ಮೆಟ್ರೋ ವಿಸ್ತರಿತ ಮಾರ್ಗದಲ್ಲಿ ಸುರಕ್ಷತಾ ಪರೀಕ್ಷೆ ಯಶಸ್ವಿ; ನಾಗಸಂದ್ರ-ಮಾದಾವರ ಸೇವೆ ಸನ್ನಿಹಿತ

Metro
Published on

ಬೆಂಗಳೂರು: ನಮ್ಮ ಮೆಟ್ರೋ ನಾಗಸಂದ್ರ-ಮಾದಾವರ ವಿಸ್ತರಿತ ಹಸಿರು ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ದಿನಗಳು ಸಮೀಪಿಸುತ್ತಿವೆ. ಇದರ ಭಾಗವಾಗಿ ದೆಹಲಿಯಿಂದ ಮೆಟ್ರೋ ರೈಲ್ವೆ ಸುರಕ್ಷತಾ ಆಯೋಗದ ಅಧಿಕಾರಿಗಳು ಗುರುವಾರ ನಡೆಸಿದ ಸುರಕ್ಷತಾ ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.

ಸುರಕ್ಷತಾ ಅಧಿಕಾರಿಗಳ ತಂಡ ನಾಗಸಂದ್ರ& ಮಾದಾವರ ನಿಲ್ದಾಣಗಳ ನಡುವೆ ಸಿಗ್ನಲಿಂಗ್​, ಟ್ರ್ಯಾಕ್​, ಸುರಕ್ಷತೆ, ವಿದ್ಯುತ್​, ನಿಲ್ದಾಣದಲ್ಲಿರುವ ಸೌಕರ್ಯಗಳು ಇತ್ಯಾದಿ ಬಗ್ಗೆ ತಪಾಸಣೆ ನಡೆಸಿದ್ದಾರೆ. ವರದಿ ಸಲ್ಲಿಕೆಯಾದ ನಂತರದ ಪ್ರಮಾಣಪತ್ರ ದೊರೆತ ಬಳಿಕ ಅಧಿಕೃತವಾಗಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ಹಸಿರು ಮಾರ್ಗದಲ್ಲಿ ಸದ್ಯ 29 ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚರಿಸುತ್ತಿದೆ. ವಿಸ್ತರಿತ ಮಾರ್ಗದಲ್ಲಿ ಸೇವೆ ಆರಂಭಗೊಳ್ಳುತ್ತಿದ್ದಂತೆ ಒಟ್ಟು ನಿಲ್ದಾಣಗಳ ಸಂಖ್ಯೆ 32ಕ್ಕೆ ಏರಿಕೆಯಾಗಲಿದೆ. 298 ಕೋಟಿ ರೂ. ವೆಚ್ಚದ ವಿಸ್ತರಿತ ಮಾರ್ಗವು ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಿಲ್ದಾಣಗಳನ್ನು ಹೊಂದಿದೆ. ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸಲಿದೆ. ಇದರಿಂದ ನಾಗಮಂಗಲ ಭಾಗದಿಂದ ಬಸ್​ ಮೂಲಕ ನಗರಕ್ಕೆ ಬರುವವವರಿಗೆ ಹೆಚ್ಚು ಅನುಕೂಲವಾಗಲಿದೆ.

ಆರಂಭದಿಂದಲೂ ಹಿನ್ನಡೆ

ನಾಗಸಂದ್ರದಿಂದ 3.7 ಕಿ.ಮೀ. ಹಸಿರು ಮಾರ್ಗದ ವಿಸ್ತರಣಾ ಕಾಮಗಾರಿ 2017ರಲ್ಲಿ ಆರಂಭಗೊಂಡಿತು. ಯೋಜನೆಯಂತೆಯೇ ಆಗಿದ್ದರೆ 2019ರಲ್ಲಿ ಪೂರ್ಣಗೊಳ್ಳಬೇಕಿತ್ತು. ಭೂಸ್ವಾಧಿನ ಪ್ರಕ್ರಿಯೆ ವಿಳಂಬ ಹಾಗೂ ಕರೊನಾ ಲಾಕ್​ಡೌನ್​ ಪರಿಣಾಮ ಹಿನ್ನಡೆಯಾಯಿತು. ಕಾಮಗಾರಿ ಅಂತಿಮ ಹಂತದಲ್ಲಿದ್ದ ಸಂದರ್ಭ ಹಿಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಿಂದಾಗಿ ಕಾರ್ಮಿಕರ ಅಲಭ್ಯತೆ ಎದುರಾಗಿತ್ತು. ಇದಲ್ಲದೆ ಕಚ್ಚಾ ವಸ್ತುಗಳನ್ನು ಪೂರೈಸಲು ಗುತ್ತಿಗೆ ಪಡೆದಿದ್ದ ಕಂಪನಿ ಉತ್ಪನ್ನಗಳನ್ನು ಪೂರೈಸದ ಪರಿಣಾಮ ಒಪ್ಪಂದ ರದ್ದುಗೊಂಡಿತು. ಬಳಿಕ ನೈಸ್​ ರಸ್ತೆಯ ಮೇಲೆ ಮಾರ್ಗ ನಿರ್ಮಿಸಲು 67.65 ಲ ರೂ. ಪಾವತಿಸಿ ಅನುಮತಿ ಪಡೆಯಬೇಕಾಗಿ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net