

ತುರುವೇಕೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ ಲಿಂಗಾಯತ ಸಮಾಜವನ್ನು ದಮನ ಮಾಡುತ್ತಿದ್ದಾರೆ, ಹಾಗಾಗಿ ಸಮುದಾಯದ ಅಸ್ತಿತ್ವಕ್ಕಾಗಿ ಹೋರಾಟ ಅನಿವಾರ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಂಘ&ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಹಾಗೂ ವೀರಯೋಧರಿಗಾಗಿ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2011ರ ಜನಗಣತಿಯಲ್ಲಿ 93 ಲಕ್ಷದಷ್ಟಿದ್ದ ವೀರಶೈವ ಲಿಂಗಾಯತರು ಸಿದ್ದರಾಮಯ್ಯರ ಜಾತಿಗಣತಿಯಲ್ಲಿ 75 ಲಕ್ಷಕ್ಕೆ ಇಳಿದಿದ್ದಾರೆ. ದೊಡ್ಡ ಸಮಾಜಗಳಲ್ಲಿ ಸಣ್ಣ ಉಪ ಪಂಗಡಗಳನ್ನು ಎತ್ತಿ ಕಟ್ಟಿ ಒಡೆದು ಹಾಕುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆ. ಜಾತಿ ಆಧಾರದಲ್ಲಿ ಬಜೆಟ್ನಿಂದ ದೊಡ್ಡ ಜಾತಿಗಳಿಗೆ ಪೆಟ್ಟು ಬೀಳಲಿದೆ ಎಂದು ಎಚ್ಚರಿಸಿದರು.
ಬಸವಣ್ಣನವರು ಇನ್ನೂ 10 ವರ್ಷಗಳ ಕಾಲ ಬದುಕಿದ್ದರೆ ರಾಷ್ಟ್ರವನ್ನು ಧರ್ಮ, ಜಾತಿಮುಕ್ತ ಮಾಡುತ್ತಿದ್ದರು. 8ನೇ ವರ್ಷದಿಂದಲೇ ಸಮಾಜ ಸುಧಾರಣೆ, ಜಾತಿ ಪದ್ಧತಿ, ತಾರತಮ್ಯ, ಮೇಲು&ಕೀಳು ವಿರುದ್ಧ ಹೋರಾಟಕ್ಕೆ ಜೀವನವನ್ನೇ ಮೀಸಲಿಟ್ಟಿದ್ದರು. ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಪ್ರಧಾನಿ ಮೋದಿಯವರೂ ಸಹ ಬಸವಣ್ಣನವರ ಅನುಯಾಯಿಗಳಾಗಿದ್ದು, ಅನುಭವ ಮಂಟಪದಂತೆ ನೂತನ ಪಾರ್ಲಿಮೆಂಟ್ ಭವನ ನಿರ್ಮಿಸಿದ್ದಾರೆ ಎಂದ ಎಂ.ಟಿ.ಕೃಷ್ಣಪ್ಪ ಅವರು, ತಾಲೂಕಿನಲ್ಲಿ ಸಿದ್ದರಾಮೇಶ್ವರ ಸಮುದಾಯ ಭವನದ ಆವರಣದಲ್ಲಿ ದೇವಾಲಯ ನಿಮಾರ್ಣಕ್ಕೆ 10 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು.
ವೀರ ಯೋಧರಿಗೆ ಬಲ ನೀಡಲು ಬೆಳಗ್ಗೆಯಿಂದಲೇ ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶ್ರೀ ಶಿವಯೋಗಿಶ್ವರ ಸ್ವಾಮೀಜಿ ಹಾಗೂ ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಹಾಸಂಸ್ಥಾನ ಮಠದ ಶ್ರೀ ವಿಭವವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿತು. ಇನ್ನು ಯುವ ಘಟಕದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು. ಅಕ್ಕನ ಬಳಗ ವಚನ ಗಾಯನ ನಡೆಸಿಕೊಟ್ಟಿತು.
ಕಿರಿಯಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ವೀರಶೈವ ಲಿಂಗಾಯಿತ ತಾಲೂಕು ಅಧ್ಯಕ್ಷ ಎಸ್.ಎಂ.ಕುಮಾರಸ್ವಾಮಿ, ಪಪಂ ಅಧ್ಯಕ್ಷೆ ಸ್ವಪ್ನಾ ನಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು, ವಿಶ್ವನಾಥ ಅಪ್ಪಾಜಪ್ಪ, ಕೋಶಾಧ್ಯಕ್ಷ ಆರ್.ಬಿ.ಜಯಣ್ಣ, ಕಾರ್ಯದರ್ಶಿ ಟಿ.ಎಂ.ವಿಜಯಕುಮಾರ್, ನೊಳಂಬ ಲಿಂಗಾಯತ ಸಂಘದ ನಿರ್ದೇಶಕ ಎಂ.ದೇವರಾಜು, ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಎಲ್.ದರ್ಶನ್, ರಾಜ್ಯ ಕಾರ್ಯದರ್ಶಿ ಎಚ್.ಎಸ್.ಶ್ರೀಧರ್, ಕೋಳಘಟ್ಟಯೋಗೀಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಮತಾ ದಿವಾಕರ್, ತಾಲೂಕು ಅಧ್ಯಕ್ಷೆ ಪುಷ್ಪಾವತಿ, ತಾಲೂಕು ಘಟಕದ ಪ್ರದಾನ ಕಾರ್ಯದರ್ಶಿ ಶಿವಾನಂದಯ್ಯ, ಕೋಶಾಧ್ಯಕ್ಷ ಡಿ.ಎಂ.ಸುರೇಶ್, ಉಪನ್ಯಾಸಕ ದಿಬ್ಬದಹಳ್ಳಿ ಶ್ಯಾಮಸುಂದರ್, ಯಡಗಿಹಳ್ಳಿವಿಶ್ವನಾಥ್, ಶರಣೆ ರೂಪಶ್ರೀ ಇದ್ದರು.
ಪ್ರತಿಭಟಿಸದಿರಲು ಆಮಿಷ : ಹೇಮಾವತಿ ಲಿಂಕ್ ಕೆನಾಲ್ನಿಂದ ತಾಲೂಕಿನ ದಂಡಿನಶಿವರ ಹೋಬಳಿ ಹಾಗೂ ಗುಬ್ಬಿ ತಾಲೂಕಿಗೆ ಹೊಡೆತ ಬೀಳಲಿದೆ. ಲಿಂಕ್ಕೆನಾಲ್ ವಿರುದ್ಧ ಮೇ 31 ರಂದು ಹೋರಾಟ ಹಮ್ಮಿಕೊಂಡಿದ್ದು, ತಾಲೂಕಿನ ಎಲ್ಲ ರೈತರು, ಸಂಘ&ಸಂಸ್ಥೆ ಮುಖಂಡರು ಭಾಗವಹಿಸಬೇಕು ಎಂದು ಕರೆ ನೀಡಿದರು. ಈಗಾಗಲೇ ಹೋರಾಟ ಕೈ ಬಿಡಿ, ನಿಮಗೆ ಅನುದಾನ ನೀಡುತ್ತೇವೆ ಎಂದು ಕೆಲ ಸಚಿವರು ಕರೆ ಮಾಡುತ್ತಿದ್ದಾರೆ. ಆದರೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ರೈತರ ಹಿತಕ್ಕಾಗಿ ಜೈಲಿನಲ್ಲಿ ಮುದ್ದೆ ಮುರಿಯಲು ಸಿದ್ಧರಾಗಿದ್ದೇನೆ ಎಂದು ಸರ್ಕಾರವನ್ನು ಎಂ.ಟಿ.ಕೃಷ್ಣಪ್ಪ ಹೇಳಿದರು.