊಂದಿಗೆ ಕಾವೇರಿಯಿಂದ ನಗರದ ಪ್ರದಕ್ಷಿಣೆ ಆರಂಭಿಸಿದ ಸಿಎಂ, ಬಳ್ಳಾರಿ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತ ಬಳಿ ಭೇಟಿ ನೀಡಿದರು. ಈ ವೇಳೆ ರಸ್ತೆ ಮೇಲೆ ನಿಲ್ಲದಂತೆ ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಈ ವೃತ್ತದಲ್ಲಿನ ರಸ್ತೆ ಕಾಮಗಾರಿಯನ್ನು ರಾತ್ರಿ ವೇಳೆಗೆ ಮುಗಿಸಬೇಕು ಎಂದು ಜಿಬಿಎ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗರಂ ಆದ ಸಿಎಂ:
ರಿಂಗ್ ರಸ್ತೆಯ ಬದಿ ಸಿಸಿ ಕ್ಯಾಮರಾ ಇಲ್ಲದಿರುವ ಜಾಗದಲ್ಲಿ ಹಳೆ ಕಟ್ಟಡ ತ್ಯಾಜ್ಯ ಸುರಿದಿರುವುದನ್ನು ಗಮನಿಸಿದ ಸಿದ್ದರಾಮಯ್ಯ, ತಮ್ಮ ವಾಹನ ಚಾಲಕ ನವೀನ್‌ಗೆ ಕಾರು ನಿಲ್ಲಿಸುವಂತೆ ಸೂಚಿಸಿದರು. ಕಾರಿನಿಂದ ಇಳಿದ ಸಿಎಂ ಈ ಜಾಗದಲ್ಲಿ ತ್ಯಾಜ್ಯ ಸುರಿದಿರುವವರನ್ನು ಪತ್ತೆ ಹಚ್ಚಿ ಅವರ ವಾಹನ ಜಪ್ತಿ ಮಾಡಿ ಕೇಸು ದಾಖಲಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಅಧಿಕಾರಿಗಳೇನು ರಸ್ತೆಯಲ್ಲಿ ಕಣ್ಣು ಮುಚ್ಚಿಕೊಂಡು ಓಡಾಡುತ್ತಿದ್ದೀರಾ? ರಸ್ತೆಗೆ ತ್ಯಾಜ್ಯ ಸುರಿದಿರುವುದನ್ನು ಗಮನಿಸಲು ಆಗೋದಿಲ್ಲವೇ? ಎಂದು ಬಿಬಿಎಂಪಿ, ಬಿಡಿಎ,ಟ್ರಾಫಿಕ್ ಪೊಲೀಸರನ್ನು ಖಾರವಾಗಿ ಪ್ರಶ್ನಿಸಿದರು. ಮೆಟ್ರೋ ಕಾಮಗಾರಿ ನಡೆಯುವ ಸಂದರ್ಭಗಳಲ್ಲಿ ಮೆಟ್ರೋ ಸಿಬ್ಬಂದಿ ಸರ್ವೀಸ್ ರಸ್ತೆಗಳ ನಿರ್ಲಕ್ಷ್ಯ ಮಾಡಬಾರದು. ರಸ್ತೆ ಬದಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇರಬೇಕು. ಹಾಳಾಗಿರುವ ವೈಟ್‌ಟಾಪಿಂಗ್ ರಸ್ತೆಯನ್ನು ತಕ್ಷಣ ದುರಸ್ತಿಗೊಳಿಸಬೇಕು. ಸರ್ವೀಸ್ ರಸ್ತೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಸಿಎಂ ಹೇಳಿದರು.
ಗುತ್ತಿಗೆದಾರರೇ ರಸ್ತೆ ನಿರ್ವಹಣೆ ಮಾಡಲಿ
ಬಳಿಕ ಹೆಣ್ಣೂರು ಮೇಲ್ಸೇತುವೆ ಬಳಿ ತೆರಳಿದ ಸಿಎಂ, ಮೇಲ್ಸೇತುವೆ ಕೆಳಗಡೆ ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದಿದ್ದು, ಅದರಲ್ಲಿ ಬೆಳೆದಿದ್ದ ಗಿಡಗಳನ್ನು ಕಂಡ ಅಸಮಾಧಾನ ವ್ಯಕ್ತಪಡಿಸಿದರು. ಇದು ಹಳೆಯ ತ್ಯಾಜ್ಯವಾಗಿದ್ದು, 24 ಗಂಟೆದೊಳಗೆ ತೆರವುಗೊಳಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು. ಹೆಣ್ಣೂರಿನ ಬಾಗಲೂರು ರಸ್ತೆಯಲ್ಲಿ ವೈಟ್ ಟಾಪಿಂಗ್‌ಗೆ ಆಯ್ಕೆ ಮಾಡಿಕೊಂಡಿದ್ದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರ ಹೊಣೆಯನ್ನು ಗುತ್ತಿಗೆದಾರರೇ ಹೊರಬೇಕು. ಒಮ್ಮೆ ವೈಟ್‌ಟಾಪಿಂಗ್‌ಗೆ ರಸ್ತೆಯನ್ನು ಒಪ್ಪಿಸಿದ ಮೇಲೆ ಆ ರಸ್ತೆಗಳ ನಿರ್ವಹಣೆಗೆ ಬಿಬಿಎಂಪಿ ಹಣ ಕೊಡಲು ಬರುವುದಿಲ್ಲ. ಹಾಗಾಗಿ, ವೈಟ್ ಟಾಪಿಂಗ್ ಮುಗಿಯುವಾಗ 2-3 ವರ್ಷವಾಗುತ್ತದೆ. ಅಲ್ಲಿಯವರೆಗೂ ಗುತ್ತಿಗೆದಾರರೇ ರಸ್ತೆಗಳನ್ನು ನಿರ್ವಹಣೆ ಮಾಡಬೇಕು ಎಂದು ಸಿಎಂ ಹೇಳಿದರು.
ನೋಟಿಸ್ ಕೊಡಲು ಸೂಚನೆ
ವಾರ್ಡ್ ಸಂಖ್ಯೆ23 ರ ಘನ ತ್ಯಾಜ್ಯ ಸಂಗ್ರಹಣಾ ಕೇಂದ್ರದ ಒಳಗೆ ಇರಬೇಕಾದ ತ್ಯಾಜ್ಯ, ಸಂಗ್ರಹಣಾ ಕೇಂದ್ರದ ಹೊರಗೆ ಬಿದ್ದಿದ್ದ ರಾಶಿಯನ್ನು ಗಮನಿಸಿದ ಸಿಎಂ ಸಿಟ್ಟಾದರು. ಸಂಗ್ರಹಣಾ ಕೇಂದ್ರದ ಒಳಗೆ ಸಾಕಷ್ಟು ಜಾಗ ಖಾಲಿ ಇದೆ. ಆದರೂ, ತ್ಯಾಜ್ಯವನ್ನು ಕೇಂದ್ರದ ಒಳಗೆಡೆ ಇರಬೇಕಿತ್ತು. ಈ ಅವ್ಯವಸ್ಥೆಗೆ ಕಾರಣ ಮುಖ್ಯ ಇಂಜಿನಿಯರ್‌ರಾದ ಪ್ರಹ್ಲಾದ್, ರಾಘವೇಂದ್ರ ಪ್ರಸಾದ್‌ಗೆ ನೋಟಿಸ್ ನೀಡುವಂತೆ, ತುಷಾರ್‌ಗಿರಿನಾಥ್‌ಗೆ ಸೂಚಿಸಿದರು. ಪಣತ್ತೂರು ‘ಟಿ’ ಕ್ರಾಸ್ ಬಳಿ ರಸ್ತೆಯುದ್ದಕ್ಕೂ ಕಟ್ಟಡ ನಿರ್ಮಾಣದ ತ್ಯಾಜ್ಯ ಸುರಿಯಲಾಗುತ್ತಿದೆ. ಇದನ್ನು ತಡೆಯಲು ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಮಾರ್ಷಲ್ ನಿಯೋಜಿಸಿ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಜಿಬಿಎ ಆಯುಕ್ತರಿಗೆ ಸಿಎಂ ಸೂಚಿಸಿದರು.
ಡಿಸಿಎಂ ಡಿಕೆಶಿ ಅನುಪಸ್ಥಿತಿ
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅನುಪಸ್ಥಿತಿಯಲ್ಲಿ ಸಿಎಂ ನಗರ ಪ್ರದಕ್ಷಿಣೆ ನಡೆಸಿದರು. ಶನಿವಾರ ಬೆಳಗ್ಗೆ ಡಿಕೆಶಿ, ಮಾಗಡಿ ರಸ್ತೆಯ ಸುಮನಹಳ್ಳಿ ಮೇಲ್ಸೇತುವೆ ರಸ್ತೆ ದುರಸ್ತಿ ಕಾಮಗಾರಿ ವೀಕ್ಷಿಸಿದ ಬಳಿಕ ಮಧ್ಯಾಹ್ನ, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಮನಗರದಲ್ಲಿ ಆಯೋಜಿಸಿದ್ದ ‘ರಾಮನಗರ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ’ ಸಭೆಗೆ ಹಾಜರಾಗಲು ತೆರಳಿದರು. ಬಳಿಕ ಸಿಎಂ ಸಿದ್ದರಾಮಯ್ಯ, ನಗರ ಪ್ರದಕ್ಷಿಣೆ ಮುಂದಾಗಿರುವುದು ಸಿಎಂ ಮತ್ತು ಡಿಸಿಎಂ ನಡುವೆ ಬಿರುಕು ಮೂಡಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗಳು ನಡೆದವು.
ನಗರದಲ್ಲಿ ರಸ್ತೆ ಗುಂಡಿಗಳಿರುವುದು ನಿಜ.ಆದರೆ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರಸ್ತೆ ಗುಂಡಿಗಳ ದುರಸ್ತಿಯಾಗಿದ್ದರೆ ರಸ್ತೆಗಳು ಇಂತಹ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಮಳೆಗಾಲ ಮುಗಿದ ಮುಂಚಿತವಾಗಿ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಕೆಲ ರಸ್ತೆಗಳ ಬದಿ ತ್ಯಾಜ್ಯ ಬಿಸಾಡಲಾಗುತ್ತಿದೆ. ಇದನ್ನು ತಡೆಯದಿದ್ದರೆ ಸಂಬಂಧಪಟ್ಟ ಕಮಿಷನರ್ ಹಾಗೂ ಇಂಜಿನಿಯರ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತೇವೆ.
| ಸಿದ್ದರಾಮಯ್ಯ, ಸಿಎಂ.